ಬಾಲ್ಯ ವಿವಾಹ, ಬಾಲ ಕಾರ್ಮಿಕತೆ ನಿರ್ಮೂಲನೆ ಹಾಗೂ ಸ್ವಚ್ಛ ಭಾರತ್ : ಜಾಗೃತಿ ಜಾಥಕ್ಕೆ ಚಾಲನೆ


ಕೊಪ್ಪಳ ಜ.  “ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಸರ್ಕಾರಿ ಶಾಲೆಗಳ ಉನ್ನತೀಕರಣ ಮತ್ತು ಹಳೇ ವಿದ್ಯಾರ್ಥಿ ಸಂಘಗಳ ಬಲವರ್ಧನೆ ಹಾಗೂ ಸ್ವಚ್ಛ ಭಾರತ್ ಆಂದೋಲನ್” ಕುರಿತು ಕೊಪ್ಪಳ ನಗರದಲ್ಲಿ ಗುರುವಾರದಂದು ಆಯೋಜಿಸಲಾದ ಜಾಗೃತಿ ಜಾಥಕ್ಕೆ ಗವಿಸಿದ್ಧೇಶ್ವರ ಸ್ವಾಮಿಗಳು ಚಾಲನೆ ನೀಡಿದರು.
ಜಾಥಾ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಕಂಪನಿಗಳ ಸಹಯೋಗದಲ್ಲಿ ಶ್ರೀಗವಿಮಠದ ಆವರಣದಲ್ಲಿ ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನೀತಾ ತೊರವಿ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್, ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣ ಯೋಜನೆಯ ಹರೀಶ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರೇಂದ್ರ ನಾವದಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ವಾರ್ತಾ ಇಲಾಖೆಯ ಎಂ. ಅವಿನಾಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದು ಡಿ. ಎಲಿಗಾರ, ಸಂದಿಗ್ಧ ಚಲನಚಿತ್ರದ ನಿರ್ದೇಶಕ ಸುಚಿಂದ್ರ ಪ್ರಸಾದ, ಚಿತ್ರನಟ ಮಹೇಶ ದೇವು ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಾಗೃತಿ ರ್‍ಯಾಲಿಯು ಗವಿಮಠದಿಂದ ಪ್ರಾರಂಭಗೊಂಡು ಗಡಿಯಾರ ಕಂಬ ಮಾರ್ಗವಾಗಿ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದ ವರೆಗೆ ಯಶಸ್ವಿಯಾಗಿ ಜರುಗಿತು. ಜಾಥಾ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತಾ ಮತ್ತು ಕಹಳೆ ವಾದನ ಕಲಾ ತಂಡಗಳು ಭಾಗವಹಿಸಿದ್ದು, ಆಕರ್ಷಕ ಪ್ರದರ್ಶನವನ್ನು ನೀಡಿದರು. ಅಲ್ಲದೇ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಹ ರ್‍ಯಾಲಿಯಲ್ಲಿ ಪಾಲ್ಗೋಂಡು “ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಸರ್ಕಾರಿ ಶಾಲೆಗಳ ಉನ್ನತೀಕರಣ ಮತ್ತು ಹಳೇ ವಿದ್ಯಾರ್ಥಿ ಸಂಘಗಳ ಬಲವರ್ಧನೆ ಹಾಗೂ ಸ್ವಚ್ಛ ಭಾರತ್” ಕುರಿತಾದ ಜಾಗೃತಿ ಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.