ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಜ. ೩೧ ರಿಂದ ರೈತರ ನೊಂದಣಿ ಪ್ರಕ್ರಿಯೆ ಪ್ರಾರಂಭ- ಎಂ. ಕನಗವಲ್ಲಿ

ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಕೇಂದ್ರವನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಮೊದಲ ಹಂತದ ಪ್ರಕ್ರಿಯೆಯಾಗಿ ಜ. ೩೧ ರಿಂದ ರೈತರ ನೊಂದಣಿ ಕಾರ್ಯ ಪ್ರಾರಂಭಿಸಲಾಗುತ್ತಿದ್ದು, ಫೆ. ೨೪ ರವರೆಗೆ ನೊಂದಣಿ ಜರುಗಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಬೆಂಬಲ ಬೆಲೆ ಯೋಜನೆಯಡಿ ಕಡಲೆ ಬೆಳೆಯನ್ನು ಖರೀದಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ನಡೆಸಲಾದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಸೂಚನೆಯಂತೆ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕಿದೆ. ಇದಕ್ಕಾಗಿ ಸರ್ಕಾರದ ಸೂಚನೆಯಂತೆ ಖರೀದಿ ಕೇಂದ್ರ ಪ್ರಾರಂಭಕ್ಕೂ ಮೊದಲು ರೈತರ ನೊಂದಣಿ ಮಾಡಿಸಬೇಕಿದೆ. ಈ ನಿಟ್ಟಿನಲ್ಲಿ ಜ. ೩೧ ರಿಂದ ಜಿಲ್ಲೆಯ ೨೨ ಕಡೆಗಳಲ್ಲಿ ರೈತರ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಬೇಕು. ರೈತರ ನೊಂದಣಿ ಪ್ರಕ್ರಿಯೆ ಗಮನಿಸಿ, ಎಲ್ಲೆಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎನ್ನುವುದನ್ನು ನಿರ್ಧರಿಸಲಾಗುವುದು. ಖರೀದಿಸಲಾದ ಕಡಲೆ ದಾಸ್ತಾನು ಮಾಡಲು ಅಗತ್ಯ ಗೋದಾಮು ವ್ಯವಸ್ಥೆಯನ್ನು ಈಗಲೇ ಮಾಡಿಟ್ಟುಕೊಳ್ಳಬೇಕು. ರೈತರ ನೊಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನೋಂದಣಿ ಮಾಡಲು ಬರುವ ರೈತರ ಹೆಸರು ಮತ್ತು ಮೊಬೈಲ್ ಸಂಖ್ಯೆ ವಿವರವನ್ನು ಪಡೆದು, ಪ್ರತ್ಯೇಕವಾಗಿ ರಜಿಸ್ಟರ್ ನಿರ್ವಹಣೆ ಮಾಡಬೇಕು. ನೋಂದಣಿಗೂ ಟೋಕನ್ ವ್ಯವಸ್ಥೆ ಕೈಗೊಳ್ಳಬೇಕು. ರೈತರ ನೊಂದಣಿ ಕಾರ್ಯದಲ್ಲಿ ಯಾವುದೇ ತೊಂದರೆಗಳು ಉಂಟಾದಲ್ಲಿ ಸಂಬಂಧಪಟ್ಟ ನೋಡಲ್ ಅಧಿಕಾರಿಗಳ ಗಮನಕ್ಕೆ ತಂದು, ಸಮಸ್ಯೆ ಪರಿಹರಿಸಿಕೊಳ್ಳಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
೨೧ ಕೇಂದ್ರಗಳಲ್ಲಿ ರೈತರ ನೊಂದಣಿ : ಜ. ೩೧ ರಿಂದ ಫೆ.೨೪ ರವರೆಗೆ ಜಿಲ್ಲೆಯ ೨೨ ಕೇಂದ್ರಗಳಲ್ಲಿ ರೈತರ ನೋಂದಣಿ ಪ್ರಕ್ರಿಯೆ ಜರುಗಲಿದೆ. ಕಡಲೆ ಬೆಳೆದು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಯಸುವ ರೈತರು ಮೊದಲು, ಸಮೀಪದ ನೋಂದಣಿ ಕೇಂದ್ರಕ್ಕೆ ತೆರಳಿ ಹೆಸರು ನೋಂದಾಯಿಸಬೇಕು. ಯಲಬುರ್ಗಾ ತಾಲೂಕಿನಲ್ಲಿ ಯಲಬುರ್ಗಾ, ಮಂಗಳೂರ, ತಳಕಲ್, ಕುಕನೂರ, ಮಂಡಲಗಿರಿ, ಬನ್ನಿಕೊಪ್ಪ ಮತ್ತು ಮುಧೋಳ ಗ್ರಾಮಗಳ ಟಿಎಪಿಸಿಎಂಎಸ್/ಸೊಸೈಟಿಗಳಲ್ಲಿ ಮೊಬೈಲ್ ಆಪ್ ಮೂಲಕ ನೊಂದಣಿ ಮಾಡಲಾಗುವುದು. ಕೊಪ್ಪಳ ತಾಲೂಕಿನಲ್ಲಿ ಕೊಪ್ಪಳ, ಅಳವಂಡಿ, ಕಿನ್ನಾಳ, ಕವಲೂರ ಮತ್ತು ಹಿರೇಸಿಂದೋಗಿ. ಕುಷ್ಟಗಿ ತಾಲೂಕಿನಲ್ಲಿ ಕುಷ್ಟಗಿ, ಹಿರೇಮನ್ನಾಪುರ, ಮುದೇನೂರ, ಹನುಮಸಾಗರ, ತಾವರಗೇರಾ ಮತ್ತು ದೋಟಿಹಾಳ. ಗಂಗಾವತಿ ತಾಲೂಕಿನಲ್ಲಿ ಕಾರಟಗಿ, ಹುಲಿಹೈದರ, ನವಲಿ ಮತ್ತು ಕನಕಗಿರಿಯಲ್ಲಿ ರೈತರ ನೊಂದಣಿ ಪ್ರಕ್ರಿಯೆ ನಡೆಯಲಿದೆ.
ನೋಂದಣಿಗೆ ಟೋಕನ್ ವ್ಯವಸ್ಥೆ : ಬೆಂಬಲ ಬೆಲೆಯಲ್ಲಿ ಕಡಲೆ ಮಾರಾಟ ಮಾಡಬಯಸುವ ರೈತರ ನೋಂದಣಿ ಕಾರ್ಯ ಸುಗಮವಾಗಿ ಜರುಗಲು ಅನುಕೂಲವಾಗುವಂತೆ ಈ ಬಾರಿ ಟೋಕನ್ ನೀಡುವ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ನೋಂದಣಿ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನವೇ ಟೋಕನ್ ನೀಡಬೇಕು, ಟೋಕನ್ ಪಡೆಯುವ ರೈತರ ಹೆಸರು, ಊರು ಹಾಗೂ ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕ ರಜಿಸ್ಟರ್‌ನಲ್ಲಿ ನಮೂದಿಸಬೇಕು. ಸಂಬಂಧಪಟ್ಟ ರೈತರು ಬೆಳಿಗ್ಗೆಯೇ ನೋಂದಣಿ ಕೇಂದ್ರಕ್ಕೆ ತೆರಳಿ ಟೋಕನ್ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರತಿ ಕ್ವಿಂ. ಗೆ ರೂ. ೪೪೦೦ : ಪ್ರಸಕ್ತ ವರ್ಷದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಯನ್ನು ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂ. ಗೆ ರೂ. ೪೪೦೦ ರಂತೆ ಖರೀದಿಸಲಾಗುವುದು. ಕೊಪ್ಪಳ ಜಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಇವರನ್ನು ಖರೀದಿ ಏಜೆನ್ಸಿಯಾಗಿ ನಿಗದಿಪಡಿಸಲಾಗಿದೆ. ಸರ್ಕಾರದ ಆದೇಶದಂತೆ ಪ್ರತಿ ರೈತರಿಂದ ಗರಿಷ್ಟ ೧೦ ಕ್ವಿಂ. ಕಡಲೆ ಮಾತ್ರ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದರು.
ರೈತರಿಗೆ ಸೂಚನೆ: ಕಡಲೆ ಬೆಳೆದಿರುವ ರೈತರು, ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬಯಸಿದಲ್ಲಿ, ಜ. ೩೧ ರಿಂದ ಪ್ರಾರಂಭವಾಗುವ ನೋಂದಣಿ ಕೇಂದ್ರದಲ್ಲಿ ತಮ್ಮ ಹೆಸರು ನೋಂದಾಯಿಸಬೇಕು. ಹೆಸರು ನೋಂದಾಯಿಸಲು ಒರಿಜನಲ್ ಆಧಾರ್ ಕಾರ್ಡ್, ಆಧಾರ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಪಾಸ್ ಪುಸ್ತಕ, ಮೊಬೈಲ್ ನಂ., ಪಹಣಿ, ಗ್ರಾಮ ಲೆಕ್ಕಿಗರಿಂದ ಪಡೆದ ಬೆಳೆ ದೃಢೀಕರಣ ಪತ್ರ ಇವಿಷ್ಟು ದಾಖಲೆಗಳೊಂದಿಗೆ ನೋಂದಣಿ ಕೇಂದ್ರಕ್ಕೆ ತೆರಳಿ, ನೊಂದಣಿ ಮಾಡಿಸಬೇಕು. ಕಡಲೆ ಬೆಳೆಯು ಎಫ್‌ಎಕ್ಯೂ ಗುಣಮಟ್ಟದ್ದಾಗಿರುವುದು ಕಡ್ಡಾಯವಾಗಿದ್ದು, ಚೆನ್ನಾಗಿ ಒಣಗಿಸಿ, ಕಸ ರಹಿತವಾಗಿರಬೇಕು. ತೇವಾಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಇರುವಂತಿಲ್ಲ.
ನೋಡಲ್ ಅಧಿಕಾರಿಗಳ ನೇಮಕ : ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಹಾಗೂ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೊಪ್ಪಳ ತಾಲೂಕಿಗೆ ಜಂಟಿಕೃಷಿ ನಿರ್ದೇಶಕ ವೀರೇಶ ಅಂಗಡಿ, ಕುಷ್ಟಗಿ ತಾಲೂಕಿಗೆ ಉಪವಿಭಾಗಾಧಿಕಾರಿ ರವಿ ತಿರ್ಲಾಪುರ, ಯಲಬುರ್ಗಾ ತಾಲೂಕಿಗೆ ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭಾಕರ ಅಂಗಡಿ, ಹಾಗೂ ಗಂಗಾವತಿ ತಾಲೂಕಿಗೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಆಯಾ ತಾಲೂಕು ವ್ಯಾಪ್ತಿಯಲ್ಲಿನ ರೈತರ ನೊಂದಣಿ ಹಾಗೂ ಖರೀದಿ ಪ್ರಕ್ರಿಯೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ನೋಡಲ್ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
೬೪೩೪೧ ಹೆ. ಕ್ಷೇತ್ರದಲ್ಲಿ ಕಡಲೆ : ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಒಟ್ಟಾರೆ ಸುಮಾರು ೬೪೩೪೧ ಹೆ. ಕ್ಷೇತ್ರದಲ್ಲಿ ಕಡಲೆ ಬೆಳೆದಿರುವ ಬಗ್ಗೆ ವರದಿ ಇದ್ದು, ಸುಮಾರು ೭೭೮೩೩ ಟನ್ ಕಡಲೆ ಬೆಳೆ ಉತ್ಪಾದನೆಯ ಅಂದಾಜು ಮಾಡಲಾಗಿದೆ. ಈ ಪೈಕಿ ಯಲಬುರ್ಗಾ ತಾಲೂಕಿನಲ್ಲಿ ಅತಿ ಹೆಚ್ಚು ೨೭೦೩೬ ಹೆ. ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದ್ದು, ೩೨೬೧೧ ಟನ್ ಉತ್ಪಾದನೆ ಆಗಿರುವ ಸಾಧ್ಯತೆ ಇದೆ. ಕೊಪ್ಪಳ ತಾಲೂಕಿನಲ್ಲಿ ೧೩೮೪೫ ಹೆ. ನಲ್ಲಿ ೧೬೮೬೦೨ ಟನ್, ಕುಷ್ಟಗಿ ತಾಲೂಕಿನಲ್ಲಿ ೧೨೭೬೦ ಹೆ. ನಲ್ಲಿ ೧೫೪೩೮ ಟನ್ ಹಾಗೂ ಗಂಗಾವತಿ ತಾಲೂಕಿನಲ್ಲಿ ೧೦೭೦೦ ಹೆ. ನಲ್ಲಿ ಅಂದಾಜು ೧೨೯೨೪ ಟನ್ ಉತ್ಪಾದನೆಯ ಸಾಧ್ಯತೆ ಇದೆ ಎಂದು ಜಂಟಿಕೃಷಿ ನಿರ್ದೇಶಕ ವೀರೇಶ ಹುನಗುಂದ ಅವರು ವಿವರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ಶ್ರೀಕಾಂತ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ, ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭಾಕರ ಅಂಗಡಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಎಪಿಎಂಸಿ ಅಧಿಕಾರಿಗಳು, ತಾಲೂಕುಗಳ ತಹಸಿಲ್ದಾರರು ಪಾಲ್ಗೊಂಡಿದ್ದರು.

Please follow and like us:
error