ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ : ಸಚಿವ ರಹೀಮ್ ಖಾನ್

ಕೊಪ್ಪಳ ಜ.  : ಭಾರತದ ಸಂವಿಧಾನವು ವಿಶ್ವದಲ್ಲೇ ಶ್ರೇಷ್ಠವಾದುದ್ದಾಗಿದೆ ಎಂದು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ರಹೀಮ್ ಖಾನ್ ಅವರು ಹೇಳಿದರು.

ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ೭೦ನೇ ಗಣರಾಜ್ಯೋತ್ಸವದ ನಿಮಿತ್ಯ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರದಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದಲ್ಲಿ ಭಾರತದ ಮುಖ್ಯ ಹಬ್ಬಗಳು ಎಂದರೆ ಆಗಸ್ಟ್. ೧೫ ಮತ್ತು ಜನವರಿ. ೨೬. ಈ ಎರಡು ದಿನಗಳು ನಮ್ಮ ದೇಶದ ಮತ್ತು ನಮ್ಮೆಲ್ಲಿರಿಗೂ ಅತಿ ದೊಡ್ಡ ದಿನಗಳಾಗಿವೆ. ಬ್ರೀಟಿಷರ ಆಳ್ವಿಕೆಯಲ್ಲಿದ್ದ ನಮ್ಮ ದೇಶವು ಗಾಂಧಿಜೀ, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್, ಜಾಕೀರ್ ಹುಸೇನ್ ರಂತಹ ಇನ್ನೂ ಅನೇಕ ಮಹನಿಯರ ಹೋರಾಟ, ಬಲಿದಾನದಿಂದ ಸ್ವಾತಂತ್ರ್ಯ ಗೊಂಡಿತು. ಸ್ವಾತಂತ್ರ್ಯದ ನಂತರ ಭಾರತದ ಜನಸಂಖ್ಯೆ ಸುಮಾರು ೩೫ ಕೊಟಿ ಇತ್ತು. ಆಗ ಎಲ್ಲಾ ಜನರಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಲು ತುಂಬಾ ಕಷ್ಟ. ಸಮಾಜಗಳಿಗೆ ನ್ಯಾಯ ದೊರಕುತ್ತಿರಲಿಲ್ಲ. ಆದರೆ ಈಗ ಜನಸಂಖ್ಯೆ ಸು. ೧೦೦ ಕೊಟಿ ಮೀರಿದ್ದು, ಸಾಮಾನ್ಯವಾಗಿ ಈಗ ಯಾವುದೇ ಸಮಸ್ಯೆಗಳು ಆಗುತ್ತಿಲ್ಲ ಮತ್ತು ಎಲ್ಲ ಸಮಾಜಗಳಿಗೆ ಕಾನೂನಿನ ಮೂಲಕ ಸಮಾನತೆಯನ್ನು ನೀಡಲಾಗಿದ್ದು, ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದ ಸಂವಿಧಾನ. ಮೂರು ಸಾವಿರಕ್ಕೂ ಹೆಚ್ಚು ಜಾತಿ, ಧರ್ಮಗಳಿದ್ದರೂ ಸಹ ನಮ್ಮ ದೇಶವು ವಿಶ್ವಕ್ಕೆ ಮಾದರಿಯಾಗಿದೆ. ಮಹಿಳೆಯರಿಗೆ ಸಮಾನ ಮೀಸಲಾತಿ, ಬಡವರಿಗೆ ಸಮಾನತೆ ಕೊಟ್ಟಿದ್ದು ಹಾಗೂ ಎಲ್ಲರಿಗೂ ಕಾನೂನಿನ ಮೂಲಕ ತಮ್ಮದೇ ಆದ ಹಕ್ಕುಗಳನ್ನು ನೀಡಿದ್ದು, ಶಕ್ತಿ, ಧೈರ್ಯದಿಂದ ಬದುಕಬಹುದು, ಪ್ರಶ್ನಿಸಬಹುದಾಗಿದೆ. ಎಷ್ಟು ಜಾತಿಗಳಿದ್ದರು ಪ್ರಜಾಪ್ರಭುತ್ವಕ್ಕಿಂತ ಯಾವುದು ದೊಡ್ಡದಲ್ಲ ಎಂದು ಸಂವಿಧಾನದ ಮೂಲಕ ತಿಳಿಸಿದ ಕೀರ್ತಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಕೇವಲ ಒಂದು ಸಮಾಜಕ್ಕಾಗಿ ಬರೆಯಲಿಲ್ಲ. ಎಲ್ಲರ ಸಮಾನತೆಗಾಗಿ ಬಾಬಾ ಸಾಹೇಬರು ಸಂವಿಧಾನ ರಚಿಸಿದ್ದು, ಈ ಕಾರಣಕ್ಕಾಗಿಯೇ ಅವರು ಅಜರಾಮರರಾಗಿದ್ದಾರೆ. ನಮ್ಮ ದೇಶದಲ್ಲಿ ಶೇ.೫೦ ರಷ್ಟು ಯುವಕರಿದ್ದು, ಅವರ ಮೇಲೆ ದೇಶದ ಭವಿಷ್ಯ ನಿಂತಿದೆ. ಆದ್ದರಿಂದ ಯುವ ಪಿಳಿಗೆಯು ಸಂವಿಧಾನದ ಕುರಿತು ತಿಳಿದು ಬಾಬಾ ಸಾಹೇಬರ ಕನಸುಗಳನ್ನು ನನಸಾಗಿಸಬೇಕು. ಅಭಿವೃದ್ಧಿ ದೇಶಗಳ ಪೈಕಿ ವಿಶ್ವದಲ್ಲಿ ಭಾರತವು ಪ್ರಸ್ತುತ ೭ ರಿಂದ ೮ನೇ ಸ್ಥಾನಕ್ಕೆ ತಲುಪಿದ್ದು, ಮುಂದುವರೆಯುತ್ತಿರುವ ದೇಶ ನಮ್ಮದಾಗಿದೆ. ದೇಶದ ಅಭಿವೃದ್ಧಿಗೆ ರೈತರ ಯುವಕರ ಪಾತ್ರ ಪ್ರಮುಖವಾದದ್ದು. ಬೇರೆ ದೇಶದವರು ಶಿಕ್ಷಣ, ಆರೋಗ್ಯ ಪಡೆಯಲು ನಮ್ಮ ದೇಶದಲ್ಲಿ ಬರುತ್ತಿದ್ದಾರೆ. ರಾಜ್ಯದ ಜನತೆಗಾಗಿ ಹಿಂದಿನ ಸರ್ಕಾರದ ಎಲ್ಲ ಯೋಜನೆಗಳು ಮುಂದುವರೆಯುತ್ತವೆ. ರೈತರ ಇದ್ದರೆ ಮಾತ್ರ ನಮ್ಮ ದೇಶ. ಹಾಗಾಗಿ ಅವರಿಗಾಗಿ ನಮ್ಮ ಸರ್ಕಾರವು ಸಾಲಮನ್ನಾ, ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಹೀಗೆ ವಿವಿಧ ಯೋಜನೆಗಳನ್ನು ಜಾರಿಗೆ ಮಾಡಲಾಗುತ್ತಿದೆ. ಯುವಕರಲ್ಲಿ ಕ್ರೀಡಾ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಯೋಜನೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ಜಾರಿಗೊಳಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ರಹೀಮ್ ಖಾನ್ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ, ಸಂಸದ ಕರಡಿ ಸಂಗಣ್ಣ, ಜಿ.ಪಂ. ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ. ಸುಕುಮಾರ, ಉಪ ವಿಭಾಗಾಧಿಕಾರಿ ಸಿ.ಡಿ. ಗೀತಾ, ಡಿಎಫ್‌ಒ ಯಶಪಾಲ್ ಕ್ಷೀರಸಾಗರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಲವು ಗಣ್ಯರು ಉಪಸ್ಥಿತರಿದ್ದರು.
ಸನ್ಮಾನ ಹಾಗೂ ವಿವಿಧ ಕಾರ್ಯಕ್ರಮ : ೭೦ನೇ ಗಣರಾಜ್ಯೋತ್ಸವದ ನಿಮಿತ್ಯ ಕೊಪ್ಪಳದ ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್.ಸಿ.ಸಿ. ಸೇವಾದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಗೃಹರಕ್ಷಕದ ದಳದಿಂದ ಆಕರ್ಷಕ ಪಥಸಂಚಲನ ಹಾಗೂ ಸಚಿವರಿಂದ ಗೌರವ ರಕ್ಷೆ ಸ್ವೀಕಾರ ಕಾರ್ಯಕ್ರಮ ಜರುಗಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಸ್ವಾತಂತ್ರ್ಯ ಹೋರಾಟಗಾರರಾದ ಶರಣಬಸವರಾಜ ಬಿರಸಳ್ಳಿ ಹಾಗೂ ರಾಷ್ಟ್ರಪತಿಗಳಿಂದ ಉತ್ತಮ ಪ್ರಶಂಶನಿಯ ಪ್ರಶಸ್ತಿ ಪಡೆದ ಕೊಪ್ಪಳ ಭ್ರಷ್ಟಾಚಾರ ನಿಗ್ರಹಧಳದ ಡಿವೈಎಸ್‌ಪಿ ಎಸ್. ಉಜ್ಜೇನಕೊಪ್ಪ ಅವರಿಗೆ ಸನ್ಮಾನಿಸಲಾಯಿತು. ಅಲ್ಲದೇ ಪ್ರಸಕ್ತ ಸಾಲಿನ ಸರ್ವತೋಕ ಸೇವಾ ಪ್ರಶಸ್ತಿಯನ್ನು ತೋಟಗಾರಿಕೆ ಇಲಾಖೆ ಉಪನಿರ್ದೆಶಕ ಕೃಷ್ಣ ಉಕ್ಕುಂದ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ. ನಾಡಗೀರ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನಗೌಡ, ಪಿಡಿಓ ಹನುಮಂತಗೌಡ ಅವರಿಗೆ ನೀಡಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ, ಸ್ವಾತಂತ್ರ್ಯ ಯೋಧರಿಗೂ ಸಹ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇದೇ ಸಂದರ್ಭದಲ್ಲಿ ನಡೆದವು.

Please follow and like us:
error