ಬಾಲ್ಯ ವಿವಾಹ ನಿಷೇಧ ಹಾಗೂ ತಿದ್ದುಪಡಿ ಕಾಯ್ದೆ : ಒಂದು ದಿನದ ಕಾರ್ಯಾಗಾರ


ಕಾಯ್ದೆ ಸರ್ಮಪಕ ಅನುಷ್ಠಾನಕ್ಕೆ ಪ್ರಾಚಾರ್ಯರ ಹಾಗೂ ವಾರ್ಡನ್‌ಗಳ ಪಾತ್ರ ಪ್ರಮುಖ : ಈ. ಪಾಂಚಾಳ
ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸರ್ಮಪಕ ಅನುಷ್ಠಾನದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ವಸತಿ ನಿಲಯಗಳ ವಾರ್ಡನ್‌ಗಳ ಪಾತ್ರವು ಅತ್ಯಂತ ಪ್ರಮುಖವಾದದ್ದಾಗಿದೆ ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಈರಣ್ಣ ಪಾಂಚಾಳ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ “ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬” ಹಾಗೂ “ಕರ್ನಾಟಕ ತಿದ್ದುಪಡಿ ಕಾಯ್ದೆ-೨೦೧೬”ರ ಕುರಿತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ವಸತಿ ನಿಲಯಗಳ ವಾರ್ಡನ್‌ಗಳಿಗೆ ಆರ್,ಐ.ಎಸ್.ಟ್ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವದಕ್ಕಾಗಿ ಕರ್ನಾಟಕ ರಾಜ್ಯವು ಇಡೀ ದೇಶದ ಗಮನವನ್ನು ಸೆಳೆದ ರಾಜ್ಯವಾಗಿದೆ. ಕಾಯ್ದೆಗೆ ಕರ್ನಾಟಕ ಸರ್ಕಾರವು ೨೦೧೬ರಲ್ಲಿ ತಂದ ತಿದ್ದುಪಡಿಗಳು ಪ್ರಮುಖವಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಗಮನವನ್ನು ಸೆಳೆದಿದೆ. ಈ ತಿದ್ದುಪಡಿಯಲ್ಲಿನ ಪ್ರಮುಖ ಅಂಶಗಳನ್ನು ಮನಗೊಂಡ ಕೇಂದ್ರ ಸರ್ಕಾರವು ಸಹ ಮೂಲ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿದೆ. ಕಾಯ್ದೆಯ ಸರ್ಮಪಕ ಅನುಷ್ಠಾನದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ವಸತಿ ನಿಲಯಗಳ ವಾರ್ಡನ್‌ಗಳ ಪಾತ್ರವು ಅತ್ಯಂತ ಪ್ರಮುಖವಾದದ್ದಾಗಿದೆ. ಕರ್ನಾಟಕ ರಾಜ್ಯವನ್ನು ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸರಕಾರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳನ್ನು ಸಹ ಬಾಲ್ಯ ವಿವಾಹ ನಿಷೇದಾಧಿಕಾರಿಗಳನ್ನಾಗಿ ನೇಮಿಸಿರುತ್ತದೆ. ಈ ಅಧಿಕಾರಿಗಳು ಅವರ ವಲಯ ವ್ಯಾಪ್ತಿಯಲ್ಲಿ ಯಾವುದೇ ಬಾಲ್ಯ ವಿವಾಹಗಳು ಜರುಗದಂತೆ ನೋಡಿಕೊಳ್ಳುವದು ಅವರ ಜವಾಬ್ದಾರಿಯಾಗಿದ್ದು, ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಸರಕಾರವು ನಿಮಗೆ ಅರಕ್ಷಕ ನಿರೀಕ್ಷಕರ ಅಧಿಕಾರವನ್ನು ನೀಡಿದೆ. ಆದ್ದರಿಂದ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಯಾರೇ ಪ್ರಭಾವಿ ವ್ಯಕ್ತಿ ಅಥವಾ ಸಂಸ್ಥೆ ನಿಮ್ಮ ಮೇಲೆ ನಕಾರಾತ್ಮಕ ಪ್ರಭಾವ ಬೀರಿದಲ್ಲಿ ಅವರ ವಿರುದ್ಧವು ಸಹ ಬಾಲ್ಯ ವಿವಾಹಕ್ಕೆ ಕುಮಕ್ಕು ಅಥವಾ ಪ್ರೋತ್ಸಾಹಿಸಿದವರು ಎಂದು ಕಲಂ ೧೦ ಹಾಗೂ ೧೧ರಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದಾಗಿರುತ್ತದೆ. ಒಂದು ವೇಳೆ ಯಾರೇ ಪ್ರಭಾವಿ ವ್ಯಕ್ತಿ ಯಾವುದೇ ಪ್ರಭಾವವನ್ನು ಬೀರಿದಲ್ಲಿ ಕಾಯ್ದೆ ಕಲಂ ೧೩ರಡಿಯಲ್ಲಿ ಬಾಲ್ಯ ವಿವಾಹವನ್ನು ಅಥವಾ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ತಡೆಯಾಜ್ಞೆಯನ್ನು ಸಂಬಂದಿಸಿದ ವ್ಯಾಪ್ತಿಯ ನ್ಯಾಯಾಲಯ ದಿಂದ ತಡೆಯಾಜ್ಞೆಯನ್ನು ಸಹ ಪಡೆದುಕೊಳ್ಳಬಹುದಾಗಿರುತ್ತದೆ. ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಬೇಕಾದ ಯಾವುದೇ ನೆರವು, ಕಾನೂನು ನೆರವನ್ನು ಸಹ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಹೊರಡಿಸಿ ಒಂದು ಬಾಲ್ಯ ವಿವಾಹವನ್ನು ತಡೆಹಿಡಿಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಈರಣ್ಣ ಪಾಂಚಾಳ ಅವರು ಹೇಳಿದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ಅಥವಾ ಹಲ್ಲೆಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-೨೦೧೨ಗೆ ತಿದ್ದುಪಡಿ ಮಾಡಿದ್ದು, ಅಪರಾಧ ತಿದ್ದುಪಡಿ ಕಾಯ್ದೆ-೨೦೧೬ನ್ನು ಜಾರಿಗೊಳಿಸಿದೆ. ಈ ಕಾಯ್ದೆ ಅನ್ವಯ ೧೨ವರ್ಷದೊಳಗಿನ ವಯೋಮಾನದ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಹಲ್ಲೆ ಮಾಡುವುದು ತೀವ್ರತರ ಶಿಕ್ಷಾರ್ಹ ಅಪರಾಧವಾಗಿದೆ. ಭಾರತೀಯ ದಂಡ ಸಂಹಿತೆ ೩೭೬ಎಬಿ ಪ್ರಕಾರ ಈ ಕೃತ್ಯಕ್ಕೆ ಕನಿಷ್ಠ ೨೦ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು ದಂಡ ಅಥವಾ ಮರಣ ದಂಡನೆ ಶಿಕ್ಷೆಯನ್ನು ವಿಧಿಸಬಹುದಾಗಿದೆ. ೧೬ ವರ್ಷದೊಳಗಿನ ವಯೋಮಾನದ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಹಲ್ಲೆ ಮಾಡುವುದು ತೀವ್ರತರ ಶಿಕ್ಷಾರ್ಹ ಅಪರಾಧವಾಗಿದೆ. ಭಾರತೀಯ ದಂಡ ಸಂಹಿತೆ ೩೭೬ಡಿಎ ಪ್ರಕಾರ ಈ ಕೃತ್ಯಕ್ಕೆ ಕನಿಷ್ಠ ೨೦ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು ದಂಡ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವೂ ಸಹ ಅತ್ಯಾಚಾರವೆಂದು ಘನ ಸರ್ವೋಚ್ಛ ನ್ಯಾಯಾಲಯ ಆದೇಶಿಸಿದ್ದು, ಬಾಲ್ಯವಿವಾಹವಾಗಿ ಪತ್ನಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದರೆ ಅದೂ ಸಹ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-೨೦೧೨ರನ್ವಯ ಅಪರಾಧವೆಂದು ಪರಿಗಣಿಸಿ ಶಿಕ್ಷೆ ವಿಧಿಸಬಹುದಾಗಿದೆ. ಯಾವದೇ ಕಾರಣಕ್ಕೂ ನಿಮ್ಮ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ಜರುಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ಈ ಕುರಿತು ಸಮುದಾಯದಲ್ಲಿ ವ್ಯಾಪಕ ಪ್ರಚಾರವನ್ನು ಕೈಗೊಳ್ಳಲು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಯುನಿಸೆಫ್‌ನ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಹರೀಶ ಜೋಗಿ ಅವರು ಮಕ್ಕಳ ಹಕ್ಕುಗಳ ಸಂರಕ್ಷಣೆಯ ಕುರಿತು ತರಬೇತಿಯನ್ನು ನೀಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು, ಹಾಸ್ಟೇಲ್ ವಾರ್ಡನಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ ಕಾರ್ಯಕ್ರಮ ನಿರೂಪಿಸಿದರು. ದೇವರಾಜ್ ತಿಲಗರ ಕೊನೆಯಲ್ಲಿ ವಂದಿಸಿದರು.

Please follow and like us:
error