ಮತಗಟ್ಟೆಗೆ ಹೋಗೋಣ-ಮತದಾನ ಮಾಡೋಣ ಕೊಪ್ಪಳದಲ್ಲಿ ಮತದಾರರನ್ನು ಸ್ವಾಗತಿಸುತ್ತಿದೆ ಸ್ವಾಗತ ಕಮಾನು


ಕೊಪ್ಪಳ ಮೇ. ವಿಧಾನಸಭಾ ಚುನಾವಣೆ ನಿಮಿತ್ಯ ಮೇ. 12 ರಂದು ಮತದಾನ ನಡೆಯಲಿದ್ದು, ಮತದಾರರನ್ನು ಮತಗಟ್ಟೆಗಳತ್ತ ತೆರಳುವಂತೆ ಉತ್ತೇಜಿಸಲು ಕೊಪ್ಪಳ ಜಿಲ್ಲಾಡಳಿತ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಬೃಹತ್ ಸ್ವಾಗತ ಕಮಾನು ‘ಮತಗಟ್ಟೆಗೆ ಹೋಗೋಣ- ಮತದಾನ ಮಾಡೋಣ’ ಎನ್ನುವ ಸಂದೇಶ ನೀಡುತ್ತಿದೆ.
ಪ್ರಸಕ್ತ ವಿಧಾನಸಭಾ ಚುನಾವಣೆ ನಿಮಿತ್ಯ ಯುವ ಮತದಾರರು, ವಿಕಲಚೇತನರು, ಮಹಿಳೆಯರು ಹೀಗೆ ಎಲ್ಲ ಬಗೆಯ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬಗೆ ಬಗೆಯ ಕಸರತ್ತು ಕೈಗೊಂಡಿದೆ. ಇದೀಗ ಕೊಪ್ಪಳ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಸ್ಟ್ಯಾಂಡ್ ಬಳಿ ಬೃಹತ್ ಸ್ವಾಗತ ಕಮಾನನ್ನು ನಿರ್ಮಿಸಿದ್ದು, ಈ ಸ್ವಾಗತ ಕಮಾನು ‘ಮತಗಟ್ಟೆಗೆ ಹೋಗೋಣ- ಮತದಾನ ಮಾಡೋಣ’ ಎನ್ನುವ ಸಂದೇಶವನ್ನು ಸಾರುತ್ತಿದೆ. ಕೊಪ್ಪಳ ನಗರದ ಪ್ರಮುಖ ರಸ್ತೆಯಾಗಿರುವ ರಾಷ್ಟ್ರೀಯ ಹೆದ್ದಾರಿ ಹೆಚ್ಚು ಜನ ಸಂಚಾರ ಹಾಗೂ ವಾಹನಗಳ ಸಂಚಾರ ದಟ್ಟಣೆ ಹೊಂದಿರುವ ಮಾರ್ಗವಾಗಿದೆ. ಮತದಾನ ಪ್ರಕ್ರಿಯೆ ಮೇ. 12 ರಂದು ನಡೆಯಲಿರುವುದರಿಂದ, ಮತದಾರರನ್ನು ಆಕರ್ಷಿಸಲು ಹಾಗೂ ಮತಗಟ್ಟೆಗಳತ್ತ ಮತದಾರರು ಆಸಕ್ತಿಯಿಂದ ತೆರಳುವಂತಾಗಲು ಜಿಲ್ಲಾಡಳಿತ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೃಹತ್ ಕಮಾನು ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದೆ. ಮೇ. 10 ರಂದು ರಾತ್ರೋ ರಾತ್ರಿ 76 ಅಡಿ ಅಗಲ ಹಾಗೂ 18 ಅಡಿ ಎತ್ತರದ ಈ ಸ್ವಾಗತ ಕಮಾನನ್ನು ನಿರ್ಮಿಸಿದ್ದು, ಇದರಲ್ಲಿನ ಸಂದೇಶಗಳೂ ಕೂಡ ಮತದಾರರನ್ನು ಜಾಗೃತಿ ಮೂಡಿಸುತ್ತಿವೆ. ಸ್ವಾಗತ ಕಮಾನಿನ ಮೇಲ್ಭಾಗದಲ್ಲಿ ದೊಡ್ಡ ಗಾತ್ರದ ಅಕ್ಷರಗಳಲ್ಲಿ ‘ಮತಗಟ್ಟೆಗೆ ಹೋಗೋಣ- ಮತದಾನ ಮಾಡೋಣ’ ಎನ್ನುವ ಸಂದೇಶದ ಜೊತೆಗೆ ಮತದಾರರನ್ನು ಜಾಗೃತಗೊಳಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಕೈಗೊಂಡ ಹಲವು ಪ್ರಮುಖ ಕಾರ್ಯಕ್ರಮಗಳ ಫೋಟೋಗಳನ್ನು ಕಮಾನಿಗೆ ಬಳಸಲಾಗಿದೆ. ಕಮಾನಿನ ಒಂದೆಡೆ ‘ನಮ್ಮ ಮತ- ನಮ್ಮ ಹಕ್ಕು’ ಎನ್ನುವ ಸಂದೇಶವಿದೆ. ಕಮಾನಿನ ಮಧ್ಯಭಾಗದಲ್ಲಿ ನನ್ನ ಮತ- ನನ್ನ ಧ್ವನಿ ಎನ್ನುವ ಸಂದೇಶವಿದ್ದರೆ, ಇನ್ನೊಂದು ಬದಿಗೆ ‘ಪ್ರಜಾ ಪ್ರಭುತ್ವ ನಮ್ಮಿಂದ- ಮತದಾನ ಹೆಮ್ಮೆಯಿಂದ’ ಎನ್ನುವ ಪ್ರೋತ್ಸಾಹದಾಯಕ ನುಡಿ ಸಂದೇಶವಿದೆ. ಸ್ವಾಗತ ಕಮಾನಿಗೆ ಜಿಲ್ಲೆಯ ಮತದಾರರ ಜಾಗೃತಿಯ ‘ವೋಟರ್ ಕುಮಾರ’ ಲಾಂಛನ ಹಾಗೂ ಈ ಬಾರಿಯ ವಿಧಾನಸಭೆ ಚುನಾವಣೆಗೆ ರಾಜ್ಯ ಆಯೋಗ ನೀಡಿರುವ ಕರ್ನಾಟಕ ನಕ್ಷೆಯ ಲಾಂಛನವನ್ನು ಬಳಸಲಾಗಿದೆ. ಇದೇ ರೀತಿಯ ಸಂದೇಶಗಳುಳ್ಳ ಕಮಾನನ್ನು ನಗರದ ಕಿನ್ನಾಳ ರಸ್ತೆಯ ರೈಲ್ವೆ ಕೆಳಸೇತುವೆ ಸ್ಥಳದಲ್ಲಿಯೂ ನಿರ್ಮಿಸಲಾಗಿದ್ದು, ಮತದಾರರಿಗೆ ಉತ್ತೇಜನ ನೀಡುತ್ತಿದೆ.
ಇದೇ ಮೇ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನ ಸುಗಮ ಹಾಗೂ ವ್ಯವಸ್ಥಿತವಾಗಿ ಜರುಗಲು ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಕೈಗೊಂಡಿದೆ. ಕೊಪ್ಪಳ ನಗರದ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಬಾರಿ ಬೃಹತ್ ಸ್ವಾಗತ ಕಮಾನನ್ನು ನಿರ್ಮಿಸಿ, ಮತದಾರರನ್ನು ಮತದಾನಕ್ಕೆ ಪ್ರೋತ್ಸಾಹಿಸುವಂತಹ ಪ್ರಯತ್ನ ಕೈಗೊಳ್ಳಲಾಗಿದೆ. ಮಹಿಳೆಯರನ್ನು ಮತದಾನದ ಮುಖ್ಯವಾಹಿನಿಗೆ ಸೆಳೆಯಲು ಪ್ರತಿ ಕ್ಷೇತ್ರದಲ್ಲಿ ಸಂಪೂರ್ಣ ಮಹಿಳಾ ಅಧಿಕಾರಿ, ಸಿಬ್ಬಂದಿಗಳನ್ನೇ ಹೊಂದಿರುವ ಸಖಿ (ಪಿಂಕ್) ಮತಗಟ್ಟೆಗಳನ್ನು ಸ್ಥಾಪಿಸಿ, ಮಹಿಳೆಯರನ್ನು ಮತದಾನಕ್ಕೆ ಉತ್ತೇಜನ ನೀಡಲಾಗಿದೆ. ಎಲ್ಲ ಮತದಾರರು ತಪ್ಪದೆ ತಮ್ಮ ಮತ ಚಲಾಯಿಸಿ, ಈ ಬಾರಿಯ ಚುನಾವಣೆಯನ್ನು ಯಶಸ್ವಿಯಾಗಿಸಿ ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು.

Please follow and like us:
error