ಬರ ಘೋಷಣೆ; 20 ದಿನಗಳಲ್ಲಿ ಜಂಟಿ ಬೆಳೆ ಸಮೀಕ್ಷೆಗೆ ಸೂಚನೆ

ಕೊಪ್ಪಳ : ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಶೇ 90 ರಷ್ಟು ಬೆಳೆಗಳು ಹಾಳಾಗಿರುವುದರಿಂದ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿರುವುದರಿಂದ ನಷ್ಟದ ಅಂದಾಜು ಸಲ್ಲಿಸಲು ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಬೆಳೆ ಸಮೀಕ್ಷೆ ಕೈಗೊಂಡು ವರದಿ ನೀಡಬೇಕೆಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಶಂಕರ್ ರವರು ಸೂಚನೆ ನೀಡಿದರು.
ಅವರು ) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಜಿಲ್ಲೆಯಲ್ಲಿ ಕೈಗೊಂಡ ವಿವಿಧ ಅಭಿವೃದ್ದಿ ಯೋಜನೆಗಳ ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ತಿಳಿಸಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2,52,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಲ್ಲಿ 2,49,923 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಆದರೆ ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದ ಕಾರಣ ಬೆಳೆಗಳು ಶೇ 90 ಕ್ಕಿಂತಲೂ ಹೆಚ್ಚು ಒಣಗಿವೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದÀರು.
ಬೆಳೆಗಳು ಒಣಗುತ್ತಿವೆ ಹಾಗೂ ಬರಪೀಡಿತ ಎಂದು ಘೋಷಣೆ ಮಾಡಿದ್ದರೂ ಸಹ ಜಿಲ್ಲಾ ಆಡಳಿತ ಬೆಳೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಲು ಸಿದ್ದತೆ ಮಾಡಿಕೊಳ್ಳದ ಬಗ್ಗೆ ಸಂಸದರಾದ ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ್, ಅಮರೇಗೌಡ ಪಾಟೀಲ ಬಯ್ಯಾಪೂರÀ, ಪರಣ್ಣ ಈಶ್ವರಪ್ಪ ಮುನವಳ್ಳಿ ಸಭೆಯಲ್ಲಿ ಪ್ರಸ್ತಾಪಿಸಿದರು.
ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಬೆಳೆ ಸಮೀಕ್ಷೆಯನ್ನು ಎಷ್ಟು ದಿನಗಳಲ್ಲಿ ಮುಕ್ತಾಯ ಮಾಡಿ ವರದಿ ನೀಡಲಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಅಧಿಕಾರಿಗಳ ಸಭೆ ನಡೆಸಿ ನಿರ್ಧರಿಸಬೇಕೆಂದು ಸಚಿವರು ತಿಳಿಸಿದಾಗ ಜಿಲ್ಲಾಧಿಕಾರಿ ಸುನಿಲ್ ಕುಮಾರ್ 15 ರಿಂದ 20 ದಿನಗಳಲ್ಲಿ ಜಂಟಿ ಸಮೀಕ್ಷೆ ಮಾಡಿ ವರದಿ ನೀಡಲಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಜಂಟಿ ಸಮೀಕ್ಷೆ ಮಾಡಿ ವರದಿ ಕಳುಹಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಿದ್ದು ಆದಷ್ಟು ಬೇಗ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಮೀಕ್ಷೆಗೆ ತಂಡವನ್ನು ಕಳುಹಿಸಲು ಸಂಸದರು ಸಹ ಕೈಜೋಡಿಸಬೇಕೆಂದು ಸಚಿವರು ತಿಳಿಸಿದರು.
ಫಸಲ್ ಬಿಮಾ ಯೋಜನೆಯಡಿ ಬೆಳೆವಿಮೆ ಪಾವತಿಸಲಾಗಿದ್ದ್ದ 2016-17 ನೇ ಸಾಲಿನ ವಿಮಾ ಪರಿಹಾರÀದÀ ಹಣವು 30 ಕೋಟಿಯಷ್ಟು ಬರುವುದು ಬಾಕಿ ಇದೆ. ಆದರೆ ಇದಕ್ಕೆ ದಾಖಲೀಕರಣ ಸರಿಯಾಗಿ ಮಾಡದ ಕಾರಣ ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ ಎಂದು ಸಂಸದರು ಪ್ರಸ್ತಾಪಿಸಿದರು.
ಜಿಲ್ಲಾಧಿಕಾರಿಗಳು ಇದಕ್ಕೆ ಬೇಕಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ವಿಮಾ ಕಂಪನಿಗಳೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಲು ತಿಳಿಸಲಾಯಿತು.
ಬರಗಾಲದ ಛಾಯೆ ಇರುವುದರಿಂದ ಜಾನುವಾರುಗಳಿಗೆ ಬೇಕಾದ ಮೇವಿನ ಲಭ್ಯತೆ ಬಗ್ಗೆ ಚರ್ಚಿಸಲಾಯಿತು. ಸಮೀಕ್ಷೆಯಂತೆ ಜಿಲ್ಲೆಯಲ್ಲಿ 28300 ಜಾನುವಾರುಗಳಿದ್ದು ಇವುಗಳಿಗೆ ಮುಂದಿನ ಮೂರು ತಿಂಗಳಿಗಾಗುವಷ್ಟು ಮಾತ್ರ ಮೇವಿನ ಲಭ್ಯತೆ ಇದೆ ಎಂದು ಪಶು ಸಂಗೋಪನ ಇಲಾಖೆ ಅಧಿಕಾರಿಗಳು ತಿಳಿಸಿದರು.
ಕೂಕನಪಳ್ಳಿ ಹಾಗೂ ಬೂದಗುಪ್ಪದಲ್ಲಿ ಕುರಿ ಮಾರುಕಟ್ಟೆ ಇದ್ದು ರಸ್ತೆ ಕಿರಿದಾಗಿರುವುದರಿಂದ ಸಂತೆ ದಿನ ಇಲ್ಲಿ ಸಾಕಷ್ಟು ಜಗಳು ನಡೆದಿವೆ. ಇನ್ನೊಂದು ಕಡೆ ರಸ್ತೆಯನ್ನು ಮಾಡಿಕೊಟ್ಟು ಎರಡು ಕಡೆ ಮಾರುಕಟ್ಟೆ ನಡೆಯುವಂತೆ ಮಾಡಲು ಸಚಿವರು ತಿಳಿಸಿದಾಗ ಮಾರುಕಟ್ಟೆ ವಿಸ್ತರಣೆಗೆ ಬೇಕಾದ ಜಾಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಸಹ ಸಮರ್ಪಕವಾಗಿ ಅನುಷ್ಟಾನವಾಗದೆ ಜನರಿಗೆ ತೊಂದರೆಯಾಗಿದೆ. ಕೊಪ್ಪಳ-ಮುಂಡರಗಿ ಬಹುಗ್ರಾಮ ನೀರಿನ ಯೋಜನೆ ಮೂಲಕ 81 ಗ್ರಾಮಗಳಿಗೆ ನೀರು ಪೂರೈಕೆಗೆ ಯೋಜಿಸಲಾಗಿದ್ದು ಇದರ ಯೋಜನೆ ಸರಿಯಾಗಿ ತಯಾರಿಸದ ಕಾರಣ ಸಾಕಷ್ಟು ವಿಳಂಬ ಹಾಗೂ ಯೋಜನಾ ವೆಚ್ಚವು ಹೆಚ್ಚಾಗಿದೆ. ಆದರೆ ಜನರಿಗೆ ಮಾತ್ರ ನೀರು ಕೊಡಲು ಸಾಧ್ಯವಾಗಿಲ್ಲ ಎಂದು ಸಂಸದರು ಪ್ರಸ್ತಾಪಿಸಿದಾಗ ಸಚಿವರು ಯಾವುದೇ ಯೋಜನೆಯನ್ನು ಅನುಷ್ಟಾನ ಮಾಡುವಾಗ ಹೆಚ್ಚು ಪಾರದರ್ಶಕವಾಗಿರಬೇಕಾಗುತ್ತದೆ. ಜನರಿಗೆ ಊಟ ಸಿಗದಿದ್ದರೂ ಬದುಕಿಯಾರು, ನೀರು ಇಲ್ಲದೆ ಬದುಕಲಾರರು ಎಂದು ಸೂಚ್ಯವಾಗಿ ಅಧಿಕಾರಿಗಳಿಗೆ ತಿಳಿಸಿದರು.
ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕಾಗಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಕಾಮಗಾರಿಗಳ ಗುಣಮಟ್ಟದ ಕುರಿತು ದೂರುಗಳು ಬಂದಾಗ ತಪಾಸಣೆ ವೇಳೆ ಲೋಪ ಕಂಡುಬಂದಲ್ಲಿ ಆಗ ನಿಮ್ಮ ಸಮಸ್ಯೆಗಳನ್ನು ಕೇಳುವುದಿಲ್ಲ. ಈಗ ಕಾಮಗಾರಿಗಳ ಅನುಷ್ಟಾನದಲ್ಲಿ ಇರುವ ಸಮಸ್ಯೆಗಳನ್ನು ಕೇಳುತ್ತೇನೆ. ಮುಂದಿನ ದಿನಗಳಲ್ಲಿ ಇವುಗಳ ನಿವಾರಣೆಯಾಗಬೇಕು. ತಾರತಮ್ಯವನ್ನು ಬಿಟ್ಟು ಮೊದಲು ಜನಸಾಮಾನ್ಯರ ಕೆಲಸ ಮಾಡಬೇಕಾಗಿದ್ದು ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜೀ ಇರುವುದಿಲ್ಲ ಎಂದರು.
ಶುದ್ದ ಕುಡಿಯುವ ನೀರಿನ ಘಟಕಗಳು ಸಾಕಷ್ಟು ದುರಸ್ಥಿಗೆ ಒಳಗಾಗಿದ್ದು ಇವುಗಳಲ್ಲಿ ಬಹುತೇಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮದಿಂದ ಅನುಷ್ಟಾನ ಮಾಡಲಾಗಿದೆ. ಆದರೆ ಲ್ಯಾಂಡ್ ಆರ್ಮಿ ಅಧಿಕಾರಿಗಳು ಮಾತ್ರ ಎಷ್ಟು ಭಾರಿ ಮೊಬೈಲ್ ಗೆ ಕರೆ ಮಾಡಿ ಹೇಳಿದರೂ ರಿಪೇರಿ ಮಾಡುವುದಿಲ್ಲ ಎಂದು ಶಾಸಕರು ಸಚಿವರ ಗಮನ ಸೆಳೆದರು. ವಾರ, ಹತ್ತು ದಿನಗಳಲ್ಲಿ ದುರಸ್ಥಿ ಇರುವ ಆರ್.ಓ.ಗಳ ರಿಪೇರಿ ಮಾಡಬೇಕೆಂದು ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಕನಕಗರಿ ಶಾಸಕರಾದ ಬಸವರಾಜು ದಡೆಸೂಗೂರು ಮಾತನಾಡಿ ಕ್ಷೇತ್ರದಲ್ಲಿ ಇರುವ 32 ಗ್ರಾಮ ಪಂಚಾಯಿತಿಗಳಲ್ಲಿ ಬೆರಳೇನಿಕೆಯಷ್ಟು ಪಿ.ಡಿ.ಓ.ಗಳು ಮಾತ್ರ ತಮ್ಮ ಮೊಬೈಲ್ ಕರೆ ಸ್ವೀಕರಿಸುತ್ತಾರೆ. ಜನಪ್ರತಿನಿಧಿಗಳು ಜನರ ಅಹವಾಲುಗಳನ್ನು ಯಾರಿಗೆ ಹÉೀಳಬೇಕೆಂದು ಪ್ರಸ್ತಾಪಿಸಿದಾಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜ್ ರವರು ವಿವರ ನೀಡಲು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜಶೇಖರ್ ಹಿಟ್ನಾಳ್, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error