ಫೆ. ೨೨ ರಂದು ಕೊಪ್ಪಳದಲ್ಲಿ ದಲಿತ ವಚನಕಾರರ ಜಯಂತಿ ಆಚರಣೆ : ಡಾ. ರುದ್ರೇಶ ಘಾಳಿ

: ಇದೇ ಫೆ. ೨೨ ರಂದು ದಲಿತ ವಚನಕಾರರ ಜಯಂತಿಯನ್ನು ವಿಜೃಂಭಣೆಯಿಂದ ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವುದು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ಅವರು ಹೇಳಿದರು.
ದಲಿತ ವಚನಕಾರರ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಲಿತ ವಚನಕಾರರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರ ಜಯಂತಿಯನ್ನು ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಫೆ. ೨೨ ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವುದು. ವೇದಿಕೆ ಸಮಾರಂಭವು ಅಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗುವುದು. ಸಮಾರಂಭದಲ್ಲಿ ದಲಿತ ವಚನಕಾರರ ಕುರಿತು ಡಾ. ಮಹಾಂತೇಶ ಮಲ್ಲನಗೌಡರ ಅವರು ವಿಶೇಷ ಉಪನ್ಯಾಸ ನೀಡುವರು. ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಹಾಜರಾಗಬೇಕು. ಹಾಗೂ ಸಮಾರಂಭದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳದ ಹಿರಿಯ ಸಾಹಿತಿಗಳಾದ ಹೆಚ್.ಎಸ್. ಪಾಟೀಲ್ ಅವರು ಮಾತನಾಡಿ, ವಚನ ಸಾಹಿತ್ಯದಲ್ಲಿ ಸುಮಾರು ೩೩ ಮಹಿಳಾ ವಚನಕಾರರು ವಚನಗಳನ್ನು ರಚಿಸಿದ್ದು, ಈ ಪೈಕಿ ೧೦ ಜನ ದಲಿತ ಮಹಿಳಾ ವಚನಕಾರು ಸೇರಿದ್ದಾರೆ. ಉಪನ್ಯಾಸ ಕಾರ್ಯಕ್ರಮದಲ್ಲಿ ಅವರ ಬಗ್ಗೆಯೂ ಪ್ರಸ್ತಾಪಿಸುವಂತಾಗಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಯು. ನಾಗರಾಜ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವೈ. ಸುದರ್ಶನ್‌ರಾವ್ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Please follow and like us:
error