ಮತದಾನ ಖಾತ್ರಿ ಯಂತ್ರದಿಂದ ಮತದಾರರ ವಿಶ್ವಾಸ ಹೆಚ್ಚಳ : ಜಿಲ್ಲಾಧಿಕಾರಿ ಎಂ. ಕನಗವಲ್ಲಿ

ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಮತದಾರರ ಮತ ಖಾತ್ರಿಪಡಿಸುವ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದ್ದು, ಮತದಾರರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ. ಕನಗವಲ್ಲಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ವಿವಿ ಪ್ಯಾಟ್‌ಗಳ ಬಳಕೆ ಕುರಿತಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿತೆ ನೀಡಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಈ ಹಿಂದೆ ಮತದಾನ ಸಂದರ್ಭದಲ್ಲಿ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಮಾತ್ರ ಬಳಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯದಲ್ಲಿನ ಚುನಾವಣೆಯಲ್ಲಿ ಮತದಾರರ ಮತ ಖಾತ್ರಿ ಪಡಿಸುವ ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ಜಿಲ್ಲೆಗೆ ಪೂರೈಕೆಯಾದ ಎಲ್ಲ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳನ್ನು ಬಿ.ಇ.ಎಲ್. ಇಂಜನೀಯರ್‌ಗಳ ತಂಡ ಪರಿಶೀಲನೆ ನಡೆಸಿ ಪ್ರಮಾಣಿಕರಿಸಿದೆ ಎಂದು ತಿಳಿಸಿದರು. ವಿವಿ ಪ್ಯಾಟ್ (ಗಿoಣeಡಿ-veಡಿiಜಿieಜ ಠಿಚಿಠಿeಡಿ ಚಿuಜiಣ ಣಡಿಚಿiಟ) ಬಳಕೆಯಿಂದ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ಮತದಾನ ಮಾಡಿದ ಕ್ಷಣದಲ್ಲಿ ವೀಕ್ಷಿಸಬಹುದಾಗಿದೆ. ಬ್ಯಾಲೆಟ್ ಯೂನಿಟ್‌ನಲ್ಲಿ ಮತಗುಂಡಿ ಒತ್ತಿದ ನಂತರ, ಮತದಾರ, ತಾನು ಮತದಾನ ಮಾಡಿದ ವಿವರ ವಿವಿಪ್ಯಾಟ್‌ನಲ್ಲಿ ಏಳು ಸೆಕೆಂಡ್‌ವರೆಗೆ ಪ್ರದರ್ಶನಗೊಳ್ಳಲಿದೆ. ಇದನ್ನು ಮತ ಚಲಾಯಿಸಿದ ಮತದಾರ ಮಾತ್ರ ವೀಕ್ಷಿಸಲು ಅವಕಾಶವಿರುತ್ತದೆ. ಇದರಿಂದ ಯಾವುದೇ ಗೊಂದಲ, ಸಮಸ್ಯೆ, ಅನುಮಾನಗಳು ಮತದಾರನಿಗೆ ಉಳಿಯುವುದಿಲ್ಲ. ತಾನು ಮತಚಲಾಯಿಸಿದ ವ್ಯಕ್ತಿ ಅಥವಾ ಚಿಹ್ನೆಗೆ ಮತದಾನವಾದ ಕುರಿತಂತೆ ಖಾತ್ರಿಪಡಿಸಿಕೊಂಡು ಮತಗಟ್ಟೆಯ ಕೊಠಡಿಯಿಂದ ತೆರಳಬಹುದಾಗಿದೆ.
ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಹಾಗೂ ವಿವಿಪ್ಯಾಟ್‌ಗಳು ಪ್ರತಿ ಮತಗಟ್ಟೆಗೆ ಪೂರೈಸಲಾಗುವುದು. ವಿವಿಪ್ಯಾಟ್‌ಗಳ ವಿ.ಎಸ್.ಡಿ. ಯೂನಿಟ್ ನಿರ್ವಹಣೆಗಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ಪ್ರತಿಮತಗಟ್ಟೆಗೆ ನಿಯೋಜಿಸಲಾಗುವುದು. ಮತದಾನ ಆರಂಭವಾಗುವ ಮುನ್ನ ಅಣಕು ಪ್ರದರ್ಶನದ ಮೂಲಕ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳ ಕಾರ್ಯ ನಿರ್ವಹಣೆ ಕುರಿತಂತೆ ವಿವಿಧ ಪಕ್ಷಗಳ ಮತಗಟ್ಟೆ ಏಜೆಂಟರುಗಳ ಎದುರಿಗೆ ಪ್ರದರ್ಶಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು.
ವಿವಿಪ್ಯಾಟ್‌ಗಳು ಅತ್ಯಂತ ವಿಶ್ವಾರ್ಹವಾಗಿವೆ. ಭಾರತ ಚುನಾವಣಾ ಆಯೋಗದ ಮಾರ್ಗದರ್ಶನದಲ್ಲಿ ಬಿ.ಇ.ಎಲ್. ಕಂಪನಿಯ ತಾಂತ್ರಿಕ ತಂಡ ಯಂತ್ರಗಳನ್ನು ಅಭಿವೃದ್ಧಿಪಡಿಸಿದೆ. ಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ಇದರಿಂದ ಮತದಾನ ವ್ಯವಸ್ಥೆಯ ಬಗ್ಗೆ ಮತದಾರರಿಗೆ ದೃಢವಿಶ್ವಾಸ ಬರಲಿದೆ ಎಂದು ತಿಳಿಸಿದರು. ಪ್ರತಿ ವಿವಿಪ್ಯಾಟ್‌ನಲ್ಲಿ ೧೫೦೦ ಮತಗಳನ್ನು ಮುದ್ರಿಸುವ ಸಾಮರ್ಥ್ಯ ಅಳವಡಿಸಲಾಗಿದೆ. ಈ ಕಾರಣಕ್ಕಾಗಿ ಒಂದು ಗ್ರಾಮೀಣ ಮತಗಟ್ಟೆಯಲ್ಲಿ ೧೨೫೦ ಹಾಗೂ ನಗರ ಮತಗಟ್ಟೆಗಳಲ್ಲಿ ೧೩೫೦ ಮತದಾರರಿಗೆ ಸೀಮಿತಗೊಳಿಸಿ ಮತಗಟ್ಟೆಯನ್ನು ರಚಿಸಲಾಗಿದೆ.
ಆರು ತಿಂಗಳ ಜೈಲು ಶಿಕ್ಷೆ: ಭಾರತ ಚುನಾವಣೆ ಆಯೋಗದಿಂದ ಪೂರೈಕೆಯಾಗಿರುವ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್‌ಗಳನ್ನು ಬಿ.ಇ.ಎಲ್.ತಾಂತ್ರಿಕ ಸಮಿತಿ ವಿವರವಾಗಿ ಪರಿಶೀಲಿಸಿ ಪ್ರಮಾಣಿಕರಿಸಿದೆ. ಮತದಾನ ಮಾಡುವ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಮತಯಂತ್ರದಲ್ಲಿ ನಾನು ಹಾಕಿದ ಮತದಾನ ಸರಿಯಾದ ವ್ಯಕ್ತಿಗೆ ತಲುಪಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರೆ ಅಂತಹ ವ್ಯಕ್ತಿಗೆ ಮತ್ತೊಮ್ಮೆ ಮತದಾನದ ಅವಕಾಶ ನೀಡಲಾಗುವುದು. ಆದರೆ ಆ ವ್ಯಕ್ತಿ ಮುಚ್ಚಳಿಕೆ ಬರೆದುಕೊಡಬೇಕಾಗುತ್ತದೆ. ಮರು ಮತದಾನ ಮಾಡುವ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿ ವೀಕ್ಷಣೆ ಮಾಡಲಿದ್ದಾರೆ. ವ್ಯಕ್ತಿ ಹಾಕಿದ ಮತ ಸರಿಯಾಗಿ ನಮೂದಾದರೆ ಆ ಸಂದರ್ಭದಲ್ಲಿ ಅನುಮಾನ ವ್ಯಕ್ತಪಡಿಸಿ ಮರು ಮತದಾನಕ್ಕೆ ಅವಕಾಶ ಪಡೆದ ಮತದಾರನಿಗೆ ಆರು ತಿಂಗಳ ಜೈಲುವಾಸ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ವಿವಿಪ್ಯಾಟ್‌ಗಳ ಬಳಕೆ, ಕಾರ್ಯನಿರ್ವಹಣೆ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್‌ಗಳ ಸಂಪರ್ಕ ಕುರಿತಂತೆ ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ವಿಜಯಕುಮಾರ್ ಹಾಗೂ ಪ್ರಭುರಾಜ ನಾಯಕ್ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಪ್ರಾತ್ಯಕ್ಷಿತೆ ನೀಡಿದರು. ಈ ಸಂದರ್ಭದಲ್ಲಿ ಅಣುಕು ಮತದಾನ ನಡೆಸಿ ವಿವಿಪ್ಯಾಟ್‌ನಲ್ಲಿ ಮತದಾನದ ಖಾತ್ರಿ ಕುರಿತಂತೆ ಮನವರಿಕೆ ಮಾಡಿಕೊಡಲಾಯಿತು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error

Related posts