You are here
Home > Koppal News > ಬಾಲಮಂದಿರದ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿ- ಎಂ. ಕನಗವಲ್ಲಿ

ಬಾಲಮಂದಿರದ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿ- ಎಂ. ಕನಗವಲ್ಲಿ

ವಿವಿಧ ಕಾರಣಗಳಿಂದ ಬಾಲಮಂದಿರಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಬಾಲಮಂದಿರದ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ವತಿಯಿಂದ ಶನಿವಾರದಂದು ಕೊಪ್ಪಳದ ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ಬಾಲಕರಿಗೆ ಹಾಗೂ ಬಾಲಕಿಯರಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳು ವಿವಿಧ ಕಾರಣಗಳಿಂದ ಬಾಲಮಂದಿರಗಳ ಆಶ್ರಯ ಪಡೆದಿದ್ದು, ಅವರ ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿ, ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶ್ರಮ ವಹಿಸಬೇಕು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಮಕ್ಕಳನ್ನುದ್ದೇಶಿಸಿ ಮಾತನಾಡಿ, ಮಕ್ಕಳು ಕಲಿಕಾ ಸಾಮಗ್ರಿಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ ಸಹಾಯ, ಸಹಕಾರ ನೀಡಲು ಜಿಲ್ಲಾಡಳಿತ ಸದಾ ಸಿದ್ಧವಿದೆ. ಯಾವುದೇ ಬಗೆಯ ಸಮಸ್ಯೆಗಳಿದ್ದಲ್ಲಿ ಮುಕ್ತವಾಗಿ ತಿಳಿಸಬೇಕು. ಮಕ್ಕಳು ಅಧ್ಯಯನಶೀಲರಾಗಿ, ಪುಸ್ತಕಗಳು ಇತರೆ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಮಕ್ಕಳಿಗೆ ಶಾಲಾ ಬ್ಯಾಗ್, ಸಾಮಾನ್ಯ ಜ್ಞಾನ, ವ್ಯಾಕರಣ, ಸ್ಪೋಕನ್ ಇಂಗ್ಲೀಷ್ ಸೇರಿದಂತೆ ಉಪಯುಕ್ತ ಪುಸ್ತಕಗಳನ್ನು ವಿತರಿಸಲಾಯಿತು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲಕಾರ್ಮಿಕ ನಿರ್ಮೂಲನೆಗಾಗಿ ಕೈಗೊಂಡಿರುವ ಕ್ರಮಗಳು ಹಾಗೂ ಯೋಜನೆಯಡಿ ಲಭ್ಯವಿರುವ ಸೌಲಭ್ಯಗಳ ಕುರಿತು ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರೇಣುಕಾನಂದ, ಬಾಲಮಂದಿರದ ಅಧೀಕ್ಷಕಿ ರೋಹಿಣಿ ಕೊಟಗಾರ, ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ಉಪಸ್ಥಿತರಿದ್ದರು. ಬಾಲಕಾರ್ಮಿಕ ಯೋಜನಾ ಸಂಘದ ಸಿಬ್ಬಂದಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಬಾಲಕಿಯರ ಬಾಲಮಂದಿರದ ಮಕ್ಕಳು ಪಾಲ್ಗೊಂಡಿದ್ದರು.

Top