ಮಕ್ಕಳ ಮುಗ್ಧತೆಗೆ ಮನಸೋತ ಡಿಸಿ ಎಂ.ಕನಗವಲ್ಲಿ

ಕೊಪ್ಪಳ ಜಿಲ್ಲಾಧಿಕಾರಿ ಅಂದ್ರೆ ಇಡೀ ಜಿಲ್ಲೆಗೆ ಮುಖ್ಯಸ್ಥರಾ ಮೇಡಂ- ಅಂತ ಶಾಲಾ ಮಕ್ಕಳು ಡಿಸಿ ಗೆ ಪ್ರಶ್ನಿಸಿದಾಗ, ಅವರ ಮುಗ್ಧತೆಗೆ ಮನಸೋತ  ಎಂ. ಕನಗವಲ್ಲಿ ಅವರು, ಜಿಲ್ಲಾಧಿಕಾರಿಗಳ ಕರ್ತವ್ಯಗಳೇನು ಎಂಬುದರ ಬಗ್ಗೆ ಮಕ್ಕಳಿಗೆ ಸಂಕ್ಷಿಪ್ತ ವಿವರಣೆ ನೀಡಿದರು.ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ಸನಿವಾಸ ವಿದ್ಯಾಲಯದ 07 ನೇ ತರಗತಿಯ 30 ಮಕ್ಕಳನ್ನು ಶಾಲೆಯ ವತಿಯಿಂದ ಕ್ಷೇತ್ರ ದರ್ಶನ ಕಾರ್ಯಕ್ರಮದಡಿ ಶಿಕ್ಷಕರು ಕೊಪ್ಪಳದ ಜಿಲ್ಲಾಡಳಿತ ಭವನಕ್ಕೆ ಶುಕ್ರವಾರದಂದು ಕರೆದುಕೊಂಡು ಬಂದಿದ್ದರು.  ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡಿದ ಮಕ್ಕಳು, ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಕಚೇರಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಕ್ಕಳು ಮಾಹಿತಿ ಪಡೆದುಕೊಂಡರು.  ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಬಯಸಿದ ಮಕ್ಕಳಿಗೆ, ಎಂ. ಕನಗವಲ್ಲಿ ಅವರು ದೈನಂದಿನ, ತಮ್ಮ ಕಾರ್ಯ ಒತ್ತಡದ ನಡುವೆಯೂ, ಬಿಡುವು ಮಾಡಿಕೊಂಡು, ಮಕ್ಕಳನ್ನು ತಮ್ಮ ಕೊಠಡಿಗೆ ಆದರದಿಂದ ಬರ ಮಾಡಿಕೊಂಡರು.  ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಜಿಲ್ಲಾಧಿಕಾರಿಗೆ ಮಕ್ಕಳು, ‘ಡಿಸಿ ಅಂದ್ರೆ ಇಡೀ ಜಿಲ್ಲೆಗೆ ಮುಖ್ಯಸ್ಥರ’ ಅಂತ ಕೇಳಿದರು.  ಮಕ್ಕಳ ಈ ಮುಗ್ಧತೆಯನ್ನು ಕಂಡು ಮನಸೊತ ಜಿಲ್ಲಾಧಿಕಾರಿ ಅವರು ತಮ್ಮ ಕರ್ತವ್ಯಗಳೇನು, ಸಾರ್ವಜನಿಕರ ಅಹವಾಲು ಆಲಿಸುವುದು ಸೇರಿದಂತೆ, ಕಚೇರಿಯಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳ ಬಗ್ಗೆ ಮುಕ್ತ ಮನಸ್ಸಿನಿಂದ ಮಾತನಾಡಿದರು.  ತಳಕಲ್ ಗ್ರಾಮದಲ್ಲಿನ ಸರ್ಕಾರಿ ಕಚೇರಿಗಳಿಗೆ ಭೇಟಿ ಮಾಡಿದ್ದೀರಾ, ಎಂದು ಡಿಸಿ ಅವರು ಮಕ್ಕಳಿಗೆ ಕೇಳಿದ ಪ್ರಶ್ನೆಗೆ, ಗ್ರಾಮ ಪಂಚಾಯತಿ ಕಚೇರಿ ನೋಡಿದ್ದೇವೆ ಎಂದು ಉತ್ತರಿಸಿದರು.  ನಂತರ ಮಕ್ಕಳಿಗೆ ಕಿವಿಮಾತು ಹೇಳಿದ  ಕನಗವಲ್ಲಿ ಅವರು, ನಿತ್ಯ ಸ್ನಾನ ಮಾಡಬೇಕು, ಸ್ವಚ್ಛತೆಯನ್ನು ಕಾಪಾಡಬೇಕು, ಸರಿಯಾದ ಸಮಯಕ್ಕೆ ಶಾಲೆಗೆ ಹೋಗಬೇಕು. ಸಮಯ ಪಾಲನೆ ಮಾಡಬೇಕು, ತಂದೆ-ತಾಯಿ ಹೇಳಿದ ಮಾತುಗಳನ್ನು ಕೇಳುವುದಷ್ಟೇ ಅಲ್ಲದೆ, ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠಗಳನ್ನು ಏಕಾಗ್ರತೆಯಿಂದ ಕೇಳಿಸಿಕೊಂಡು, ಕಷ್ಟಪಟ್ಟು ಓದುವುದಕ್ಕಿಂತ, ಇಷ್ಟಪಟ್ಟು ಓದುವಂತೆ ಮಕ್ಕಳಿಗೆ ಹೇಳಿದರು.
  ಕಸ್ತೂರಬಾ ಗಾಂಧಿ ಬಾಲಿಕಾ ಸನಿವಾಸ ವಿದ್ಯಾಲಯದ ಶಿಕ್ಷಕರು ಇದ್ದರು.

Please follow and like us:
error