ಭಾಗ್ಯನಗರ : ಆಸ್ತಿ ಹಾಗೂ ನೀರಿನ ತೆರಿಗೆ ಪಾತಿಸಲು ಸೂಚನೆ

ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಗೆ ಒಳಪಡುವ ಆಸ್ತಿ ತೆರಿಗೆ, ನೀರಿನ ತೆರಿಗೆ ಪಾವತಿಸುವಂತೆ ಪಂ.ಪಂ ಮುಖ್ಯಾಧಿಕಾರಿಗಳು ಸಂಬಂಧಪಟ್ಟ ಆಸ್ತಿಗಳ ಮಾಲಿಕರಿಗೆ ಸೂಚನೆ ನೀಡಿದ್ದಾರೆ.
ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಗೆ ಒಳಪಡುವ ಅನೇಕ ಆಸ್ತಿದಾರರು ಹಲವು ವರ್ಷಗಳಿಂದ ತೆರಿಗೆಗಳನ್ನು ಭರಿಸದೇ ಹಾಗೆಯೇ ಬಾಕಿ ಉಳಿಸಿಕೊಂಡಿದ್ದಾರೆ. ನೀರನ್ನು ಕೂಡ ಪಡೆಯುತ್ತಿದ್ದಾರೆ, ಹಾಗೆಯೇ ಉದ್ದಿಮೆ ನಡೆಸುವ ಅನೇಕರು ಬ್ಯಾಂಕ್ ಸೌಲಭ್ಯ ಇದ್ದಾಗ ಮಾತ್ರ ಲೈಸನ್ಸ್ ಪಡೆಯಲು ಬರುತ್ತಾರೆ. ಇದು ಸರಿಯಾದ ಕ್ರಮವಲ್ಲ. ಬಾಕಿದಾರರು ಕೂಡಲೇ ಪಟ್ಟಣ ಪಂಚಾಯತಗೆ ಆಗಮಿಸಿ, ತಮ್ಮ ಮನೆಯ, ಖಾಲಿ ನಿವೇಶನದ ತೆರಿಗೆಯನ್ನು ಪಾವತಿಸಬೇಕು. ಇಲ್ಲವಾದಲ್ಲಿ ನೂತನ ಪದ್ದತಿಯಲ್ಲಿ ಪ್ರತಿ ಮಾಹೆ ಶೇ.2 ರಷ್ಟು ದಂಡವನ್ನು ವಿಧಿಸಲಾಗುವುದು.
ಉದ್ಯಮ ನಡೆಸುವವರು ಪ್ರತಿ ವರ್ಷ ಲೈಸನ್ಸ್‍ನ್ನು ಪಡೆದುಕೊಂಡು ಉದ್ದಿಮೆ ನಡೆಸಬೇಕು. ತಪ್ಪಿದಲ್ಲಿ ಕಾನೂನು ಪ್ರಕಾರ ಅಂತಹ ಉದ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅವಕಾಶ ಕಲ್ಪಿಸದೆ, ತೆರಿಗೆ ಬಾಕಿ ಉಳಿಸಿಕೊಂಡವರು ಕೂಡಲೇ ಪಾವತಿಗೆ ಕ್ರಮ ವಹಿಸಬೇಕು. ನಳಗಳ ಅಧಿಕೃತತೆಯ ಬಗ್ಗೆ ಸಮೀಕ್ಷೆ ನಡೆಸಲು ಕ್ರಮ ವಹಿಸಲಾಗುತ್ತಿದ್ದು, ಅನಧಿಕೃತವಾಗಿ ನಳ ಜೋಡಣೆ ಪಡೆದಂತಹವರು ಸಕ್ರಮಕ್ಕಾಗಿ ಅರ್ಜಿ ಹಾಕಿಕೊಳ್ಳಬೇಕು. ಸಮೀಕ್ಷೆಯಲ್ಲಿ ಕಂಡು ಬಂದಾಗ ಕಂಡುಬಂದಲ್ಲಿ, ಅಂತಹ ನಳ ಜೋಡಣೆಯನ್ನು ಕಡಿತಗೊಳಿಸಿ, ದಂಡ ವಿಧಿಸಲಾಗುವುದು. ಅಲ್ಲದೆ ಆ ದಂಡದ ಮೊತ್ತವನ್ನು ಆಸ್ತಿಗೆ ಬೋಜಾ ಕೂಡಿಸಲಾಗುವುದು. ಆದ್ದರಿಂದ, ಆಸ್ತಿ ತೆರಿಗೆ, ನೀರಿನ ತೆರಿಗೆ ಭರಿಸಲು ಹಾಗೂ ನಳ ಜೋಡಣೆ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯ ಸಾರ್ವಜನಿಕರಿಗೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

Please follow and like us:
error