ಬಯಲು ಬಹಿರ್ದೆಸೆ ಆರೋಗ್ಯಕ್ಕೆ ಮಾರಕ- ವೆಂಕಟರಾಜಾಬಯಲು

 ಬಯಲು ಬಹಿರ್ದೆಸೆಗೆ ಹೋಗುವುದರಿಂದ ನಾನಾ ರೀತಿಯ ತೊಂದರೆಗಳನ್ನು ಜನರು ಎದುರಿಸಬೇಕಾಗುತ್ತದೆ.  ಪ್ರಮುಖವಾಗಿ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ.  ಇವೆಲ್ಲ ಅಂಶಗಳನ್ನು ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಅಂಗನವಾಡಿ, ಆಶಾ ಸೇರಿದಂತೆ ಮಹಿಳಾ ಸಂಘಟನೆಗಳು ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಕರೆ ನೀಡಿದರು.  ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವಯಕ್ತಿಕ ಶೌಚಾಲಯ ನಿರ್ಮಾಣದ ಬಗ್ಗೆ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮೇಲ್ವಿಚಾರಕಿಯರು, ಸಂಜೀವಿನಿ ಯೋಜನೆಯ ಎಂಬಿಕೆ, ಜಿಪಿಎಲ್‌ಎಫ್ ಪ್ರತಿನಿಧಿಗಳಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ಪ್ರತಿಯೊಂದು ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು ಮುಂತಾದವುಗಳಂತೆ, ಶೌಚಾಲಯವೂ ಕೂಡ ಪ್ರತಿಯೊಂದು ಕುಟುಂಬಕ್ಕೂ ಮೂಲಭೂತ ಸೌಕರ್ಯ ಎಂದು ಪರಿಗಣಿಸಲಾಗುತ್ತಿದೆ.  ಶೌಚಾಲಯ ನಿರ್ಮಾಣದಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.  ಆದಾಗ್ಯೂ ಮಹಿಳೆಯರಿಂದ, ಮಹಿಳೆಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮೇಲ್ವಿಚಾರಕಿಯರು, ಸಂಜೀವಿನಿ ಯೋಜನೆಯ ಎಂಬಿಕೆ, ಜಿಪಿಎಲ್‌ಎಫ್ ಪ್ರತಿನಿಧಿಗಳಿಗೆ ಕಾರ್ಯಗಾರವನ್ನು ಏರ್ಪಡಿಸಲಾಗಿದೆ.  ಅಕ್ಟೋಬರ್ ೦೨ ರ ಒಳಗಾಗಿ ಕೊಪ್ಪಳ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯನ್ನು ಹೊಂದಲಾಗಿದ್ದು, ಬೇಸ್‌ಲೈನ್ ಸಮೀಕ್ಷೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಬಾಕಿ ಉಳಿದಿರುವ ಕುಟುಂಬಗಳು ಕಡ್ಡಾಯವಾಗಿ ಶೌಚಾಲಯ ಹೊಂದುವಂತೆ ಮಾಡಲು, ಮೊದಲ ಆದ್ಯತೆ ನೀಡಲಾಗುತ್ತಿದೆ.  ಬಯಲು ಬಹಿರ್ದೆಸೆಯಿಂದ ಎಲ್ಲರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತದೆ.  ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಎಲ್ಲ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಹೊಣೆ ನಿಮ್ಮ ಮೇಲಿದೆ.  ಶೌಚಾಲಯ ನಿರ್ಮಾಣಕ್ಕೆ ಪ್ರೇರಣೆ ನೀಡುವವರಿಗೆ, ನಿಯಮಾನುಸಾರ ಪ್ರೋತ್ಸಾಹಧನ ನೀಡಲಾಗುವುದು.  ಕೆಲವು ಗ್ರಾಮ ಪಂಚಾಯತಿಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದ  ಬಿಲ್ ಶೀಘ್ರ ಪಾವತಿಯಾಗುತ್ತಿಲ್ಲ ಎಂಬ ದೂರುಗಳಿದ್ದು, ಈ ನಿಟ್ಟಿನಲ್ಲಿ ಪರಿಶೀಲಿಸಿ, ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಹೇಳಿದರು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಮಂಜುನಾಥ್ ಅವರು ಮಾತನಾಡಿ, ಸ್ವಚ್ಛತೆಯ ಅರಿವು ಮನೆ, ಮನಗಳಿಗೆ ತಲುಪಿಸುವ ಕಾರ್ಯವನ್ನು ಜಿಲ್ಲೆಯ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.  ಆದರೆ ಜಿಲ್ಲೆಯಲ್ಲಿ ಕೆಲವು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮನೆಗಳಲ್ಲಿಯೇ ಶೌಚಾಲಯ ಇಲ್ಲ ಎಂಬ ವಿಷಯ ಗಮನಕ್ಕೆ ಬಂದಿದ್ದು, ಹಬ್ಬ-ಹರಿದಿನಗಳನ್ನು ದೂರವಿಟ್ಟಾದರೂ, ಶೌಚಾಲಯವನ್ನು ಎಲ್ಲರೂ ತಪ್ಪದೆ ನಿರ್ಮಿಸಿಕೊಳ್ಳಿ ಎಂದರು.  ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಪಂಚಾಯತಿ ಹಂಗಾಮಿ ಅಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ರೀದೇವಿ ಗದ್ದಿನಕೇರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಕಾರ್ಯಗಾರದಲ್ಲಿ ಶಾ ಕಾರ್ಯಕರ್ತೆಯರು, ಅಂಗನವಾಡಿ ಮೇಲ್ವಿಚಾರಕಿಯರು, ಸಂಜೀವಿನಿ ಯೋಜನೆಯ ಎಂಬಿಕೆ, ಜಿಪಿಎಲ್‌ಎಫ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಎಲ್ಲರೂ ಶೌಚಾಲಯ ನಿರ್ಮಿಸಿಕೊಂಡು, ಇತರರಿಗೂ ಶೌಚಾಲಯ ನಿರ್ಮಿಸಲು ಜಾಗೃತಿ ಹಾಗೂ ಪ್ರೇರಣೆ ನೀಡುವುದರ ಕುರಿತು ಇದೇ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

Please follow and like us:
error