ಬಸವ ಪಟ ಆರೋಹಣ , -ಗವಿಮಠದ ಜಾತ್ರೆಗೆ ಚಾಲನೆ,ಪಂಚ ಕಳಸೋತ್ಸವ

ಕೊಪ್ಪಳ: ನಗರದ ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಸಂಜೆ ೫ ಘಂಟೆಗೆ ‘ಬಸವ ಪಟ ಆರೋಹಣ’ ಎಂಬ ಧಾರ್ಮಿಕ ಕಾರ್ಯಕ್ರಮವೂ ಜರುಗಿತು. ಭಕ್ತರು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆ ವಿಧಿವಿಧಾನವಾಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ ೫ ಸುತ್ತ ಪ್ರದಕ್ಷಿಣೆ ಹಾಕುತ್ತಾ ಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಶ್ರೀ ಗವಿಮಠದ ಕರ್ತೃ ಗದ್ದುಗೆಯ ದ್ವಾರ ಬಾಗಿಲಿನ ಎದುರಿಗಿರುವ ಕಲ್ಲಿನ ಮೇಲ್ಮಂಟಪದ ಕಂಭಕ್ಕೆ ಬಸವ ಪಟ ಕಟ್ಟಿದರು. ಇದುವೇ ‘ಬಸವ ಪಟ ಆರೋಹಣ’.ಶ್ರೀ ಗವಿಸಿದ್ಧನ ಸನ್ನಿಧಿಯಲ್ಲಿ ಬಸವ ಪಟ ಆರೋಹಣ ಮಾಡುವ ಉದ್ದೇಶವೆಂದರೆ ನಮ್ಮದು ಕೃಷಿ ಪ್ರಧಾನ ನಾಡು.ಆ ಕಾರಣಕ್ಕಾಗಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪೃಕೃತಿ ಇವುಗಳಿಗೆ ಪೂಜೆ ಸಲ್ಲಿಸುವದು ನಮ್ಮ ಪ್ರಥಮ ಕರ್ತವ್ಯವಾಗಿದೆ.ಶ್ರೀ ಗವಿಸಿದ್ಧನ ಸನ್ನಿಧಿಯ ಈ ನಾಡಿನಲ್ಲಿ ವರ್ಷಪೂರ್ತಿ ಉತ್ತಮ ಮಳೆ, ಉತ್ತಮ ಬೆಳೆ ಬಂದು ರೈತಾಪಿ ವರ್ಗಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾ ದೊರೆಯಲೆಂಬ ಆಶಯಕ್ಕಾಗಿ ‘ಬಸವ ಪಟ ಆರೋಹಣ’ ಕಾರ್ಯಕ್ರಮವು ಜರುಗುತ್ತದೆ.ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವ ಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಗುತ್ತದೆ.

ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ೪ ‘ಬಸವ ಪಟ ಆರೋಹಣ’ ಎಂಬ ಧಾರ್ಮಿಕ ಕಾರ್ಯಕ್ರಮ ಜರುಗಿದ ಬೆನ್ನಲ್ಲೇ ಪಂಚ ಕಳಸೋತ್ಸವ ಕಾರ್ಯಕ್ರಮ ಜರುಗಿತು. ಸಾಮಾನ್ಯವಾಗಿ ಎಲ್ಲ ಮಠಮಾನ್ಯಗಳಿಗೆ ಒಂದೇ ಕಳಸವಿರುತ್ತದೆ. ಆದರೆ ಕೊಪ್ಪಳದ ಶ್ರೀ ಗವಿಮಠದ ಕರ್ತೃ ಶ್ರೀ ಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಐದು ಕಳಸಗಳು ಶೋಭಾಯಮಾನವಾಗಿರುತ್ತವೆ. ರಥೋತ್ಸವದ ದಿನಗಳು ಸಮೀಪಿಸುತ್ತಿರುವಾಗ ಈ ಐದು ಕಳಸಗಳನ್ನು ಒಂದು ವಾರದ ಮೊದಲೇ ಕೆಳಗೆ ಇಳಿಸಿಕೊಂಡು, ಆಯಾ ಓಣಿಯ ದೈವದವರು ಕೊಂಡೊಯ್ಯುತ್ತಾರೆ. ನಂತರ ಅವುಗಳನ್ನು ಸ್ವಚ್ಚಗೊಳಿಸಿ, ಶೃಂಗಾರಗೊಳಿಸಿ ಶ್ರೀ ಗವಿಮಠಕ್ಕೆ ತರುತ್ತಾರೆ. ಒಂದನೆಯದು ಕೊಪ್ಪಳದ ಬನ್ನಿಕಟ್ಟಿ ಭಾಗದ್ದು. ಶ್ರೀ ಗೌರಿಶಂಕರ ದೇವಸ್ಥಾನದಿಂದ ಶ್ರೀಮಠಕ್ಕೆ ಬರುವದು. ಎರಡನೆಯದು ವಿ.ಕೆ. ಸಜ್ಜನರು ಮಾಡಿಸಿದ ಕಳಸ. ಅವರ ಮನೆಯಿಂದ ಶೀ ಗವಿಮಠಕ್ಕೆ ಬರುವದು. ಮೂರನೆಯದು ಪಲ್ಲೇದವರ ಓಣಿಯ ಶ್ರೀ ಬಸವೇಶ್ವರ ದೇವಸ್ಥಾನದ ದೈವದವರಿಂದ ಶ್ರೀಮಠಕ್ಕೆ ಬರುವದು. ನಾಲ್ಕನೆಯದು ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದ ದೈವದವರಿಂದ ಮಠಕ್ಕೆ ಬರುವದು. ಐದನೆಯದು ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದ ದೈವದವರಿಂದ ಮಠಕ್ಕೆ ಬರುವದು. ಈ ಎಲ್ಲಾ ಕಳಸಗಳನ್ನು ಆಯಾ ಓಣಿಯ ದೈವದವರು ಐದು ಕಳಸಗಳನ್ನು ಗವಿಮಠಕ್ಕೆ ತಂದು ಗೋಪುರಕ್ಕೇರಿಸಿದರು. ಇದು ಪ್ರತಿವರ್ಷದ ಸಂಪ್ರದಾಯ. ರಾತ್ರಿ ಈ ಕಾರ್ಯಕ್ರಮ ಜರುಗಿದ ನಂತರ ಗವಿಮಠಕ್ಕೆ ಆಗಮಿಸಿದ ಜಂಗಮಯೋಗಿಗಳಿಗೆ ಪ್ರಸಾದ , ದಕ್ಷಿಣೆ, ತಾಂಬೂಲಾದಿಗಳನ್ನು ನೀಡಿ ಜಂಗಮಾರಾಧನೆಗೈದರು.

Please follow and like us:
error