ಭಾಗ್ಯನಗರ ಮುಸ್ಲಿಂ ಬಾಂಧವರಿಂದ ಕೊಡಗಿನ ಸಂತ್ರಸ್ತರಿಗೆ ದೇಣಿಗೆ

ಕೊಪ್ಪಳ : ನೆರೆಯಿಂದ ತೀವ್ರವಾಗಿ ಸಂತ್ರಸ್ತರಾಗಿರುವ ಕೊಡಗಿನ ಜನತೆಗೆ ಭಾಗ್ಯನಗರದ ಮುಸ್ಲಿಂ ಬಾಂಧವರು ದೇಣಿಗೆ ಸಂಗ್ರಹಿಸಿ ನೀಡಿದರು. ಇಂದು ಭಾಗ್ಯನಗರದ ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಕೊಡಗಿನ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಲಾಯಿತು. ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ತೀವ್ರ ಮಳೆಯಿಂದ ಸಂತ್ರಸ್ತರಾಗಿರುವ ಕೊಡಗು ಹಾಗೂ ಕೇರಳದ ಜನತೆಯ ಮೇಲೆ ಕರುಣೆ ತೋರುವಂತೆ ದುವಾ ಮಾಡಿದರು. ಅಲ್ಲದೇ ಜಿಲ್ಲೆಯಾದ್ಯಂತ ತೀವ್ರ ಬರಗಾಲವಿದ್ದು ಮಳೆಯಿಲ್ಲದೇ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಪ್ರತಿವರ್ಷದ ಸಾಮೂಹಿಕ ಪ್ರಾರ್ಥನೆಯಲ್ಲಿ ದೇಣಿಗೆ ಸಂಗ್ರಹಿಸಲಾಗುತ್ತದೆ. ಅದನ್ನು ಸಮಾಜದ ಕೆಲಸಗಳಿಗಾಗಿ ಬಳಸಲಾಗುತ್ತೆ. ಆದರೆ ಈ ಸಲ ಸಂಗ್ರಹಿಸಿದ ದೇಣಿಗೆಯನ್ನು ಕೊಡಗಿನ ಸಂತ್ರಸ್ತರಿಗೆ ನೆರವಾಗಲು ನೀಡಲಾಯಿತು. ಆರ್ ಐ ಮಂಜುನಾಥ ಜಿಲ್ಲಾಡಳಿತದ ಪರವಾಗಿ ಬಂದು ದೇಣಿಗೆ ಹಣ ಮತ್ತು ಬಿಸ್ಕೇಟ್ ಬಾಕ್ಸ್ ನ್ನು ಸ್ವೀಕರಿಸಿ ಅದನ್ನು ಶೀಘ್ರವೇ ತಲುಪಿಸುವದಾಗಿ ಹೇಳಿದರು. ಈ ಸಂದರ್ಭದಲ್ಲಿ ಭಾಗ್ಯನಗರ ಪಂಚ ಕಮಿಟಿಯ ಅಧ್ಯಕ್ಷ ಇಬ್ರಾಂಹಿಸಾಬ್ ಬಿಸರಳ್ಳಿ. ಪಟ್ಟಣ ಪಂಚಾಯತ್ ಸದಸ್ಯ ಹೊನ್ನೂರಸಾಬ ಬೈರಾಪೂರ, ಕುತ್ಬುದ್ದಿನಸಾಬ್, ಮಹೆಬೂಬಸಾಬ ಬಳಿಗಾರ್, ಶರೀಪ್ ಸಾಬ್, ಕಬೀರಸಾಭ ಬೈರಾಪೂರ, ಮೌಲಾಹುಸೇನ ಹಣಗಿ, ಪೀರಸಾ, ಮಾಬುಸಾಬ ಹಣಗಿ, ದಾವಲಮಲಿಕ್ ಸೇರಿದಂತೆ ಇತರರು ಉಪಸ್ಥಿರಿದ್ದರು. ಭಾಗ್ಯನಗರ, ಯತ್ನಟ್ಟಿ ಮತ್ತು ಓಜನಹಳ್ಳಿ ಗ್ರಾಮದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.