ಭಾವಚಿತ್ರವಿರುವ ಯುವ ಮತದಾರರ ಗುರುತಿನ ಚೀಟಿ ತಯಾರಿಸಿ : ಗೌರವ್ ಗುಪ್ತಾ

ಕೊಪ್ಪಳ ಡಿ. 22 : ಯಾವುದೇ ದೋಷವಿಲ್ಲದೇ ಭಾವಚಿತ್ರವಿರುವ ಯುವ ಮತದಾರರ ಗುರುತಿನ ಚೀಟಿ ತಯಾರಿಸುವಂತೆ ಕೊಪ್ಪಳ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರು ಆಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಗೌರವ ಗುಪ್ತಾ ಅವರು ಎಲ್ಲಾ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶದನ್ವಯ ಮತದಾರರ ಪಟ್ಟಿ ಪರಿಷ್ಕರಣೆ-2019ರ ಕುರಿತು ಸಹಾಯಕ ಆಯುಕ್ತರು ಹಾಗೂ ಮತದಾರರ ನೊಂದಣಾಧಿಕಾರಿ, ತಹಶೀಲ್ದಾರರು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಥಮ ಬಾರಿಗೆ ನೊಂದಾಯಿತರಾದ ಯುವ ಮತದಾರರಿಗೆ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಗಳನ್ನು 2019ರ ಜನವರಿ. 25 ರಂದು ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ವಿತರಿಸುವ ಕುರಿತು ತಹಶೀಲ್ದಾರರು ಸೂಕ್ತ ಕ್ರಮಕೈಗೊಳ್ಳುತ್ತಿರುವ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು. ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಗಳನ್ನು ಯಾವುದೇ ದೋಷವಿಲ್ಲದೇ ತಯಾರಿ. ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ಕೆ ಅನುಕೂಲವಾಗುವಂತೆ ಎಲ್ಲಾ ಮತಗಟ್ಟೆಗಳಿಗೆ ರಾಜಕೀಯ ಪಕ್ಷಗಳು ಬೂತ್ ಲೆವೆಲ್ ಏಜೆಂಟ್‍ಗಳನ್ನು ನೇಮಿಸಬೇಕು. ಜಿಲ್ಲಾ ಚುನಾವಣಾಧಿಕಾರಿಗಳು, ಮತದಾರರ ನೊಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸ್ವೀಕೃತವಾಗಿರುವ ಅರ್ಜಿಗಳ ವಿಲೇವಾರಿಯನ್ನು ಪರಿಶೀಲಿಸಲು ನಿಗದಿಪಡಿಸಿದ ಪ್ರಮಾಣದಷ್ಟು ಮತದಾರರ ಪಟ್ಟಿಗಳನ್ನು ಪರಿಶೀಲಿಸಿದ ಬಗ್ಗೆ ಮೇಲ್ವಿಚಾರಣೆ ಮಾಡಿದರು. ಆನ್‍ಲೈನ್ ಮುಖಾಂತರ ಸ್ವೀಕೃತಿಯಾಗಿರುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ವಿಲೇಗೊಳಿಸಲು ಸಂಬಂಧಪಟ್ಟ ತಹಶೀಲ್ದಾರರು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ವಿಧಾನಸಭಾ ಕ್ಷೇತ್ರವಾರು ನಮೂನೆ-6, ನಮೂನೆ-7, ನಮೂನೆ-8 ಹಾಗೂ ನಮೂನೆ-8ಎ ಅತಿ ಹೆಚ್ಚು ಸ್ವೀಕೃತಿಯಾಗಿರುವ ಭಾಗಗಳನ್ನು ಮರು ಪರಿಶೀಲಿಸಿ ಮತದಾರರ ನೊಂದಣಾಧಿಕಾರಿಗಳು ವಿಲೇಗೊಳಿಸಬೇಕು ಎಂದು ಕೊಪ್ಪಳ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರು ಆಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಗೌರವ ಗುಪ್ತಾ ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಸಭೆಯಲ್ಲಿ ಕೊಪ್ಪಳ ತಹಶೀಲ್ದಾರ ಜೆ.ಬಿ. ಮಜ್ಗಿ, ಗಂಗಾವತಿ ತಹಶೀಲ್ದಾರ ವಿರೇಶ ಬಿರಾದರ, ಕನಕಗಿರಿ ತಹಶೀಲ್ದಾರ ರವಿ ಅಂಗಡಿ, ಕಾರಟಗಿ ತಹಶೀಲ್ದಾರ ಕಿರಣ ಕುಮಾರ್, ಕುಷ್ಟಗಿ ತಹಶೀಲ್ದಾರ ಗುರುಬಸವರಾಜ, ಯಲಬುರ್ಗಾ ತಹಶೀಲ್ದಾರ ರಮೇಶ ಅಳವಂಡಿಕರ, ಕುಕನೂರ ತಹಶೀಲ್ದಾರ ರವಿರಾಜ ದೀಕ್ಷಿತ್ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಹಾಯಕ ಮತ್ತು ಮತದಾರರ ನೊಂದಣಾಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error