ಮಕ್ಕಳ ಬಿಕ್ಷಾಟನೆ ತಡೆಯಿರಿ : ರಾಜಶೇಖರ ಹಿಟ್ನಾಳ ಸೂಚನೆ

ಕೊಪ್ಪಳ ಡಿ.  : ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಿಕ್ಷೆಟನೆಯಲ್ಲಿ ತೊಡಗಿರುವುದು ಕಂಡುಬರುತ್ತಿದ್ದು, ಅಧಿಕಾರಿಗಳು ಮಕ್ಕಳನ್ನು ಶಾಲೆಗೆ ಸೇರಿಸಿ, ಭೀಕ್ಷಾಟನೆ ತಡೆಗೆ ಅಗತ್ಯ ಕ್ರಮಕೈಗೊಳ್ಳಿ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಜಿ.ಪಂ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಶಿಕ್ಷಣಕ್ಕಾಗಿ ಸರ್ಕಾರ ಅತೀ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಬಿಸಿಊಟ, ಸಮವಸ್ತ್ರ, ಪುಸ್ತಕ ಇತ್ಯಾದಿ ಸಾಮಾಗ್ರಿಗಳನ್ನು ಉಚಿತವಾಗಿ ನೀಡುತ್ತಿದೆ. ಹಾಗೂ ಮುಖ್ಯವಾಗಿ ಶೂಭಾಗ್ಯ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೋಳಿಸಲಾಗಿದೆ. ಸರ್ಕಾರದಿಂದ ಇಷ್ಟೆಲ್ಲ ಕಾರ್ಯಕ್ರಮಗಳು ನೀಡುತ್ತಿದ್ದರು ಕೂಡ ಇನ್ನೂ ಕೆಲ ಮಕ್ಕಳು ಶಾಲೆಗೆ ಬಾರದೇ ಭೀಕ್ಷಾಟನೆಯಲ್ಲಿ ತೊಡಗಿದ್ದಾರೆ. ದೇವಸ್ಥಾನ ಇತ್ಯಾದಿ ಸ್ಥಳಗಳಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭೀಕ್ಷೆ ಬೀಡುತ್ತಿರುವುದು ಕಂಡುಬರುತ್ತಿದೆ. ಅಂತಹ ಮಕ್ಕಳನ್ನು ಯಾಕೆ ಶಾಲೆಗೆ ಕರೆತರುತ್ತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆ ಬಿಡದಂತೆ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಮನವರಿಕೆ ಮಾಡಿ, ಅವರಿಗೆ ಮರಳಿ ಶಾಲೆ ಬರುವಂತೆ ಕ್ರಮಕೈಗೊಳ್ಳಲಾಗುವುದು ಎಂದರು. ಬಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಸರ್ವೆ ಮಾಡಿ, ಅದರ ವರದಿಯನ್ನು ಮುಂದಿನ ತಿಂಗಳ ಜಿ.ಪಂ. ಕೆಡಿಪಿ ಸಭೆಯಲ್ಲಿ ಸಲ್ಲಿಸಬೇಕು. ಶಾಲಾ ಮಕ್ಕಳಿಗೆ ನೀಡುತ್ತಿರುವ ಶೂ, ಸಮವಸ್ತ್ರ, ಇತ್ಯಾದಿಗಳ ಗುಣಮಟ್ಟವನ್ನು ಪರಿಶೀಲಿಸಿ. ಒಂದು ತಾಲೂಕಿಗೆ ೧೫ ಶಾಲೆಗಳಂತೆ ಜಿಲ್ಲೆಯ ಒಟ್ಟು ೫೦ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಿರುವ ಸಮವಸ್ತ್ರಗಳ ಗುಣಮಟ್ಟದ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ಜಿ.ಪಂ ಅಧ್ಯಕ್ಷರು ಜವಳಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಶುದ್ಧ ಕುಡಿಯು ನೀರಿನ ಘಟಕಗಳ ನಿರ್ಮಾಣದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ. ಬೋರ್‌ವೆಲ್‌ಗಳನ್ನು ಕೊರೆಯಿಸಿ, ಒಂದುವೇಳೆ ವೈಫಲ್ಯವಾದಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಗುತ್ತಿಗೆ ಪಡೆದುಕೊಂಡು ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯ ಕ್ರಮಕೈಗೊಳ್ಳಿ ಎಂದರು. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮಾತನಾಡಿ, ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳಲ್ಲಿ ೧೯ ಕಾಮಗಾರಿಗಳಲ್ಲಿ ೧೦ ಪೂರ್ಣಗೊಂಡಿವೆ. ಇನ್ನುಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಇಲಾಖೆಗೆ ಮಂಜೂರಾದ ೧೫೨ ನೀರು ಶುದ್ಧೀಕರಣ ಘಟಕಗಳಲ್ಲಿ, ೧೫೨ ಘಟಕಗಳ ಕಾಮಗಾರಿ ಪೂರ್ಣಗೊಂಡಿದೆ. ೧೪೨ ಘಟಕಗಳ ಕ್ಯಾಬಿನ್ ಕೂಡಿಸಲಾಗಿದೆ ಹಾಗೂ ೧೩೪ ಘಟಕಗಳನ್ನು ಅಳವಡಿಸಿದ್ದು, ೧೧೯ ಘಟಕಗಳು ಕಾರ್ಯಾರಂಭ ಮಾಡುವ ಹಂತದಲ್ಲಿವೆ. ಈಗಾಲೇ ೧೦೫ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ವರದಿ ಸಲ್ಲಿಸಿದರು.
ಗರ್ಭೀಣಿ ಮಹಿಳೆಯರಿಗೆ ಹಾಗೂ ಬಾಣಂತಿಯರಿಗಾಗಿ ಸರ್ಕಾರವು ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯಡಿ ಪೌಷ್ಠಿಕ ಆಹಾರ ಸೇವಿಸಲು ಗರ್ಭೀಣಿ ಮಹಿಳೆ ಹಾಗೂ ಬಾಣಂತಿಯರು ಊಟಕ್ಕೆ ಬರುತ್ತಿದ್ದಾರೆಯೋ ಅಥವಾ ಇಲ್ಲವೆ ಎಂಬುದರಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾತೃಪೂರ್ಣ ಯೋಜನೆಯಲ್ಲಿ ಸಧ್ಯ ಶೇ. ೭೮ ರಷ್ಟು ಗರ್ಭೀಣಿ ಮಹಿಳೆ ಹಾಗೂ ಬಾಣಂತಿಯರು ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು. ನಂತರ ಜಿ.ಪಂ ಅಧ್ಯಕ್ಷರು ವಿವಿಧ ಇಲಾಖೆಗಳ ಪ್ರಗತಿ ವರದಿ ಪಡೆದುಕೊಂಡರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಅಗಸಿಮುಂದಿನ, ಜಿ.ಪಂ. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Please follow and like us:
error