ಬೇಸಿಗೆ ಹಂಗಾಮಿಗೆ 22.52 ಟಿ.ಎಂ.ಸಿ ನೀರು ಬಳಕೆಗೆ ತುಂಗಭದ್ರಾ ಜಲಾಶಯ ಸಲಹಾ ಸಮಿತಿಯಲ್ಲಿ ನಿರ್ಧಾರ

ಕೊಪ್ಪಳ,ನವಂಬರ್.
ತುಂಗಭದ್ರಾ ಜಲಾಶಯದಿಂದ ರಾಜ್ಯದ ಪಾಲಿನ ನೀರನ್ನು ಬೇಸಿಗೆ ಹಂಗಾಮಿಗೆ ಬಳಕೆ ಮಾಡಲು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಿಸ್ತøತವಾಗಿ ಚರ್ಚಿಸಿ ತೀರ್ಮಾನಿಸಲಾಯಿತು.
ನವಂಬರ್ 18 ರಂದು ಮುನಿರಾಬಾದ್ ಕಾಡಾ ಕಚೇರಿಯಲ್ಲಿ ಪಶುಸಂಗೋಪನಾ ಹಾಗೂ ಮೀನುಗಾರಿಕೆ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ನಾಡಗೌಡರವರ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ನಡೆಯಿತು.
ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯಕ್ಕೆ 357.63 ಟಿ.ಎಂ.ಸಿ. ನೀರು ಹರಿದು ಬಂದಿದ್ದು ಇದರಲ್ಲಿ 194.97 ಟಿ.ಎಂ.ಸಿ. ನೀರನ್ನು ಹೆಚ್ಚುವರಿಯಾಗಿ ಹೊರಬಿಡಲಾಗಿದೆ. ಉಳಿದ 162.65 ಟಿ.ಎಂ.ಸಿ. ನೀರಿನಲ್ಲಿ 11.65 ನೀರು ಆವಿಯಾಗಿ ಬಳಕೆಯಾಗಿರುತ್ತದೆ. ಬಳಕೆಗೆ 151 ಟಿ.ಎಂ.ಸಿ. ಉಳಿತಾಯವಾಗಿದ್ದು ಇದರಲ್ಲಿ ರಾಜ್ಯದ ಪಾಲು 98.99 ಟಿ.ಎಂ.ಸಿ ಇರುತ್ತದೆ. ಇದರಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಿಗೆ ನೀರು ನೀಡಿದ್ದು ನವಂಬರ್ ಅಂತ್ಯದವರೆಗೆ ಹರಿಸಬೇಕಿರುವುದರಿಂದ ರಾಜ್ಯದ ಪಾಲಿನ ನೀರಿನಲ್ಲಿ 76.46 ಟಿ.ಎಂ.ಸಿ. ಬಳಕೆ ಮಾಡಿದಂತಾಗುತ್ತದೆ.
ಬೇಸಿಗೆ ಹಂಗಾಮಿಗೆ 22.52 ಟಿ.ಎಂ.ಸಿ. ನೀರು ಲಭ್ಯವಾಗಲಿದ್ದು ನೀರನ್ನು ವ್ಯರ್ಥವಾಗಿ ಪೋಲು ಮಾಡದೆ ಬಳಕೆ ಮಾಡಲು ಸಲಹಾ ಸಮಿತಿಯಲ್ಲಿ ರೈತರು, ಶಾಸಕರು ಹಾಗೂ ಸಂಸದರಿಂದ ಸಲಹೆಗಳನ್ನು ಪಡೆಯಲಾಯಿತು.
ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿ ಭತ್ತಾ ಸೇರಿದಂತೆ, ಕಡಲೆ, ಮೆಣಸಿನಕಾಯಿ, ಜೋಳ ಬೆಳೆಗಳನ್ನು ಬೆಳೆಯಲಾಗಿದೆ. ಕಾಲುವೆಯ ಕೊನೆಯ ಭಾಗದ ರೈತರು ವಿಳಂಬವಾಗಿ ಬಿತ್ತನೆ ಮಾಡಿರುವುದರಿಂದ ಕಟಾವು ವಿಳಂಬವಾಗಲಿದ್ದು ನವಂಬರ್, ಡಿಸೆಂಬರ್ ಹಾಗೂ ಕೆಲವರ ಬೆಳೆಗಳು ಜನವರಿಯಲ್ಲಿ ಕಟಾವಿಗೆ ಬರಲಿವೆ. ಆದ್ದರಿಂದ ಕಾಲುವೆಯಲ್ಲಿ ನೀರು ನಿಲ್ಲಿಸದೆ ಜನವರಿವರೆಗೆ ನಿರಂತರವಾಗಿ ಹರಿಸಬೇಕು. ಒಂದು ವೇಳೆ ನಿರಂತರವಾಗಿ ನೀರು ಹರಿಸದಿದ್ದಲ್ಲಿ ರೈತರು ನಷ್ಟವನ್ನು ಅನುಭವಿಸಲಿದ್ದಾರೆ. ಆದ್ದರಿಂದ ಆಫ್ ಅಂಡ್ ಆನ್ ಪದ್ದತಿಯ ಬದಲಾಗಿ ನಿರಂತರ ನೀರು ಹರಿಸಲು ರೈತರು ಸೇರಿದಂತೆ ಶಾಸಕರು, ಸಂಸದರು ಸಹಮತ ವ್ಯಕ್ತಪಡಿಸಿದರು.
ಈಗಿರುವ ಬೆಳೆಗಳಿಗೆ ಯಾವುದೇ ತೊಂದರೆಯಾಗದಂತೆ ನೀರು ಹರಿಸಲು ಸಚಿವರು ಕಾಡಾ ಅಧಿಕಾರಿಗಳಿಗೆ ಸೂಚನೆ ನೀಡಿ ಸಮರ್ಪಕ ನಿರ್ವಹಣೆ ಮಾಡಲು ಸೂಚನೆ ನೀಡಿದರು. ಮತ್ತು ಬೇಸಿಗೆ ಹಂಗಾಮಿಗೆ ನೀಡಬೇಕಿರುವ ನೀರನ್ನು ಹಂಚಿಕೆಯನ್ವಯ ಎಲ್ಲಾ ಕಾಲುವೆಗಳಲ್ಲಿ ಹರಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ನಿರ್ಣಯಗಳು;
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿಸೆಂಬರ್ 1 ರಿಂದ ಜನವರಿ 19 ರ ವರೆಗೆ ಸರಾಸರಿ 2700 ಕ್ಯೂಸೆಕ್ಸ್‍ನಂತೆ, ಜನವರಿ 20 ರಿಂದ 31 ರ ವರೆಗೆ 100 ಕ್ಯೂಸೆಕ್ಸ್‍ನಂತೆ ವಿಜಯನಗರ ಕಾಲುವೆಗಳಿಗಾಗಿ, ಏಪ್ರಿಲ್ ರಿಂದ ರವರೆಗೆ 1380 ಕ್ಯೂಸೆಕ್ಸ್‍ನಂತೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಎಡದಂಡೆ ವಿಜಯನಗರ ಕಾಲುವೆಗಳು ಸೇರಿದಂತೆ ಏಪ್ರಿಲ್ 16 ರಿಂದ ಮೇ 10 ರವರೆಗೆ 100 ಕ್ಯೂಸೆಕ್ಸ್‍ನಂತೆ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ ಡಿಸೆಂಬರ್ 1 ರಿಂದ 5 ರವರೆಗೆ ಈಗಿರುವ ಬೆಳೆಗಳಿಗಾಗಿ ಮುಂದುವರೆಸುವುದು.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿಸೆಂಬರ್ 1 ರಿಂದ 25 ರ ವರೆಗೆ ನಿಲುಗಡೆ, ಡಿಸೆಂಬರ್ 26 ರಿಂದ ಮಾರ್ಚ್ 30 ರವರೆಗೆ ಸರಾಸರಿ 450 ಕ್ಯೂಸೆಕ್ಸ್‍ನಂತೆ ಆಂಧ್ರ ಪ್ರದೇಶದ ನೀರಿನೊಂದಿಗೆ ಮುಂದುವರೆಸುವುದು, ಅಥವಾ ಈ ಕಾಲುವೆಯಡಿ ನೀರು ಲಭ್ಯವಿರುವವರೆಗೆ ಇದರಲ್ಲಿ ಯಾವುದು ಮೊದಲೋ ಅದಕ್ಕೆ ಅನ್ವಯಿಸುತ್ತದೆ.
ರಾಯ ಬಸವಣ್ಣ ಕಾಲುವೆಗೆ ಡಿಸೆಂಬರ್ 10 ರಿಂದ ಜನವರಿ 10 ರವರೆಗೆ ನೀರು ನಿಲುಗಡೆ ಮಾಡಿ ಜನವರಿ 11 ರಿಂದ ಮೇ 31 ರ ವರೆಗೆ ಸರಾಸರಿ 160 ಕ್ಯೂಸೆಕ್ಸ್‍ನಂತೆ ಮುಂದುವರೆಸುವುದು.
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ನವಂಬರ್ 18 ರಿಂದ ಕಾಲುವೆ ಮಟ್ಟ ಇರುವರೆಗೆ 25 ಕ್ಯೂಸೆಕ್ಸ್‍ನಂತೆ ನೀರು ಹರಿಸುವುದನ್ನು ಮುಂದುವರೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಶಂಕರ್, ಸಂಸದರಾದ ಸಂಗಣ್ಣ ಕರಡಿ, ವಿ.ಎಸ್.ಉಗ್ರಪ್ಪ, ಶಾಸಕರಾದ ಪರಣ್ಣ ಮನವಳ್ಳಿ, ಬಸವರಾಜ್ ದಡೆಸೂಗೂರು, ಆನಂದ್ ಸಿಂಗ್, ತುಕಾರಾಮ್, ಗಣೇಶ್, ನಾಗೇಂದ್ರ, ಸೋಮಲಿಂಗಪ್ಪ, ಪ್ರತಾಪಗೌಡ ಪಾಟೀಲ್, ಶಿವರಾಜ ಪಾಟೀಲ್, ಬಸವನಗೌಡ ದದ್ದಲ್, ಬಸವರಾಜ ಪಾಟೀಲ್ ಇಟಗಿ, ರಾಜಾ ವೆಂಕಟಪ್ಪ ನಾಯಕ, ಶಿವರಾಜ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಭೋಸರಾಜ್ ಹಾಗೂ ಜಿಲ್ಲಾಧಿಕಾರಿ ಸುನೀಲ್‍ಕುಮಾರ್, ರಾಯಚೂರು ಜಿಲ್ಲಾಧಿಕಾರಿ ಶರತ್.ಬಿ, ಕಾಡಾ ಆಡಳಿತಾಧಿಕಾರಿ ಮಂಜಪ್ಪ, ಮುಖ್ಯ ಇಂಜಿನಿಯರ್ ಸಿದ್ದೇಶ್ವರ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error