fbpx

ಬಲಪಂಥೀಯ ಜೀವವಿರೋಧಿ ಸಂಘಟನೆಗಳನ್ನು ನಿಷೇಧಿಸಿ,ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾದ ಶ್ರೀರಾಮಸೇನೆ ಸಂಘಟನೆಯ ಅಪರಾಧಿಗಳಿಗೆ ಹಾಗೂ ಇತರೆ ಬಲಪಂಥೀಯ ಜೀವವಿರೋಧಿ ಸಂಘಟನೆಗಳನ್ನು ನಿಷೇಧಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕುರಿತು.

ದಿಟ್ಟ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ಮತೀಯ ಹಿಂದೂತ್ವದ ಶಕ್ತಿಗಳೇ ಗುಂಡಿಕ್ಕಿ ಹತ್ಯೆ ಮಾಡಿರುವುದು ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ. ಸೆ.೫, ೨೦೧೭ರಂದು ಗೌರಿ ಲಂಕೇಶ್ ಹತ್ಯೆಯಾದ ನಂತರ ಕೋಮವಾದಿ ಶಕ್ತಿಗಳು ವಿಜೃಂಭಿಸಿದಾಗಲೇ ಕೊಲೆ ಯಾರಿಂದ ನಡೆದಿದೆ ಎನ್ನುವುದನ್ನು ಪ್ರಜ್ಞಾವಂತರು ಗುರುತಿಸಿದರು. ಶ್ರೀರಾಮಸೇನೆಯ ಕಾರ್ಯಕರ್ತ ಪರುಶುರಾಮ ವಾಘ್ಮೋರೆ ಗೌರಿ ಹಂತಕನೆಂದು ಎಸ್‌ಐಟಿ ಪತ್ತೆ ಹಚ್ಚಿದೆ. ಈ ಹಿಂದೆ ಈತ ಸಿಂದಗಿಯ ತಹಸಿಲ್ ಕಚೇರಿಯ ಮೇಲೆ ಪಾಕಿಸ್ಥಾನದ ಧ್ವಜ ಹಾರಿಸಿ ಕೋಮುಗಲಭೆ ಸೃಷ್ಟಿಸುವ ಸಂಚು ಮಾಡಿದ ಕೃತ್ಯದಲ್ಲಿ ಆರೋಪಿಯಾಗಿದ್ದ, ಪರುಶುರಾಮ, ಗೌರಿ ಲಂಕೇಶ್ ಅವರ ಎದೆಗೆ ಗುಂಡಿಕ್ಕಿದ್ದಾನೆ. ಪರುಶುರಾಮ ವಾಘ್ಮೋರೆಯನ್ನು ಬಂಧಿಸಿದ ನಂತರ ಶ್ರೀರಾಮಸೇನೆಯ ಪ್ರಮುಖರು ಆತನನ್ನು ದೇಶಭಕ್ತನೆಂದು ಸಮರ್ಥಿಸಿಕೊಳ್ಳುತ್ತಿರುವುದು ನಾಗರಿಕರಲ್ಲಿ ತಳಮಳ ಸೃಷ್ಟಿಸಿದೆ.
ಹಿಂದೂಗಳ ಹಿತರಕ್ಷಣೆಗೆ ಹೋರಾಡುತ್ತೇವೆಂದು ಹೇಳಿಕೊಂಡು ಸಂಘಟನೆ ಕೊಲೆ, ಹಿಂಸೆ, ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವುದು ಈಗ ಬಯಲಾಗಿದೆ. ಆಪರೇಷನ್ ಆಯಿ (ಅಮ್ಮ) ಎನ್ನುವ ಹೆಸರಿಟ್ಟು ದಿಟ್ಟ ಪತ್ರಕರ್ತೆಯನ್ನು ಕೊಲೆ ಮಾಡುವ ಮೂಲಕ ಮತಾಂಧ ಹಿಂದೂತ್ವ ಶಕ್ತಿಗಳು ಪೈಶಾಚಿಕ ಕೃತ್ಯ ಮೆರೆದಿವೆ. ಹಾಗಾದರೆ ಹಂತಕನ ಹಿಂದಿನ ಕೈವಾಡ ಯಾವುದು ? ಕೊಲೆ ದೇಶ ಭಕ್ತಿಯೇ ? ಮುಗ್ದ ಯುವಕರನ್ನು ಅಪರಾಧಕ್ಕೆ ದೂಡುವುದು ಯಾವ ಧರ್ಮ ? ಅನ್ಯಾಯ, ಹಿಂಸೆ, ಮೌಢ್ಯ, ಧಾರ್ಮಿಕ ಕಂದಾಚಾರ,ಮಹಿಳೆಯರ ಮೇಲಿನ ದಬ್ಬಾಳಿಕೆ ವಿರುದ್ಧ ಧ್ವನಿಯೆತ್ತಿದ್ದು, ಗೌರಿಲಂಕೇಶ್ ಮಾಡಿದ್ದುತಪ್ಪೇ ?
ವಿಚಾರವಾದ, ವೈಜ್ಞಾನಿಕ ಮನೋಧರ್ಮ ಹರಡುವುದು, ಸಮಾಜ ಸುಧಾರಣೆಯ ನಿಟ್ಟಿನಲ್ಲಿ ತಿಳಿವಳಿಕೆ ನೀಡುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಸಂವಿಧಾನದತ್ತ ಕರ್ತವ್ಯ.. ವಿಚಾರಗಳನ್ನು, ವೈಜ್ಞಾನಿಕ ಮನೋಧರ್ಮವನ್ನು ಯಾರೇ ಮಂಡಿಸಿದರೂ ಅವುಗಳ ಬಗ್ಗೆ ಸರಿಯೋ ತಪ್ಪೋ ಚರ್ಚೆ ಮಾಡಿ ಸಮಾಜದ ಮುಂದೆ ಮಂಡಿಸಬೇಕು. ಸ್ವೀಕರಿಸುವುದು, ಬಿಡುವುದು ಸಮಾಜಕ್ಕೆ ಬಿಟ್ಟ ವಿಷಯ.
ಅದು ಬಿಟ್ಟು ಗುಂಡಿನ ದಾಳಿಗೆ ಮುಂದಾಗುವುದು ಬೌದ್ಧಿಕವಾಗಿ ಸೋತವರ ಲಕ್ಷಣ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಂವಿಧಾನಿಕ ಆಶಯವಾದ ಜಾತ್ಯತೀತ ತತ್ವಕ್ಕೆ ಧಕ್ಕೆಯಾಗುತ್ತದೆ. ಮೂಲಭೂತವಾದ, ಮತಾಂಧತೆ ಹೆಚ್ಚುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಮತಾಂಧ ರಾಜಕೀಯ ವ್ಯವಸ್ಥೆ ಪ್ರಬಲವಾಗುತ್ತಿದೆ. ಅತ್ಯುನ್ನತ ಎತ್ತರಕ್ಕೆ ಕೊಂಡೊಯ್ಯಬೇಕಾದ ನಾಗರಿಕತೆಯು ಮನುಷ್ಯನನ್ನು ಮೃಗೀಯಗೊಳಿಸುತ್ತಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆಲವರಷ್ಟೇ ಏಕಾಏಕಿ ಇಂಥ ಕೃತ್ಯ ಮಾಡಿರಲು ಸಾಧ್ಯವಿಲ್ಲ. ಇವರೆಲ್ಲರ ಹಿಂದೆ ದೊಡ್ಡ ಪಿತೂರಿ ಇದೆ. ದೊಡ್ಡ ತಂಡ ಕೂಟವಾಗಿ ಕೆಲಸ ಮಾಡುತ್ತಿದೆ. ಅವರನ್ನೆಲ್ಲ ಬಂಧಿಸುವ ಮೂಲಕ ಕೃತ್ಯದ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದನ್ನು ಪತ್ತೆಹಚ್ಚಬೇಕು.

ಹಿಂದೂತ್ವದ ಹೆಸರಿನಲ್ಲಿ ಮುಗ್ದ ಬಡ ಯುವಕರಿಗೆ ಮತಾಂಧತೆಯ ವಿಷ ನೀಡಿ ಅಪರಾಧ ಕೃತ್ಯಕ್ಕೆ ಬಳಸಿಕೊಂಡು ಕೊಲೆ ಸಂಸ್ಕೃತಿ ಬಿತ್ತುತ್ತಿರುವುದು ಅತ್ಯಂತ ಖಂಡನೀಯ. ಬಡ ಯುವಕರ ದುರ್ಬಲತೆಯನ್ನು ದುರುಪಯೋಗಪಡಿಸಿಕೊಂಡು ಅವರಿಗೆ ಆರ್ಥಿಕ ಸಹಾಯ ಮಾಡುವ ನೆಪದಲ್ಲಿ ಅವರನ್ನು ಕ್ರಿಮಿನಲ್ಸ್ ಗಳನ್ನಾಗಿ ತಯಾರಿಸಲಾಗುತ್ತಿದೆ. ಕೋಮುವಾದ, ಭಯೋತ್ಪಾದನೆ ಮತ್ತಿತರ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಮಾತನಾಡುವ ಮತ್ತು ಹೋರಾಟ ಮಾಡುವ ವ್ಯಕ್ತಿಗಳನ್ನು ಪಟ್ಟಿ ಮಾಡಿ ಕೊಲೆ ಮಾಡುವಲು ವ್ಯವಸ್ಥಿತ ಸಿದ್ಧತೆ ನಡೆಸಿರುವ ವ್ಯಕ್ತಿಗಳು ಮತ್ತು ಸಾಂಘಿಕವಾಗಿ ಪ್ರಚೋದನೆ ನೀಡುತ್ತಿರುವ ಸಂಘಟನೆಯ ಮೇಲೆ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರವಾದಿಗಳ ಹತ್ಯೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲ ದುಷ್ಟಶಕ್ತಿಗಳ ವಿರುದ್ಧ ಕಠಿಣಕ್ರಮ ಜರುಗಿಸಬೇಕು.

ಎಸ್‌ಐಟಿ ತನಿಖೆಯಲ್ಲಿ ಗೌರಿ ಲಂಕೇಶ್ ಹತ್ಯೆಯಲ್ಲಿ ಶ್ರೀರಾಮಸೇನೆ ಸಂಘಟನೆ ಹಾಗೂ ಇನ್ನಿತರ ಬಲಪಂಥೀಯ ಜೀವವಿರೋಧಿ ಸಂಘಟನೆಗಳು ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್‌ನೊಂದಿಗೆ ಗೌರಿ ಲಂಕೇಶ್ ಕೊಲೆಯಲ್ಲಿ ಭಾಗಿಯಾದ ವಿಜಯಪುರ ಜಿಲ್ಲೆಯ ಸಿಂದಗಿಯ ಯುವಕ ಪರುಶುರಾಮ್ ವಾಘ್ಮೋರೆ ಇರುವ ಫೋಟೋಗಳು ಬಹಿರಂಗಗೊಂಡಿವೆ. ಬಲಪಂಥೀಯ ಸಂಘಟನೆ ಶ್ರೀರಾಮಸೇನೆ ಶೋಷಿತ ಸಮುದಾಯಗಳ ಯುವಕರನ್ನು ಗುರಿಯಾಗಿಸಿಕೊಂಡು ಮತೀಯವಾದವನ್ನು ತಲೆಯಲ್ಲಿ ತುಂಬಿ, ಅಪರಾಧಿ ಚಟುವಟಿಕೆಗಳಿಗೆ ಅವರನ್ನು ಬಳಸಿಕೊಳ್ಳುವ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಕದಡುತ್ತಿದೆ.
ಅನೈತಿಕ ಪೊಲೀಸ್‌ಗಿರಿ ಮೂಲಕ ಮಂಗಳೂರಿನಲ್ಲಿ ಯುವಕ, ಯುವತಿಯರ ಮೇಲೆ ದಾಳಿ ನಡೆಸಿದ್ದಲ್ಲದೇ ಹತ್ತಾರು ಸಮಾಜವಿದ್ರೋಹಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಶ್ರೀರಾಮಸೇನೆ ರಾಜ್ಯದಿಂದ ಕೇಂದ್ರದವರೆಗೂ ತನ್ನ ಕಬಂಧಬಾಹುಗಳನ್ನು ವಿಸ್ತರಿಸುವ ಮೂಲಕ ರಾಜ್ಯವನ್ನು ಕೋಮುದಳ್ಳುರಿಗೆ ಅಣಿಗೊಳಿಸುತ್ತಿದೆ. ಇಂತಹ ಸಂಘಟನೆಯನ್ನು ನಿಷೇಧಿಸಿ ಕಠಿಣ ಕ್ರಮ ಜರುಗಿಸದೇ ಹೋದರೆ ರಾಜ್ಯದಲ್ಲಿ ಶಾಂತಿ, ನೆಮ್ಮದಿಗೆ ಸರಕಾರವೇ ಪರೋಕ್ಷವಾಗಿ ಸಹಾಯ ಮಾಡಿದಂತಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ್, ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ ದುಂಡಪ್ಪ ಯಡವೆ ಅಲಿಯಾಸ್ ಮನೋಜ್, ಕೆ.ಟಿ.ನವೀನ್‌ಕುಮಾರ್ ಈಗಾಗಲೇ ಬಂಧಿಯಾಗಿದ್ದಾರೆ. ನಿಹಾಲ್ ಅಲಿಯಾಸ್ ದಾದೆಸಾಬ್ ಸೇರಿದಂತೆ

ಇನ್ನು ಮೂವರು ಆರೋಪಿಗಳು ಸಿಗಬೇಕಿದೆ. ಬಂಧಿತರೆಲ್ಲರೂ ಬಲಪಂಥೀಯ ಸಂಘಟನೆಯವರು ದುರುದ್ದೇಶಕ್ಕಾಗಿ ಎಲ್ಲರೂ ಅಕ್ರಮ ಕೂಟ ರಚಿಸಿಕೊಂಡಿದ್ದಾರೆನ್ನುವುದು ಗಮನಿಸಬೇಕಾದ ಅಂಶವಾಗಿದೆ. ೨೦೧೪ರಿಂದ ತಂಡವೊಂದು ಪ್ರಗತಿಪರರು ಹಾಗೂ ವಿಚಾರವಾದಿಗಳನ್ನು ಮುಗಿಸಲು ಬಲಪಂಥೀಯ ಸಂಘಟನೆಯೊಂದು ತರಬೇತಿ ನೀಡುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಗೌರಿ ಲಂಕೇಶ್ ಹತ್ಯೆ ಬಳಿಕ, ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಹಾಗೂ eನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್, ನಿಡುಮಾಮಿಡಿ ಚನ್ನಮಲ್ಲ ಸ್ವಾಮೀಜಿ, ಡಾ.ಸಿ.ಎಸ್.ದ್ವಾರಕಾನಾಥ್ ಅವರನ್ನು ಸರದಿಯಲ್ಲಿ ಕೊಲೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರೆನ್ನುವುದು ಬಹಿರಂಗೊಂಡಿರುವುದು ಆತಂಕಕಾರಿ ವಿಷಯವಾಗಿದೆ.

ಕರ್ನಾಟಕ, ಗೋವಾ, ಮಧ್ಯಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿರುವ ಕೆಲ ಯುವಕರು ಈ ತಂಡಗಳಲ್ಲಿ ಗುರುತಿಸಿಕೊಂಡಿರುವುದಲ್ಲದೇ ಮಹಾರಾಷ್ಟ್ರದ ಅಮೋಲ್ ಕಾಳೆಗೆ ಕರ್ನಾಟಕದ ಬಲಪಂಥೀಯ ಸಂಘಟನೆಯವರೇ ೧೬ ಮಂದಿಯನ್ನು ಕೊಲೆ ಮಾಡಲು ಹಿಟ್‌ಲೀಸ್ಟ್ ಕೊಟ್ಟಿರುವ ಮಾಹಿತಿಯನ್ನು ಎಸ್‌ಐಟಿ ಸ್ಪಷ್ಟಪಡಿಸಿದೆ. ವಿಚಾರವಾದಿಗಳು ಹಾಗೂ ಪ್ರಗತಿಪರರನ್ನು ಮುಗಿಸಲು ಶೋಷಿತ ಸಮುದಾಯಗಳ ಯುವಕರನ್ನು ಪ್ರೇರೇಪಿಸುವ ಕೊಲೆಗಡುಕ ಶಕ್ತಿಗಳು ರಾಜ್ಯದಲ್ಲೇ ಇದ್ದು, ಪ್ರಭಾವಿಗಳ ಕೃಪಾಕಟಾಕ್ಷದಲ್ಲಿದ್ದಾರೆನ್ನುವುದು ಸ್ಪಷ್ಟವಾಗಿದೆ. ರಣಹೇಡಿಗಳಂತೆ ಕೆಲಸ ಮಾಡುತ್ತಿರುವ ಅಪರಾಧಿಗಳು ಪ್ರಕರಣದಿಂದ ತಪ್ಪಿಸಿಕೊಳ್ಳಲು ತಮ್ಮ ರಾಜಕೀಯ, ಆರ್ಥಿಕ, ಸಂಪನ್ಮೂಲವನ್ನು ಧಾರೆಯೆರೆಯುತ್ತಿರುವ ವ್ಯಕ್ತಿಗಳ ಮುಖವಾಡಗಳನ್ನು ಬಯಲಿಗೆಳೆದು ಅವರ ಕೈಗೆ ಕೋಳ ತೊಡಿಸಬೇಕಾಗಿದೆ. ಆ ಮೂಲಕ ಸರಕಾರಗಳು ಪ್ರಗತಿಪರರಿಗೆ, ವಿಚಾರವಾದಿಗಳಿಗೆ ಹಾಗೂ ಜನಪರ ಲೇಖಕರಿಗೆ ಭದ್ರತೆ ಒದಗಿಸಿ ಕರ್ನಾಟಕದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು.

ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಎಲ್ಲ ಅಪರಾಧಿಗಳು ತಮ್ಮ ಪ್ರಭಾವ, ಹಣಬಲ ಹಾಗೂ ರಾಜಕೀಯ ಬೆಂಬಲ ಬಳಸಿಕೊಂಡು ಹೊರಬಂದು ಸಾಕ್ಷ್ಯ ನಾಶಕ್ಕೆ ಯತ್ನಿಸುವ ಸಾಧ್ಯತೆ ಇದೆ. ಇದು ಈಗಾಗಲೇ ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ. ಸರಕಾರ ಹಾಗೂ ಎಸ್‌ಐಟಿ ಈ ಪ್ರಕರಣದಲ್ಲಿ ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೇ ಪಾರದರ್ಶಕ ತನಿಖೆಗೆ ಎಲ್ಲ ರೀತಿಯ ನೆರವು ಒದಗಿಸಬೇಕು. ಹಂತಕನೊಬ್ಬನ ಗುಂಡಿಗೆ ಗೌರಿ ಲಂಕೇಶ್ ಬಲಿಯಾಗಿzರೆ. ಈ ಘಟನೆಯ ಹಿಂದೆ ಅಧಿಕಾರಸ್ಥರನ್ನು ಪ್ರಶ್ನಿಸುವ, ಯಾಜಮಾನ್ಯ ಧೋರಣೆಗಳ ಬಗ್ಗೆ ಅಭಿಪ್ರಾಯ ಬೇಧವನ್ನಿಟ್ಟುಕೊಳ್ಳುವ, ಸಾಮಾಜಿಕ ಪಿಡುಗುಗಳ ಬಗ್ಗೆ ತನಿಖೆ ಮಾಡುವ ಮತ್ತು ಉನ್ನತ ಸ್ಥಾನಗಳಲ್ಲಿರುವವರು ಮಾಡುವ ಮಾನವ ಹಕ್ಕು ಉಲ್ಲಂಘನೆ ಮತ್ತು ಭ್ರಷ್ಟಾಚಾರಗಳನ್ನು ಬಯಲುಗೊಳಿಸುವ ಹಕ್ಕಿದೆಯೆಂದು ನಂಬುವ ಪತ್ರಕರ್ತರು, ವಿಚಾರವಾದಿಗಳು ಹಾಗೂ ಪ್ರಗತಿಪರರಲ್ಲಿ ಆತಂಕ ಮೂಡಿಸುವ ದುರುದ್ದೇಶ ಕೂಡಿದೆ.

ಗೌರಿ ಲಂಕೇಶ್ ದಲಿತರ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನಿಸುವ ಪ್ರತಿಗಾಮಿ ಮತ್ತು ಸಾಂಪ್ರದಾಯಿಕ ಶಕ್ತಿಗಳ ಕಟು ವಿಮರ್ಶಕಿಯಾಗಿದ್ದರು. ಗೌರಿ ಲಂಕೇಶ್ ಅಧಿಕಾರಸ್ಥರನ್ನು ಅತ್ಯಂತ ನೇರವಾಗಿ ಮತ್ತು ನಿಷ್ಠುರವಾಗಿ ತಮ್ಮ ಪತ್ರಿಕೆಯಲ್ಲಿ ಟೀಕಿಸುತ್ತಿದ್ದರು. ಅವರು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಮತ್ತು ಭಾರತೀಯ ಜನತಾ ಪಕ್ಷದ ಅತ್ಯಂತ ಕಠೋರ ವಿಮರ್ಶಕಿಯಾಗಿದ್ದರು. ಆದರೆ ಅದೇರೀತಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನೂ ಟೀಕಿಸುತ್ತಿದ್ದರು. ಇದರಿಂದಾಗಿ ಸ್ಥಳೀಯ ಗುಂಪುಗಳ ಕೆಂಗಣ್ಣಿಗೂ ಗುರಿಯಾಗಿದ್ದು ಮಾತ್ರವಲ್ಲದೇ, ಅಧಿಕಾರಸ್ಥರ ವಿರುದ್ಧ ಹೋರಾಡುತ್ತಿದ್ದ ವ್ಯಕ್ತಿಗಳಿಗೆ ತನ್ನೆ ಬೆಂಬಲವನ್ನೂ ನೀಡುತ್ತಿದ್ದರು. ಗೌರಿ ಲಂಕೇಶ್‌ರ ಈ ಕ್ರೂರ ಹತ್ಯೆಯು ಪತ್ರಕರ್ತರನ್ನೂ, ಸಾಮಾಜಿಕ ಕಾರ್ಯಕರ್ತರನ್ನೂ ಮತ್ತು ಅಧಿಕಾರಸ್ಥರ ಬಗ್ಗೆ ಭಿನ್ನಮತ ಇಟ್ಟುಕೊಂಡಿರುವವರನ್ನೂ ದಿಗ್ಭ್ರಾಂತಗೊಳಿಸಿದೆ.

ಜನಪರವಾಗಿ ಮಿಡಿಯುತ್ತಿದ್ದ ಗೌರಿ ಲಂಕೇಶ, ಶೋಷಿತ ಸಮುದಾಯವನ್ನು ಮತ್ತಷ್ಟು ಶೋಷಣೆಗೆ ತಳ್ಳಿ ಸಮಾಜವನ್ನು ಕೊಳ್ಳೆ ಹೊಡೆಯುವ ಶಕ್ತಿಗಳನ್ನು ಕಟುವಾಗಿ ಟೀಕಿಸುತ್ತಿದ್ದ ಕಾರಣಕ್ಕೆ ಮತಾಂಧ ಶಕ್ತಿಗಳು ವ್ಯವಸ್ಥಿತ ಹುನ್ನಾರ ನಡೆಸಿ ಹತ್ಯೆಮಾಡಿಸಿವೆ. ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ ಪಾನ್ಸಾರೆ, ನರೇಂದ್ರ ದಾಬೋಲ್ಕರ್ ಹಾಗೂ ಸಂಶೋಧಕ ಎಂ.ಎಂ.ಕಲಬುರಗಿಯ ಹತ್ಯೆಯ ಹಿಂದೆ ಗೌರಿ ಲಂಕೇಶ್ ಹತ್ಯೆ ನಡೆಸಿದ ತಂಡದ ಪಾತ್ರದ ಬಗ್ಗೆಯೂ ಸುಳಿವು ದೊರೆತಿರುವುದರಿಂದ ಪಾರದರ್ಶಕ ತನಿಖೆಯ ಮೂಲಕ ಹಿಂದಿನ ಶಕ್ತಿಗಳನ್ನು ಬಯಲುಗೊಳಿಸಬೇಕು ಎಂದು ಸಂಘಟನೆ ಆಗ್ರಹಿಸುತ್ತದೆ.

ಹಕ್ಕೊತ್ತಾಯಗಳು

* ಗೌರಿ ಲಂಕೇಶ್ ಹತ್ಯೆ ಘಟನೆ ಭಯೋತ್ಪಾದನಾ ಕೃತ್ಯವೆಂದು ಪರಿಗಣಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.
* ಗೌರಿ ಲಂಕೇಶ್ ಹತ್ಯೆ ಘಟನೆಯಲ್ಲಿ ಭಾಗಿಯಾದ ಶ್ರೀರಾಮಸೇನೆ ಸಂಘಟನೆಯನ್ನು ನಿಷೇಧಿಸಬೇಕು.
* ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್‌ನ್ನು ಕೂಡಲೇ ಬಂಧಿಸಿ ತನಿಖೆಗೊಳಪಡಿಸಬೇಕು.
* ಗೌರಿ ಲಂಕೇಶರನ್ನು ಕೊಲೆ ಮಾಡಿದ ಪರಸುರಾಮ ವಾಗ್ಮೋರೆಯನ್ನು ಸಮರ್ಥಿಸುವ, ಶೀರಾಮಸೇನೆ ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಮಂಚಾಲೇಶ್ವರಿ ಹಾಗು ವಿಜಯಪುರ ಜಿಲ್ಲಾಧ್ಯಕ್ಷ ರಾಕೇಶ ಹಿರೇಮಠ ಇವರನ್ನು ಪ್ರಕರಣಗಳಲ್ಲಿ ಆರೋಪಿಗಳನ್ನಾಗಿಸಿ ಬಂಧಿಸಬೇಕು.
* ಎಂ.ಎಂ. ಕಲಬುರ್ಗಿ, ಪಾನ್ಸರೆ, ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿ, ಹತ್ಯೆಕೊರರನ್ನು ಬಂಧಿಸಬೇಕು
* ವಿಚಾರವಾದಿಗಳ ಹತ್ಯೆ ಘಟನೆಯಲ್ಲಿ ಶೋಷಿತ ಸಮುದಾಯಗಳ ಯುವಕರನ್ನೇ ಬಲಿಪಶು ಮಾಡಲು ಬಲಪಂಥೀಯ ಸಂಘಟನೆಗಳು ತಂತ್ರ ಹೆಣೆದಿದ್ದು, ಇದನ್ನು ಬೇಧಿಸುವ ಜತೆಗೆ ದುರುದ್ದೇಶಕ್ಕೆ ಪ್ರೆರೇಪಿಸುವ ಸಂಘಟನೆಯವರ ಮೇಲೆ ಕಠಿಣ ಕ್ರಮ ಜರುಗಿಸಬೇಕು.

ವಿಠ್ಠಪ್ಪ ಗೋರಂಟ್ಲಿ ಡಿ.ಎಚ್.ಪೂಜಾರ್ ಬಸವರಾಜ್ ಶೀಲವಂತರ
ರಾಜ್ಯ ಉಪಾಧ್ಯಕ್ಷರು ರಾಜ್ಯಾಧ್ಯಕ್ಷರು ಜಿಲ್ಲಾಧ್ಯಕ್ಷರು
ಪಿ.ಯು.ಸಿ.ಎಲ್ ಎ.ಐ.ಕೆ.ಕೆ.ಎಸ್.-ಕೆ.ಆರ್.ಎಸ್ ಏ.ಐ.ಟಿ.ಯು.ಸಿ.ಐ

ಮಹ್ಮಮದ್ ಗೌಸ್ ನೀಲಿ ಜೆ.ಭಾರಧ್ವಜ್ ಗಾಳೆಪ್ಪ. ಕಡೆಮನಿ
ಜಿಲ್ಲಾಧ್ಯಕ್ಷರು ಮುಖಂಡರು ದಲಿತ ಮುಖಂಡರು
ಏ.ಐ.ಎಸ್.ಎಫ್ ಏ.ಐ.ಸಿ.ಸಿ.ಟಿ.ಯು

ಹನುಮೇಶ್ ಮ್ಯಾಗಳಮನಿ,
ಮುಖಂಡರು
ಜಾತಿ ನಿರ್ಮೂಲನೆ ಸಂಘಟನೆ

ಪ್ರತಿಭಟನೆಯಲ್ಲಿ ಮಾಹಂತೇಶ್ ಕೊತಬಾಳ್, ಲಿಂಗರಾಜ್ ನವಲಿ, ಗಾಳೆಪ್ಪ ಮುಂಗೋಲಿ, ಕೆಂಚಪ್ಪ, ಮೈಲಪ್ಪ ಬಿಸರಳ್ಳಿ, ಯೂಸುಫ್ ಖಾನ್, ರಾಜೇಶ್ ಶಶಿಮಠ್, ಎಸ್.ಎ.ಗಫಾರ್, ಶಿವಾನಂದ ಹೋದ್ಲೂರು, ಸುಂಕಪ್ಪ ಮೀಸೆ, ಮಕಬುಲ್ ರಾಯಚೂರು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Please follow and like us:
error
error: Content is protected !!