ಬೆಳೆ ಸಾಲ ಮನ್ನಾ ಯೋಜನೆಯಡಿ ಸ್ವಯಂ ಘೋಷಣಾ ಪತ್ರ ಸಲ್ಲಿಸಲು ಅವಧಿ ವಿಸ್ತರಣೆ

ಕೊಪ್ಪಳ ಜ. ೧ : ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರು ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸಲು ಅವಧಿಯನ್ನು ಜ. ೧೯ ರವರೆಗೆ ವಿಸ್ತರಿಸಲಾಗಿದೆ.
ಕರ್ನಾಟಕ ಘನ ಸರ್ಕಾದರ ಮಹಾತ್ವಾಕಾಂಕ್ಷಿ ಯೋಜನೆಯಾದ ರೈತರ ಬೆಳೆ ಸಾಲ ಮನ್ನಾ ಯೋಜನೆ ಜಾರಿಯಲ್ಲಿದ್ದು, ರೈತರು ತಮ್ಮ ಸಾಲಕ್ಕೆ ಸಂಬಂಧಿಸಿದ ಆಧಾರಕಾರ್ಡ, ಪಡಿತರ ಚೀಟಿ ಹಾಗೂ ಸರ್ವೆ ನಂಬರಿನ ವಿವರಗಳನ್ನು ಸಂಬಂಧಪಟ್ಟ ಬ್ಯಾಂಕಿನಲ್ಲಿ ಹಾಗೂ ನಾಡಕಛೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಲ್ಲಿಸುವಂತೆ ಜ. ೧೫ ರವರೆಗೆ ಕೊನೆಯ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಶೇ.೮೧.೨೧ ರಷ್ಟು ರೈತರ ದಾಖಲೆಗಳನ್ನು ತಂತ್ರಾಂಶದಲ್ಲಿ ದಾಖಲು ಮಾಡಿ ಪ್ರಗತಿಯನ್ನು ಸಾಧಿಸಿದ್ದು, ಇನ್ನೂ ಸುಮಾರು ಶೇ.೧೮.೭೯ ರಷ್ಟು ಪ್ರಗತಿ ಸಾಧಿಸಲು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ರೈತರಿಗೆ ಕಾಲಾವಕಾಶ ಕಲ್ಪಿಸುವುದು ಸೂಕ್ತವೆಂದು ಮನಗಂಡು, ಇದೇ ಜ. ೧೯ ರವರಗೆ ಕಾಲಾವಧಿಯನ್ನು ವಿಸ್ತರಿಸಲಾಗಿದೆ.
ಘೋಷಣಾ ಪತ್ರ ಸಲ್ಲಿಸಿದ ರೈತರ ವಿವರ : ಕೊಪ್ಪಳ ಜಿಲ್ಲೆಯ ವಿವಿಧ ಬ್ಯಾಂಕಗಳಲ್ಲಿ ಸಾಲ ಪಡೆದ, ಘೋಷಣಾ ಪತ್ರ ಸಲ್ಲಿಸಿದ ರೈತರ ಮತ್ತು ಬಾಕಿ ಉಳಿದವರ ವಿವರ ಇಂತಿದೆ. ಜಿಲ್ಲೆಯ ವಿವಿಧ ಬ್ಯಾಂಕಗಳಲ್ಲಿ ಸಾಲ ಪಡೆದ ಒಟ್ಟು ರೈತರ ಸಂಖ್ಯೆ-೬೫೧೦೫, ಘೋಷಣಾ ಪತ್ರ ಸಲ್ಲಿಸಿದ ರೈತರ ಸಂಖ್ಯೆ-೫೨೮೭೫ ಮತ್ತು ಶೇ. ೮೧.೨೧ ಹಾಗೂ ಬಾಕಿ ಉಳಿದ ಸಂಖ್ಯೆ-೧೨೨೩೦, ಆಗಿದ್ದು, ಜಿಲ್ಲೆಯಲ್ಲಿ ಯಾರು ಇದವರೆಗೂ ಸ್ವಯಂ ಘೋಷಣಾ ಪತ್ರ ಸಲ್ಲಿಸಿಲ್ಲವೋ, ಅಂತಹ ರೈತರು ಜ. ೧೯ ರೊಳಗಾಗಿ ಪಡಿತರ ಚೀಟಿ, ಆಧಾರ ಕಾರ್ಡ ಝರಾಕ್ಸ್ ಪ್ರತಿ ಹಾಗೂ ಸರ್ವೇ ನಂಬರಿನ ಮಾಹಿತಿಯೊಂದಿಗೆ ಸ್ವಯಂ ಘೋಷಣಾ ಪತ್ರವನ್ನು ಸಂಬಂಧಪಟ್ಟ ಬ್ಯಾಂಕ ಅಥವಾ ನಾಡ ಕಛೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ನೀಡಿ ಸರ್ಕಾರದ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Please follow and like us:
error