ಬರದ ನಾಡಿಗೆ ವರವಾಗಲಿದೆ ಬಹದೂರ ಬಂಡಿ ಏತ ನೀರಾವರಿ ಯೋಜನೆ

 ರೈತರಿಗೆ ಅನುಕೂಲವಾದರೆ ಅದಕ್ಕಿಂತ ಖುಷಿಯ ಸಂಗತಿ ಇನ್ನೊಂದಿಲ್ಲ ಎನ್ನುತ್ತಾರೆ

ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ.


ಕೊಪ್ಪಳ ಮಾ.  : ಪದೇ ಪದೇ ಬರಕ್ಕೆ ತುತ್ತಾಗುವ ಜಿಲ್ಲೆಗಳ ಪೈಕಿ ಕೊಪ್ಪಳವೂ ಒಂದು. ಕೊಪ್ಪಳ ತಾಲೂಕಿನಲ್ಲಿ ಭಾಗಶಃ ಪ್ರದೇಶ ನೀರಾವರಿ ಸೌಲಭ್ಯ ಹೊಂದಿದೆ. ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯನ್ನು ಸಾಕಾರಗೊಳಿಸಿದ ಪ್ರಸಕ್ತ ಸರ್ಕಾರ, ಇದೀಗ ಕೊಪ್ಪಳ ತಾಲೂಕಿಗೆ ಬಹದೂರಬಂಡಿ ಏತ ನೀರಾವರಿಯಂತಹ ಅತ್ಯುಪಯುಕ್ತ ಮತ್ತೊಂದು ನೀರಾವರಿ ಯೋಜನೆ ಮಂಜೂರು ಮಾಡುವ ಮೂಲಕ ಈ ಭಾಗದ ರೈತರಿಗೆ ಬದುಕಿನ ಆಶಾಕಿರಣ ಮೂಡಿಸಿದೆ.
ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಹದ್ದೂರಬಂಡಿ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ್ದು ರೈತರ ಮತ್ತಷ್ಟು ಖುಷಿಗೆ ಕಾರಣವಾಗಿದೆ. ಕೃಷ್ಣಾ ಜಲ ಭಾಗ್ಯ ನಿಗಮದಲ್ಲಿ ಅನುಮೋದನೆಗೆ ಅಸ್ತು ಎಂದ ಬೆನ್ನಲ್ಲೇ ಈಗ ಸರ್ಕಾರವು ಸುಮಾರು 188. 41 ಕೋಟಿ ರೂ. ಯೋಜನೆಗೆ ಹಸಿರು ನಿಶಾನೆ ತೋರಿದೆ.
ಈ ಭಾಗದ ಜನರ ಸುಮಾರು ಮೂರು ದಶಕಗಳ ಕನಸು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಮೂಲಕ ನನಸಾದಂತಾಗಿದೆ. ಸುಮಾರು 18 ಗ್ರಾಮಗಳ ರೈತರ ಮುಖದಲ್ಲಿ ಮಂದಹಾಸ ಮೂಡಲು ಇದು ಕಾರಣವಾಗಿದೆ. ಬಹದ್ದೂರುಬಂಡಿ ಏತ ನೀರಾವರಿ ಯೋಜನೆಯನ್ನು ಎರಡು ಹಂತಗಳಲ್ಲಿ ಸಾಕಾರಗೊಳಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 80 ಕೋಟಿ ರೂ. ಯೋಜನೆಗೆ ಸರ್ಕಾರ ಇದೀಗ ಮಂಜೂರಾತಿಯನ್ನು ನೀಡಿದೆ.
ವ್ಯಾಪ್ತಿಯ ಗ್ರಾಮಗಳು:
********* ಸತತ ಬರದಿಂದ ಬಳಲಿದ್ದ ಸುಮಾರು 18 ಗ್ರಾಮಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಕೊಪ್ಪಳ, ಕಿಡದಾಳ, ಬಸಾಪೂರ, ಗಿಣಿಗೇರಾ, ಕನಕಾಪುರ, ಅಲ್ಲಾನಗರ, ಚಿಕ್ಕಬಗನಾಳ, ಹಿರೇಬಗನಾಳ, ಲಾಚನಕೇರಿ, ಹಾಲವರ್ತಿ, ಮೆಳ್ಳಿಕೇರಿ, ಹ್ಯಾಟಿ, ಗೊಂಡಬಾಳ, ಮುದ್ದಾಬಳ್ಳಿ, ಹೊಸಳ್ಳಿ, ಬಹದ್ದೂರಬಂಡಿ, ಹೂವಿನಾಳ ರೈತರಿಗೆ ಅನುಕೂಲವಾಗಲಿದೆ. ಈ ಗ್ರಾಮಗಳ ಬಹುತೇಕ ಭೂಮಿ ನೀರಾವರಿಯಾಗಲಿದೆ ಎನ್ನುವುದು ವಿಶೇಷ. ತುಂಗಭದ್ರಾ ಹಿನ್ನೀರಿನಿಂದ 0. 60 ಟಿ.ಎಂ.ಸಿ. ನೀರನ್ನು ಬಳಸಿಕೊಂಡು 5256 ಹೆಕ್ಟೇರ್‍ಗೆ ನೀರಾವರಿ ಕಲ್ಪಿಸುವ ಯೋಜನೆ ಇದಾಗಿದೆ. ಸುಮಾರು 13 ಸಾವಿರ ಎಕರೆ ಪ್ರದೇಶದ ನೀರಾವರಿ ಯಾಗುವುದರಿಂದ ಈ ಎಲ್ಲಾ ಗ್ರಾಮಗಳು ಇನ್ನು ಹಸಿರುಮಯವಾಗಲಿದೆ. ಅಲ್ಲದೆ ನೀರಾವರಿಯಿಂದ ಅಕ್ಕಪಕ್ಕದಲ್ಲಿಯೂ ಅಂತರ್ಜಲ ವೃದ್ಧಿಯಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರೈತರ ಪರವಾದ ಕಾಳಜಿಯಿಂದಾಗಿ ಈ ಮಹತ್ವಕಾಂಕ್ಷಿ ಯೋಜನೆಗೆ ಅನುಮೋದನೆ ದೊರೆತಿದೆ. ಒಂದು ಅವಧಿಯಲ್ಲಿ ಎರಡು ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿ, ಹಣಕಾಸು ಒದಗಿಸಿರುವುದು ವಿಧಾನಸಭಾ ಕ್ಷೇತ್ರದ ಪಾಲಿಗೆ ಹೆಮ್ಮೆಯ ಸಂಗತಿ. ಒಣಬೇಸಾಯದ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂಬ ಕನಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀರೆರೆದು ಪೋಷಿಸಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಗಳನ್ನು ಹಾಗೂ ಸಹಕರಿಸಿದ ಎಲ್ಲರನ್ನೂ ಕ್ಷೇತ್ರದ ಜನರ ಪರವಾಗಿ ಅಭಿನಂದಿಸುತ್ತೇನೆ. ರೈತರಿಗೆ ಅನುಕೂಲವಾದರೆ ಅದಕ್ಕಿಂತ ಖುಷಿಯ ಸಂಗತಿ ಇನ್ನೊಂದಿಲ್ಲ ಎನ್ನುತ್ತಾರೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ.

Please follow and like us:
error

Related posts