ಫೆ. ೨೦ ರಿಂದ ಸ್ಥಳದಲ್ಲಿಯೇ ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮ

ಕೊಪ್ಪಳ ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರಿಗೆ ಸ್ಥಳದಲ್ಲಿಯೇ ಪಡಿತರ ಚೀಟಿ ವಿತರಿಸುವ ಕಾರ್ಯಕ್ರಮ ಫೆ. ೨೦ ರಿಂದ ಪ್ರಾರಂಭಿಸಿದ್ದು, ಅರ್ಹರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಆನ್‌ಲೈನ್ ಮೂಲಕ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ, ಪಡಿತರ ಚೀಟಿ ಪಡೆಯಲು ವಿಳಂಬವಾಗುತ್ತಿರುವುದನ್ನು ಗಮನಿಸಿ ತ್ವರಿತವಾಗಿ ಮತ್ತು ಸ್ಥಳದಲ್ಲಿಯೇ ಪಡಿತರ ಚೀಟಿ ನೀಡುವ ಉದ್ದೇಶದಿಂದ ಫೆ. ೨೦ ರಿಂದ ಜಿಲ್ಲೆಯಲ್ಲಿ ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನಡೆಸಲಾಗುತ್ತಿದ್ದು, ಈ ಬಗ್ಗೆ ಗ್ರಾ.ಪಂ ವಾರು ವೇಳಾಪಟ್ಟಿ ಪ್ರಕಟಿಸಲಾಗಿದೆ. ಹೊಸ ಪಡಿತರ ಚೀಟಿ ಕೋರಿ ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವ ನಿಗದಿಪಡಿಸಿರುವ ದಿನಾಂಕದಂದು ತಮ್ಮಲ್ಲಿರುವ ಅರ್ಜಿ ಸ್ವೀಕೃತಿ, ಕುಟುಂಬದ ಆದಾಯ ಪ್ರಮಾಣ ಪತ್ರ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆಧಾರ ದಾಖಲೆಗಳೊಂದಿಗೆ ಗ್ರಾ.ಪಂ ಗಳಿಗೆ ತೆರಳಿ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ಸ್ಥಳದಲ್ಲಿಯೇ ಹೊಸ ಪಡಿತರ ಚೀಟಿ ಪಡೆಯಬಹುದು. ಗ್ರಾ.ಪಂ.ಗೆ ಅರ್ಜಿದಾರರ ಕುಟುಂಬದ ಯಾರಾದರೂ ಒಬ್ಬರು ವಯಸ್ಕ ಸದಸ್ಯರು ಹಾಜರಾಗಿ ಬೆರಳಚ್ಚು ನೀಡಿ ಹೊಸ ಪಡಿತರ ಚೀಟಿ ಪಡೆಯಲು ಅವಕಾಶವಿದೆ.
ತಕ್ಷಣ ಹೊಸ ಪಡಿತರ ಚೀಟಿ ನೀಡುವ ಕಾರ್ಯಕ್ರಮದಲ್ಲಿ ಈಗಾಗಲೇ ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಮಾತ್ರ ಸ್ಥಳದಲ್ಲಿ ಹೊಸ ಪಡಿತರ ಚೀಟಿ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಹೊಸ ಅರ್ಜಿ ಸ್ವೀಕರಿಸುವುದಿಲ್ಲ. ಆದರೆ ಇದುವರೆಗೆ ಅರ್ಜಿ ಸಲ್ಲಿಸದಿರುವವರು ಗ್ರಾ.ಪಂ ಅಟಲ್‌ಜೀ ಜನಸ್ನೇಹಿ ಕೇಂದ್ರ, ಪೋಟೊ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸ್ವೀಕೃತಿ ಮತ್ತು ಇತರೆ ದಾಖಲೆಗಳೊಂದಿಗೆ ಆಹಾರ ನಿರೀಕ್ಷಕರನ್ನು ಭೇಟಿ ಮಾಡಿ ಹೊಸ ಪಡಿತರ ಚೀಟಿ ಪಡೆಯಬಹುದಾಗಿದೆ.
ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ವಿತರಿಸುವ ಬಹುವರ್ಣದ ಪಡಿತರ ಚೀಟಿಗೆ ಅರ್ಜಿದಾರರು ಯಾವುದೇ ಹಣ, ಶುಲ್ಕ ನೀಡಬೇಕಾಗಿಲ್ಲ. ಶಾಶ್ವತ ಪಡಿತರ ಚೀಟಿಗಳನ್ನು ಸ್ಪೀಡ್ ಪೋಸ್ಟ್ ಅಂಚೆಯ ಮೂಲಕ ಅರ್ಜಿದಾರರ ಮನೆಗೆ ರವಾನಿಸಲಾಗುತ್ತದೆ. ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮದ ಪ್ರಯೋಜನ ಪಡೆದು ಅನ್ನಭಾಗ್ಯ ಯೋಜನೆ ಆಶಯದಂತೆ ಹಸಿವು ಮುಕ್ತ ಕೊಪ್ಪಳ ಜಿಲ್ಲೆ ನಿರ್ಮಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error