ಫೇಸ್‌ಬುಕ್ ಪ್ರಿಯತಮೆಗಾಗಿ ತಂದೆ- ತಾಯಿಯನ್ನೇ ಕೊಂದ!

ಹೊಸದಿಲ್ಲಿ, ಮೇ 23: ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯನ್ನು ವಿವಾಹವಾಗಲು ಅನುಮತಿ ನೀಡದ ಕಾರಣಕ್ಕಾಗಿ ಯುವಕನೊಬ್ಬ ತನ್ನ ತಂದೆ- ತಾಯಿಯನ್ನೇ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಅಬ್ದುಲ್ ರಹ್ಮಾನ್ (26) ಎಂಬಾತ ಆಗ್ನೇಯ ದಿಲ್ಲಿಯ ಜಾಮಿಯಾ ನಗರದ ನಿವಾಸಿ. ಈತ ಕಾನ್ಪುರದ ಮಹಿಳೆಯೊಬ್ಬಳ ಜತೆ ಸಂಬಂಧ ಹೊಂದಿದ್ದ. ಎರಡು ವರ್ಷಗಳ ಹಿಂದೆ ಫೇಸ್‌ಬುಕ್ ಮೂಲಕ ಆರಂಭವಾದ ಸ್ನೇಹ, ಪ್ರೇಮವಾಗಿ ಮಾರ್ಪಟ್ಟಿತ್ತು. ಮೃತ ದಂಪತಿಯ ಏಕೈಕ ಮಗನಾಗಿದ್ದ ರಹ್ಮಾನ್, ತಂದೆ ತಾಯಿಯ ಆಸ್ತಿಯನ್ನು ತನ್ನ ವಶಕ್ಕೆ ಪಡೆಯುವ ಸಲುವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ರಹ್ಮಾನ್‌ನ ಮೊದಲ ವಿವಾಹ ವಿಚ್ಛೇದನದಲ್ಲಿ ಅಂತ್ಯವಾಗಿತ್ತು. ಬಳಿಕ ಕಾನ್ಪುರದ ಮಹಿಳೆಯೊಬ್ಬಳ ಜತೆ ಸ್ನೇಹ ಬೆಳೆಸಿದ್ದ. 2017ರಲ್ಲಿ ತಂದೆ ತಾಯಿಯ ಇಚ್ಛೆಯಂತೆ ಈತ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದ. ಆದಾಗ್ಯೂ ಆತನ ವಿವಾಹೇತರ ಸಂಬಂಧ ಮುಂದುವರಿದಿತ್ತು. ತನ್ನ ಫೇಸ್‌ಬುಕ್ ಸ್ನೇಹಿತೆಯನ್ನು ನಿಯಮಿತವಾಗಿ ಭೇಟಿಯಾಗುತ್ತಿದ್ದ ಈತ ವಿವಾಹವಾಗುವ ಭರವಸೆ ನೀಡಿದ್ದ ಎಂದು ಉಪ ಪೊಲೀಸ್ ಆಯುಕ್ತ ಚಿನ್ಮಯ್ ಬಿಸ್ವಾಲ್ ವಿವರಿಸಿದ್ದಾರೆ.

ಫೇಸ್‌ಬುಕ್ ಸ್ನೇಹಿತೆಯನ್ನು ವಿವಾಹವಾಗುವ ಇಂಗಿತವನ್ನು ಪೋಷಕರ ಬಳಿ ವ್ಯಕ್ತಪಡಿಸಿದಾಗ ಅವರು ಆಕ್ಷೇಪಿಸಿದ್ದರು. ಈ ನಡುವೆ ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಈತ ಉದ್ಯೋಗ ಕಳೆದುಕೊಂಡು ಮಾದಕ ವ್ಯಸನಿಯಾಗಿದ್ದ. ಬಳಿಕ ನದೀಮ್ ಖಾನ್ ಮತ್ತು ಗುಡ್ಡು ಎಂಬವರ ಸಹಾಯದಿಂದ ತಂದೆ- ತಾಯಿಯನ್ನು ಹತ್ಯೆ ಮಾಡುವ ಸಂಚು ರೂಪಿಸಿದ ಎಂದು ಬಿಸ್ವಾಲ್ ವಿವರಿಸಿದ್ದಾರೆ. ಹತ್ಯೆ ಮಾಡಿದ್ದಕ್ಕೆ 2.5 ಲಕ್ಷ ರೂಪಾಯಿ ನೀಡುವುದಾಗಿ ಅವರಿಬ್ಬರಿಗೆ ಭರವಸ ನೀಡಿದ್ದ. ಯೋಜನೆಯಂತೆ ಖಾನ್ ಹಾಗೂ ಗುಡ್ಡು ಅವರನ್ನು ಮನೆಗೆ ಕರೆಸಿಕೊಂಡ ರಹ್ಮಾನ್, ಪೋಷಕರು ನಿದ್ದೆಯಲ್ಲಿದ್ದಾಗ ಅವರ ಮೇಲೆ ಹಲ್ಲೆ ಮಾಡಿ ಮೂವರೂ ಸೇರಿ ದಂಪತಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ತಸ್ಲೀಂ ಬಾನು(50)ವನ್ನು ಗುಡ್ಡು ಹಿಡಿದುಕೊಂಡ ಹಾಗೂ ತಂದೆ ಶಮೀಮ್ ಅಹ್ಮದ್ (55)ರನ್ನು ಖಾನ್ ಹಿಡಿದುಕೊಂಡಿದ್ದ. ರಹ್ಮಾನ್ ಬೆಡ್‌ಶೀಟ್‌ನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

Please follow and like us:
error