ಮಕ್ಕಳ ಗ್ರಾಮಸಭೆಗಳನ್ನು ಕಡ್ಡಾಯವಾಗಿ ನಡೆಸಿ- ರಾಜಶೇಖರ ಹಿಟ್ನಾಳ ಸೂಚನೆ

ಮಕ್ಕಳ ಸಮಸ್ಯೆಗಳನ್ನು ಅರಿಯಲು ಎಲ್ಲ ಗ್ರಾಮ ಪಂಚಾಯತಿಗಳು ತಪ್ಪದೆ ಮಕ್ಕಳ ಗ್ರಾಮಸಭೆಗಳನ್ನು ವರ್ಷಕ್ಕೆರಡು ಬಾರು ನಡೆಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ತಿಳಿಸಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನೆಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕ್ರಿಯಾಶೀಲ ಮಕ್ಕಳ ಗ್ರಾಮಸಭೆ ಅನುಷ್ಠಾನ ಹಾಗೂ ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ಗ್ರಾಮ ಪಂಚಾಯತ್‍ಗಳ ಪಾತ್ರ ಕುರಿತು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳೇ ಈ ದೇಶದ ಆಸ್ತಿ. ಇವರೇ ಭವಿಷ್ಯದ ಪ್ರಜೆಗಳು. ಮಕ್ಕಳು ಬೆಳೆಯುವ ರೀತಿ, ವಾತಾವರಣ ಅವರ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳು ಉತ್ತಮವಾಗಿ ಬೆಳೆಯುವ ವಾತಾವರಣ ಗ್ರಾಮಗಳಲ್ಲಿ ನಿರ್ಮಾಣವಾಗಬೇಕು. ಇದಕ್ಕಾಗಿ ಅಗತ್ಯ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸುತ್ತಿದೆ. ಮಕ್ಕಳಿಗೆ ಶಾಲೆಗಳಲ್ಲಿ ಶೌಚಾಲಯ, ಆಟದ ಮೈದಾನ, ಮಕ್ಕಳ ಸುರಕ್ಷತೆ, ಮಕ್ಕಳ ಆರೋಗ್ಯಕ್ಕಾಗಿ ಲಸಿಕಾ ಕಾರ್ಯಕ್ರಮಗಳು ಹೀಗೆ ಹತ್ತು ಹಲವು ಸೌಲಭ್ಯಗಳು ಮಕ್ಕಳಿಗೆ ತಲುಪಬೇಕಿದೆ. ಸರ್ಕಾರದ ನಿರ್ದೇಶನದಂತೆ ಮಕ್ಕಳ ಗ್ರಾಮಸಭೆಗಳನ್ನು ಕಡ್ಡಾಯವಾಗಿ ವರ್ಷಕ್ಕೆರಡು ಬಾರಿ ಆಯೋಜಿಸಬೇಕು. ಈ ಸಭೆಗಳಲ್ಲಿ ಮಕ್ಕಳಿಗೆ ದೊರೆಯುತ್ತಿರುವ ಸೌಲಭ್ಯಗಳು, ವ್ಯವಸ್ಥೆ ಮುಂತಾದ ವಿಷಯಗಳ ಕುರಿತು ಮಕ್ಕಳಿಂದಲೇ ಚರ್ಚೆ ನಡೆಸುವಂತಾಗಬೇಕು. ಮಕ್ಕಳ ಹಿತಾಸಕ್ತಿಗೂ ಸರ್ಕಾರ ಆದ್ಯತೆ ನೀಡುತ್ತಿದ್ದು, ಗ್ರಾಮ ಸಭೆಗಳಲ್ಲಿ ಮಕ್ಕಳ ಸಮಸ್ಯೆಗಳನ್ನು ತಿಳಿದು, ಪರಿಹರಿಸುವಂತಾಗಬೇಕು. ಮಕ್ಕಳ ರಕ್ಷಣೆ ಅತಿ ಮುಖ್ಯ ಸಂಗತಿಯಾಗಿದ್ದು, ಸಕಾರ ಹಲವಾರು ಬಗೆಯ ಕಾರ್ಯಕ್ರಮಗಳನ್ನು ಹಾಕಿಕೊಂಡರೂ, ಮಕ್ಕಳ ಭಿಕ್ಷಾಟನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಗಂಭೀರ ವಿಷಯವಾಗಿದ್ದು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ ಅವರು ಮಾತನಾಡಿ, ಮಕ್ಕಳ ಬಗ್ಗೆ ಶಾಲೆಗಳಲ್ಲಿ ಶಿಕ್ಷಕರು ನಿಗಾ ವಹಿಸಬೇಕು. ಗ್ರಾಮ ಪಂಚಾಯತಿ ವ್ಯವಸ್ಥೆಯು ಪ್ರಜಾಪ್ರಭುತ್ವದ ಮೂಲ ವ್ಯವಸ್ಥೆಯಾಗಿದ್ದು, ಇಂತಹ ವೇದಿಕೆಯಲ್ಲಿ ಕೈಗೊಳ್ಳುವ ಚರ್ಚೆಗಳು ಮಹತ್ವದ್ದಾಗಿರಬೇಕು. ಮಕ್ಕಳ ಗ್ರಾಮಸಭೆಗಳನ್ನು ತಪ್ಪದೆ ಏರ್ಪಡಿಸಿ ಅವರ ಸಮಸ್ಯೆಗಳನ್ನು ತಿಳಿದು, ಪರಿಹರಿಸಬೇಕು. ಗ್ರಾಮಗಳಲ್ಲಿ ಬಹುಮುಖ್ಯವಾಗಿ ಕುಡಿಯುವ ನೀರು, ಸ್ವಚ್ಛತೆ ಮತ್ತು ಶೌಚಾಲಯ ಈ ಮೂರು ವಿಷಯಗಳನ್ನು ಗಂಭೀರವಾಗಿ ಪರಿಶೀಲಿಸಿ, ಸಮರ್ಪಕ ವ್ಯವಸ್ಥೆ ಕೈಗೊಳ್ಳುವುದು ಗ್ರಾಮ ಪಂಚಾಯತಿಯ ಕರ್ತವ್ಯವಾಗಿರುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಅವರು ಮಾತನಾಡಿ, ಮಕ್ಕಳು ನಿರ್ಭೀತರಾಗಿ, ಮುಕ್ತವಾಗಿ ಮಾತನಾಡುವ ವಾತಾವರಣ ಗ್ರಾಮಗಳಲ್ಲಿ ಹಾಗೂ ಶಾಲೆಗಳಲ್ಲಿ ನಿರ್ಮಾಣವಾಗಬೇಕು. ಮಕ್ಕಳು ಮನೆಗಳಲ್ಲಿ ಅಥವಾ ಶಾಲೆಗಳಲ್ಲಿ ನೀಡುವ ದೂರುಗಳನ್ನು ಯಾರೂ ನಿರ್ಲಕ್ಷಿಸಬಾರದು. ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಸ್ಥಳೀಯವಾಗಿ ಪರಿಹರಿಸಬೇಕು. ಇಲ್ಲದಿದ್ದಲ್ಲಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ಒಟ್ಟಾರೆ ಮಕ್ಕಳಲ್ಲಿ ತಾವು ಸುರಕ್ಷಿತವಾಗಿದ್ದೇವೆ ಎನ್ನುವ ಭಾವನೆ ಮೂಡುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.
ಜಿಲ್ಲಾ ಮಕ್ಕಳ ಸಮಿತಿಯ ಅಧ್ಯಕ್ಷೆ ನಿಲೋಫರ್ ರಾಂಪುರಿ ಅವರು ಕಾರ್ಯಗಾರ ಕುರಿತು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ನಿರೂಪಣಾಧಿಕಾರಿ ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಉಪಸ್ಥಿತರಿದ್ದರು. ಯುನೆಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ತರಬೇತಿ ಸಂಯೋಜಕ ಹರೀಶ ಜೋಗಿ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀರೇಂದ್ರ ನಾವದಗಿ ವಂದಿಸಿದರು

Please follow and like us:
error