ಬಾಲ್ಯವಿವಾಹ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ನಿಷೇಧಾಧಿಕಾರಿಗಳ ಪಾತ್ರ ಮುಖ್ಯ : ಟಿ. ಶ್ರೀನಿವಾಸ

ಕೊಪ್ಪಳ ಆ. : ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಗ್ರಾಮ ಪಂಚಾಯತ್ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಇವರ ಸಹಯೋಗದಲ್ಲಿ ಬಾಲ್ಯ ವಿವಾಹ ನಿಷೇಧ ಮತ್ತು ಮಕ್ಕಳ ಹಕ್ಕುಗಳ” ಕುರಿತು ತಾಲೂಕಿನ ಹೊಸಬಂಡಿ ಹರ್ಲಾಪುರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಲಾದ ಜಾಗೃತಿ ಜಾಥಾ ಹಾಗೂ ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತರೆ ಮಕ್ಕಳೊಂದಿಗೆ ಆಟವಾಡುತ್ತಾ, ಬಾಲ್ಯದ ಸುಮಧುರ ಕ್ಷಣಗಳನ್ನು ಅನುಭವಿಸಬೇಕಾದ ಹೆಣ್ಣುಮಕ್ಕಳು ಹಸೆಮಣೆಯನ್ನು ಏರುತ್ತಿದ್ದಾರೆ. ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ಕಟ್ಟುಕೊಳ್ಳಬೇಕಾಗಿರುವ ಅವರ ಹೆಗಲ ಮೇಲೆ ಕುಟುಂಬದ ಜವಾಬ್ದಾರಿ, ಮಡಿಲಲ್ಲಿ ಕರುಳಕುಡಿ, ರಾಜ್ಯದಲ್ಲಿ ಜೀವಂತವಾಗಿರುವ ಬಾಲ್ಯ ವಿವಾಹ ಪಿಡುಗಿಗೆ ಹೆಣ್ಣು ಮಕ್ಕಳ ಹೊಂಗನಸುಗಳು ಕಮರಿ ಹೋಗುತ್ತಿವೆ. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವರದಿಯನ್ವಯ ತಾಯಂದಿರ ಪ್ರಮಾಣ ಶೇ ೯.೭ ರಷ್ಟಿದೆ. ಇದು ರಾಜ್ಯದಲ್ಲಿ ಅತೀ ಹೆಚ್ಚಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯರು ತಾಯಂದಿರಾದಲ್ಲಿ ಅವರು ಮತ್ತು ಅವರಿಗೆ ಜನಿಸುವ ಮಕ್ಕಳು ಸಹ ಅಪೌಷ್ಠಿಕತೆಯಿಂದ ಬಳಲಬಹುದಾಗಿರುತ್ತದೆ. ಇದರಿಂದಾಗಿಯೇ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಹೆಚ್ಚಾಗುತ್ತದೆ. ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಮತ್ತು ತಾಯಿ, ಮಕ್ಕಳ ಅಪೌಷ್ಠಿಕತೆ ನಿವಾರಣೆ, ತಾಯಿ, ಶಿಶು ಮರಣ ಪ್ರಮಾಣ ತಗ್ಗಿಸಲು ಹಾಗೂ ಮಕ್ಕಳ ಮೇಲಾಗುವ ದೌರ್ಜನ್ಯ ತಡೆಯಲ್ಲು ಭಾರತ ಸರ್ಕಾರವು ೨೦೦೬ರಲ್ಲಿಯೇ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದೆ. ಇದಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ತಿದ್ದುಪಡಿಯನ್ನು ಮಾಡಿದ್ದು, ಅದರನ್ವಯ ಬಾಲ್ಯ ವಿವಾಹವನ್ನು ಮಾಡಿಕೊಂಡ, ಮಾಡಿದ ಹಾಗೂ ಪ್ರೋತ್ಸಾಹಿಸಿದವರಿಗೆ ಹಾಗೂ ಭಾಗವಹಿಸಿದವರಿಗೂ ಸಹ ೧ ವರ್ಷದಿಂದ ೨ ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ರೂ. ೧ ಲಕ್ಷ ದಂಡವನ್ನು ವಿಧಿಸಬಹುದಾಗಿರುತ್ತದೆ.
ಬಾಲ್ಯವಿವಾಹ ನಿಷೇಧ ಕಾಯ್ದೆಯಡಿಯಲ್ಲಿ ಜಿಲ್ಲೆಯಲ್ಲಿ ೨೧ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ೩ ಪ್ರಕರಣಗಳು ಬಾಲ್ಯ ವಿವಾಹ ಮಾಡಲು ಪ್ರಯತ್ನಿಸಿದ ಹಾಗೂ ಒಂದು ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ, ಅವಳ ಗರ್ಭಿಣಿಯಾಗಲು ಕಾರಣವಾದ ಪತಿ ಮತ್ತು ಪತಿಯ ತಂದೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ರೀತಿಯ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿರುವದು ದುರಾದೃಷ್ಠಕರವಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಗ್ರಾಮ ಪಂಚಾಯತ್ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಾದ ಕಂದಾಯ ನಿರೀಕ್ಷಕರು, ಶಾಲಾ ಮುಖ್ಯೋಪಾಧ್ಯಾಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜಾಗೃತಿಯನ್ನು ಮೂಡಿಸುವದರೊಂದಿಗೆ ಬಾಲ್ಯ ವಿವಾಹಗಳನ್ನು ತಡೆಗಟ್ಟಬೇಕಾಗುತ್ತದೆ. ಬಾಲ್ಯ ವಿವಾಹಗಳನ್ನು ತಡೆಯಲು ಯಾವುದೇ ಸಹಾಯ ಬೇಕಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೀಡಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಟಿ. ಶ್ರೀನಿವಾಸ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಬಂಡಿ ಹರ್ಲಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಕಮಲಮ್ಮ ತಿಪ್ಪಣನವರ ವಹಿಸಿದ್ದರು. ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಡಿ., ಶಿಶು ಅಭಿವೃದ್ಧಿ ಯಜನಾಧಿಕಾರಿ ಸಿಂಧು ಅಂಗಡಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪಾರ್ವತಿ ಸೇರಿದಂತೆ ಸರ್ವಸದಸ್ಯರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು. ರವಿಕುಮಾರ ಪವಾರ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Please follow and like us:
error

Related posts