ಬಿಜೆಪಿ ಅಭ್ಯರ್ಥಿಯಾಗಿ ಸಂಗಣ್ಣ ಕರಡಿ ಹೆಸರು ಘೋಷಣೆ ಸಾಧ್ಯತೆ

ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಅಭಿವೃದ್ಧಿ ಮಾನದಂಡ | ಫೆ.೨೦ ರೊಳಗೆ ಮೊದಲ ಪಟ್ಟಿ ಬಿಡುಗಡೆ
ಅಭ್ಯರ್ಥಿಯಾಗಿ ಸಂಗಣ್ಣ ಕರಡಿ ಹೆಸರು ಘೋಷಣೆ ಸಾಧ್ಯತೆ

ಕೊಪ್ಪಳ: ಅಭಿವೃದ್ಧಿಯ ಮಾನದಂಡದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು  ನಿರ್ಧರಿಸಿರುವ ಭಾರತೀಯ ಜನತಾ ಪಕ್ಷ, ಗೆಲ್ಲಬಲ್ಲ ಅರ್ಹತೆ ಹೊಂದಿರುವ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್ ನೀಡಲಿದೆ. ಈ ಹಿನ್ನೆಲೆಯಲ್ಲಿ, ಹಾಲಿ ಶಾಸಕರು ಹಾಗೂ ಸಂಸದರ ಸಾಧನೆಗಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಉತ್ತಮ ಸಾಧನೆ ತೋರಿದವರಿಗೆ ಆದ್ಯತೆಯ ಮೇರೆಗೆ ಟಿಕೆಟ್ ನೀಡಲು ನಿರ್ಧರಿಸಿದೆ.
ಈ ಪೈಕಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ಅತ್ಯುತ್ತಮ ಸಾಧನೆ ತೋರಿದ ಸಂಸದರ ಪೈಕಿ ಒಬ್ಬರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಅವರ ಹೆಸರನ್ನೇ ಘೋಷಿಸಲು ಪಕ್ಷ ಇಂಗಿತ ತೋರಿದೆ.
ನಿಗದಿತ ವೇಳಾಪಟ್ಟಿಯ ಪ್ರಕಾರ, ಫೆ. ೧೫ (ಗುರುವಾರ) ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಇದು ತಪ್ಪಿದರೆ, ಫೆ.೨೦ ರಂದು ಮೊದಲ ಪಟ್ಟಿ ಪ್ರಕಟವಾಗಲೇಬೇಕಿದೆ. ಈ ಹಿನ್ನೆಲೆಯಲ್ಲಿ, ಮೊದಲ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕಿರುವ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಸಂಸದ ಸಂಗಣ್ಣ ಕರಡಿ ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಸೂಚಿತವಾಗಿದ್ದಾರೆ ಎನ್ನುತ್ತವೆ ಪಕ್ಷದ ಉನ್ನತ ಮೂಲಗಳು.

ಕೇಂದ್ರ ಯೋಜನೆಗಳ ಅನುಷ್ಠಾನ: ಸಂಗಣ್ಣ ಕರಡಿ ಅವರ ಆಯ್ಕೆಗೆ ಅವರ ಸಾಧನೆಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗಿದೆ. ಇನ್ನು ಅಧಿಕಾರ ಸ್ಥಾನದಲ್ಲಿ ಇಲ್ಲದ ಅಭ್ಯರ್ಥಿಗಳ ಪೈಕಿ, ಅವರ ಜನಪರ ನಿಲುವು, ಕಾರ್ಯಕರ್ತರೊಂದಿಗೆ ಬೆರೆಯುವ ಪ್ರಮಾಣ, ಬೂತ್ ಮಟ್ಟದ ಸಂಘಟನೆ, ವಾಕ್ಚಾತುರ್ಯ ಮುಂತಾದವನ್ನು ಪರಿಗಣಿಸಲಾಗಿದೆ.
ರಸ್ತೆ, ರೈಲು, ಶಿಕ್ಷಣ, ಅಡುಗೆ ಅನಿಲ, ಆಸ್ಪತ್ರೆ ಮುಂತಾದ ಮೂಲಸೌಕರ್ಯಗಳಿಗೆ ದೊಡ್ಡಮಟ್ಟದ ಅನುದಾನ ತಂದಿದ್ದಲ್ಲದೇ ಕ್ಷೇತ್ರದಾದ್ಯಂತ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಸಂಗಣ್ಣ ಕರಡಿಯವರ ಸಾಧನೆ ಅವರನ್ನು ಅಭ್ಯರ್ಥಿ ಎಂದು ಘೋಷಿಸುವ ಹಂತಕ್ಕೆ ತಲಪಿಸಿದೆ. ಸಂಸದರ ಜನಪರ ಯೋಜನೆಗಳ ವಿವರಗಳನ್ನು ಕೂಲಂಕಷವಾಗಿ ಸಂಗ್ರಹಿಸಿರುವ ಪಕ್ಷದ ಹೈಕಮಾಂಡ್, ಇವರಿಗೆ ಟಿಕೆಟ್ ನೀಡಿದರೆ ಗೆಲ್ಲುವುದು ಸುಲಭ ಎಂಬುದನ್ನು ಗುರುತಿಸಿದೆ.

ಸ್ವಂತ ಮತ ಬ್ಯಾಂಕ್: ಕಳೆದ ಇಪ್ಪತ್ತು ವರ್ಷಗಳಲ್ಲಿ, ಪಕ್ಷೇತರ, ಜೆಡಿಯು, ಜೆಡಿಎಸ್ ಹಾಗೂ ಬಿಜೆಪಿ ಮೂಲಕ ಗೆದ್ದುಬಂದು ದಾಖಲೆ ಸಂಗಣ್ಣ ಕರಡಿ ಅವರದು. ಪಕ್ಷದ ಹಂಗಿಲ್ಲದೇ, ಸ್ವಂತ ವರ್ಚಸ್ಸಿನಿಂದ ಅವರು ಗೆದ್ದು ಬಂದಿರುವುದು, ಜನರೊಂದಿಗೆ ಬೆರೆಯುವ ಸರಳತೆ, ಜಾತಿ-ಧರ್ಮ ಮೀರಿ ಬೆಂಬಲಿಗರನ್ನು ಹೊಂದಿರುವ ಅಂಶಗಳಿಗೂ ಪಕ್ಷ ಹೆಚ್ಚಿನ ಆದ್ಯತೆ ನೀಡಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸುಲಭ ಗೆಲುವು ಸಾಧಿಸಬೇಕೆಂದಿದ್ದರೆ, ಸಂಗಣ್ಣ ಕರಡಿಯವರೇ ಉತ್ತಮ ಆಯ್ಕೆ ಎಂಬ ಅಭಿಪ್ರಾಯ ಪಕ್ಷದ ಸಮೀಕ್ಷಾಕಾರರು ಹಾಗೂ ಹಿರಿಯ ನಾಯಕರಿಂದಲೂ ವ್ಯಕ್ತವಾಗಿದೆ ಎನ್ನುತ್ತವೆ ಪಕ್ಷದ ಮೂಲಗಳು.

ಫೆ.೨೦ ರೊಳಗೆ ಪ್ರಕಟ: ಹಾಲಿ ಸಂಸದರಿಗೆ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಬಾರದೆಂದು ಒಂದೊಮ್ಮೆ ನಿರ್ಧಾರವಾದರೆ, ತಮ್ಮ ಪುತ್ರ ಅಮರೇಶ ಕರಡಿ ಅವರಿಗೆ ಟಿಕೆಟ್ ನೀಡುವಂತೆ ಸಂಗಣ್ಣ ಕರಡಿ ವಿನಂತಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಿರುವ ಹಿಟ್ನಾಳ ಕುಟುಂಬವನ್ನು ಎದುರಿಸಿ ಗೆಲ್ಲುವ ಸಾಮರ್ಥ್ಯ ಇರುವುದು ಕರಡಿ ಕುಟುಂಬಕ್ಕೆ ಮಾತ್ರ ಎಂಬ ಅಂಶವನ್ನೂ ಸಂಸದರು ವರಿಷ್ಠರ ಗಮನಕ್ಕೆ ತಂದಿದ್ದಾರೆ.

ಫೆ.೧೫ ರಂದು ಅಥವಾ ಫೆ. ೨೦ರೊಳಗೆ ಪ್ರಕಟವಾಗಲಿರುವ ಮೊದಲ ಪಟ್ಟಿಯಲ್ಲಿಯೇ ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರು ಪ್ರಕಟವಾಗುವುದು ಬಹುತೇಕ ಖಚಿತವಾಗಿದೆ. ಆ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲಾಗುವುದು ಎಂಬ ಅನಿಸಿಕೆ ಪಕ್ಷದ ಉನ್ನತ ವಲಯದಲ್ಲಿ ವ್ಯಕ್ತವಾಗಿದೆ.

Please follow and like us:
error