ಫಸಲ್ ಭಿಮಾ ಯೋಜನೆಯ ಹಣ ನೀಡುವಲ್ಲಿ ರಾಜ್ಯ ವಿಳಂಬ : ಪಸಕ್ತ ಬಜೆಟ್ ಅಧಿವೇಶನದಲ್ಲಿ ಚರ್ಚೆಗೆ ಸಂಸದ ಸಂಗಣ್ಣ ಕರಡಿ ಆಗ್ರಹ

ಫಸಲ್ ಭಿಮಾ ಯೋಜನೆಯ ಹಣ ನೀಡುವಲ್ಲಿ ರಾಜ್ಯ ವಿಳಂಬ| ರೈತಪರ ಕಾಳಜಿಯಿಲ್ಲದ ರಾಜ್ಯ ಸರ್ಕಾರ|| ಪಸಕ್ತ ಬಜೆಟ್ ಅಧಿವೇಶನದಲ್ಲಿ ಚರ್ಚೆಗೆ ಸಂಸದ ಸಂಗಣ್ಣ ಕರಡಿ ಆಗ್ರಹ

ಕೊಪ್ಪಳ, ಜು.೦೪: ಫಸಲ್ ಭಿಮಾ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಸಕಾಲಕ್ಕೆ ರೈತರ ಖಾತೆಗೆ ಹಣ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡಿದೆ. ರಾಜ್ಯ ಸರ್ಕಾರಕ್ಕೆ ಕಿಂಚಿತ್ತು ರೈತಪರವಾದ ಕಾಳಜಿಯಿಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಹಾಗೂ ಸಂಸದ ಸಂಗಣ್ಣ ಕರಡಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ೨೦೧೬ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೩೮೫೩೦ ರೈತರು ವಿಮಾ ಯೋಜನೆಯಡಿಯಲ್ಲಿ ನೋಂದಣಿ ಮಾಡಿದ್ದಾರೆ. ಇದಕ್ಕಾಗಿ ೫೮.೫೨ ಕೋಟಿ ಫಸಲ್ ಭಿಮಾ ಯೋಜನೆಯ ಹಣವನ್ನು ಕೇಂದ್ರ ಸಕಾರ ಬಿಡುಗಡೆ ಮಾಡಿದೆ. ಈ ಪೈಕಿ ರಾಜ್ಯ ಸರ್ಕಾರ ೩೪,೪೩೩ ಸಾವಿರ ರೈತರಿಗೆ ಒಟ್ಟು ೫೩.೨೫ ಕೋಟಿ ಹಣ ಖಾತೆಗೆ ಜಮಾ ಮಾಡಿದೆ. ಆದರೆ ೪೦೯೨ ರೈತರಿಗೆ ೫.೨೭ ಕೋಟಿ ಹಣ ಇನ್ನೂ ಜಮಾ ಮಾಡಬೇಕಿದೆ. ಈ ಸಾಲಿನ ಹಿಂಗಾರು ಬೆಳೆಯ ವಿಮಾ ಪೈಕಿ ೬೫,೫೨೦ ಸಾವಿರ ರೈತರ ೭೭.೫೧ ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದರೂ ಕೂಡಾ ರಾಜ್ಯ ಸರ್ಕಾರ ಜಮಾ ಮಾಡಿಲ್ಲ.
ಇಂದರೊಂದಿಗೆ ೨೦೧೭ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ೭೨೫೮ ರೈತರ ೮.೭೦ ಕೋಟಿ ಹಣವನ್ನು ಇದುವರೆಗೂ ರಾಜ್ಯ ಸರ್ಕಾರ ನೀಡದಿರುವುದು ಖಂಡನೀಯ. ೨೦೧೭-೧೮ನೇ ಸಾಲಿನ ಅವಧಿಯಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿ ಮಾಡಿದ ತೊಗರಿ ಬೆಳೆಗೆ ೭.೫೪ ಕೋಟಿ, ಮತ್ತು ಕಡಲೆ ಬೆಳೆಗೆ ೧೬.೧೬ ಕೋಟಿ ಸರ್ಕಾರದ ಬಾಕಿ ಉಳಿದ ಮೊತ್ತವನ್ನು ಬಿಡುಗಡೆ ಮಾಡಬೇಕಿದೆ. ವಿಮಾ ಪರಿಹಾರದ ಮೊತ್ತವನ್ನು ರೈತರ ಖಾತೆಗೆ ಮುಂದಿನ ಹಂಗಾಮಿನ ಮುಂಚಿತವಾಗಿ ಜಮಾ ಮಾಡುವುದು. ಆಯಾ ವಿಮಾ ಕಂಪನಿಗಳು ಪ್ರತಿ ಜಿಲ್ಲೆಯಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಬೇಕು. ಈಗಾಗಲೇ ಎರಡು ಸದನಗಳಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಈ ವಿಷಯದ ಬಗ್ಗೆ ಪ್ರಸ್ತಾಪಿಸಲು ವಿಧಾನಸಭೆಯ ವಿ.ಪ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು, ಪರಿಷತ್ತಿನ ವಿ.ಪ ನಾಯಕರಾದ ಕೋಟಾ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ತರಲಾಗುವುದು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಹಾಗೂ ಸಂಸದ ಸಂಗಣ್ಣ ಕರಡಿ ಎಚ್ಚರಿಕೆ ನೀಡಿದ್ದಾರೆ. ಶ್ರೀ ಬಸವೇಶ್ವರ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಾದ ಎಂ. ಕನಗವಲ್ಲಿಯವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗಡಗಿ, ಜಿ.ಪ್ರ.ಕಾರ್ಯದರ್ಶಿ ಜಗದೀಶಗೌಡ ತಗ್ಗಿನಮನಿ, ಕೊಪ್ಪಳ ಬೂತ್ ಸಮಿತಿ ಸಂಚಾಲಕ ಅಮರೇಶ ಕರಡಿ, ಜಿ.ಪಂ ಸದಸ್ಯರಾದ ರಾಮಣ್ಣ ಚೌಡ್ಕಿ, ಗವಿಸಿದ್ದಪ್ಪ ಕರಡಿ, ತಾ.ಪಂ ಸದಸ್ಯರಾದ ಪಾಲಕ್ಷಪ್ಪ ಗುಂಗಾಡಿ, ಚಂದ್ರಕಾಂತ ನಾಯಕ, ನಗರಸಭೆ ಸದಸ್ಯ ಪ್ರಾಣೇಶ ಮಾದಿನೂರ, ಮಾರುತಿ ಕಾರಟಗಿ, ಮುಖಂಡರಾದ ಮಹಾಂತೇಶ ಮೈನಳ್ಳಿ, ಮಂಜುನಾಥ ಹಂದ್ರಾಳ, ಬಸಲಿಂಗಪ್ಪ ಬೂತೆ, ಸಂಗಮೇಶ ಡಂಬಳ, ನೀಲಕಂಠಯ್ಯ ಹಿರೇಮಠ, ಈಶಪ್ಪ ಮಾದಿನೂರ, ಬಸವರಾಜ ಈಶ್ವರಗೌಡ, ವಿರೇಶ ಸಜ್ಜನ, ಶರಣಪ್ಪ ಬೇಟಗೇರಿ, ಬಸವರಾಜ ಅಗಳಕೇರಾ, ವಸಂತರಡ್ಡಿ ಅಳವಂಡಿ, ಹೇಮಲತಾ ನಾಯಕ, ವಾಣಿಶ್ರೀ ಮಠದ, ಶ್ರವಣಕುಮಾರ ಬಂಡಾನವರ, ಅಮೀತ ಕಂಪ್ಲೀಕರ್, ಗಣೇಶ ಹೊರತಟ್ನಾಳ, ಶ್ರೀನಿವಾಸ ಪೂಜಾರ, ಚಂದ್ರುಸ್ವಾಮಿ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಇನ್ನೂ ಅನೇಕರು ಭಾಗವಹಿಸಿದ್ದರು.

Please follow and like us:
error

Related posts