ಮಕ್ಕಳ ಸಾಮರ್ಥ್ಯ ಗ್ರಹಿಸಿ ಪ್ರೋತ್ಸಾಹ ನೀಡಿ – ಎಸ್ಪಿ ರೇಣುಕಾ ಕೆ.ಸುಕುಮಾರ್


ಕೊಪ್ಪಳ : ಮಗುವಿಗೆ ಒಳ್ಳೆಯ ಶಾಲೆಗೆ ಕಳಿಸಿದ ತಕ್ಷಣ ಪಾಲಕರ ಜವಾಬ್ದಾರಿ ಮುಗಿಯಿತು ಎಂದಲ್ಲ. ಮಕ್ಕಳಿಗೆ ಮನೆಯಲ್ಲಿ ಎಂತಹ ವಾತಾವರಣ ಸೃಷ್ಠಿ ಮಾಡುತ್ತೇವೆ ಎನ್ನುವುದು ತುಂಬ ಮುಖ್ಯ ಮಕ್ಕಳ ಸರ್ವೋತಮುಖ ಬೆಳವಣಿಗೆಗೆ ಮನೆಯ ವಾತಾವರಣವೂ ಮುಖ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀಮತಿ ರೇಣುಕಾ ಕೆ.ಸುಕುಮಾರ್ ಹೇಳಿದರು. ಅವರು ಕಿನ್ನಾಳ ಗ್ರಾಮದಲ್ಲಿ ನಡೆದ ಸೇವಾ ಸಂಸ್ಥೆಯ ಸೇವಾ ವಿದ್ಯಾಲಯದ ೧೫ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಗು ಒಳ್ಳೆಯ ರೀತಿಯಲ್ಲಿ ಓದಿ ದೊಡ್ಡ ವ್ಯಕ್ತಿಯಾಗಬೇಕು ಅಂದರೆ ಮಗು ಪಡುವ ಕಷ್ಟಕ್ಕಿಂತ ಹತ್ತುಪಟ್ಟು ತಂದೆತಾಯಿಗಳು ಕಷ್ಟ ಪಡಬೇಕು ಹಾಗೂ ತ್ಯಾಗಕ್ಕೆ ಸಿದ್ದರಾಗಬೇಕಾಗುತ್ತೆ. ಸೇವಾ ವಿದ್ಯಾಲಯ ಇಂತಹ ಗ್ರಾಮೀಣ ಪ್ರದೇಶದಲ್ಲಿ ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿರುವುದಕ್ಕೆ ಅಭಿನಂದನೆಗಳು. ಒಳ್ಳೆ ಶಾಲೆಗೆ ಸೇರಿಸಿದ ತಕ್ಷಣ ಎಲ್ಲಾ ಮಕ್ಕಳು ಒಳ್ಳೆ ಅಂಕಗಳನ್ನು ಪಡೆಯುತ್ತಾರೆ ಎನ್ನುವ ಭಾವನೆ ಇರಬಾರದು ಎಲ್ಲಾ ಮಕ್ಕಳೂ ಒಂದೇ ತರಹ ಇರುವುದಿಲ್ಲ , ಬೇರೆ ಬೇರೆ ಮಕ್ಕಳಿಗೆ ಅವರದೇ ಆದ ಸಾಮರ್ಥ್ಯ ಇರುತ್ತೆ. ಪೋಷಕರು, ಶಿಕ್ಷಕರು ಅವರ ಸಾರ್ಮರ್ಥ್ಯವನ್ನು ಗ್ರಹಿಸಿ ಅದಕ್ಕೆ ಪ್ರೋತ್ಸಾಹ ಕೊಡಬೇಕು. ಮಕ್ಕಳು ಕೇವಲ ವಿಜ್ಞಾನಿ, ಪೋಲಿಸ್, ಅಧಿಕಾರಿಯೋ ಆಗುವುದಲ್ಲ. ಕಲಾವಿದರಾಗಲು, ಆಟಗಾರರಾಗಲು ತಮ್ಮ ಕಲೆಯ ಪ್ರದರ್ಶನ ಮಾಡಲು ಪ್ರೋತ್ಸಾಹ ನೀಡಬೇಕು. ಪಾಲಕರು ತಮ್ಮ ನನಸಾಗದ ಕನಸುಗಳನ್ನು ಮಕ್ಕಳು ಪೂರೈಸಲಿ ಎಂದು ಮಕ್ಕಳ ಮೇಲೆ ಒತ್ತಡ ಹಾಕಬಾರದು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರೋತ್ಸಾಹ ನೀಡಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ಸಿದ್ದನಗೌಡ ಪಾಟೀಲ್ ಮಾತನಾಡಿ ನಾವು ಸೌಲಭ್ಯಗಳಿಗಾಗಿ ಹಿಂದುಳಿದಿದ್ದೇವೆ ಎಂದು ಹೇಳುತ್ತಾ ಹೋಗಬಾರದು. ನಮ್ಮ ಜಿಲ್ಲೆ ಎಲ್ಲ ರೀತಿಯಿಂದಲೂ ಸಮೃದ್ದವಾಗಿದೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಮೊಬೈಲ್ ಗಳಿಂದ ದೂರವಿಡಬೇಕು. ಇವತ್ತಿನ ದಿನಗಳಲ್ಲಿ ಮಕ್ಕಳು ತಮ್ಮ ತಂದೆ ಮನೆಗೆ ಬರುವುದನ್ನು ಕಾಯುವುದು ಮೊಬೈಲ್ ಗಾಗಿ ಎನ್ನುವಂತಾಗಿದೆ. ಅವಿಭಕ್ತ ಕುಟುಂಬಗಳಲ್ಲಿ ಸಂಸ್ಕಾರವನ್ನು ಕಲಿಸಲಾಗುತ್ತಿತ್ತು. ಆದರೆ ಇವತ್ತಿನ ಮೈಕ್ರೋ ಕುಟುಂಬಗಳಿಂದ ಇದು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ನಿಜವಾದ ಆಸ್ತಿಯನ್ನಾಗಿ ಮಾಡಬೇಕಿದೆ. ಅವರಿಗೆ ಉತ್ತಮವಾದ ಶಿಕ್ಷಣ ದೊರೆತಲ್ಲಿ ಖಂಡಿತವಾಗಿಯೂ ಮಕ್ಕಳು ಆಸ್ತಿಯಾಗುತ್ತಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲುವ ಸಾಮರ್ಥ್ಯ ಗ್ರಾಮೀಣ ಪ್ರದೇಶ ಮಕ್ಕಳಲ್ಲಿದೆ ಆ ನಿಟ್ಟಿನಲ್ಲಿ ಪೋಷಕರು ಗಮನ ಹರಿಸಬೇಕು. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಢಬೇಕಿದೆ ಎಂದು ಕರೆ ನೀಡಿದರು.
ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ರಾಜು ಬಿ.ಆರ್, ಮಹಾದೇವಸ್ವಾಮಿ ಹಿರೇಮಠ, ಅಜೀಮ್ ಅತ್ತಾರ್, ಮಹೆಬೂಬಸಾಬ ಹೀರಾಳ ಮಾತನಾಡಿದರು. ಸಂಸ್ಥೆಯ ಪರವಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಮಹಾದೇವಸ್ವಾಮಿ ಹಿರೇಮಠರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ನವೋದಯ ಹಾಗೂ ಸೈನಿಕ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ವಿರೇಶ ತಾವರಗೇರಿ ವಹಿಸಿಕೊಂಡಿದ್ದರು. ಪ್ರಾಸ್ತಾವಿಕವಾಗಿ ಮುಖ್ಯೋಪಾಧ್ಯಾಯ ದಾವಲಸಾಬ ಮಾತನಾಡಿದರು. ಶಾಲೆಯ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿ ಕಾರ್‍ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು, ಪೋಷಕರು, ಗ್ರಾಮದ ಗಣ್ಯರು ಶಾಲೆಯ ಆಡಳಿತ ಮಂಡಳಿ ಸದಸ್ಯರು, ಅಧ್ಯಕ್ಷರಾದ ಎಚ್.ವಿ.ರಾಜಾಬಕ್ಷಿ ಸೇರಿದಂತೆ ಇತರರು ಭಾಗವಹಿಸಿದ್ದರು.

Please follow and like us:
error