ಪ್ರೇರಣೆ ನೀಡಿದ ಕೌಶಲ್ಯ ತರಬೇತಿ

ಕೊಪ್ಪಳ: ಸಂದರ್ಶನ ಎದುರಿಸುವುದು ಹೇಗೆಂಬುದನ್ನು ತಿಳಿದುಕೊಂಡರೆ ಉದ್ಯೋಗ ಪಡೆಯುವುದು ಬಲು ಸುಲಭ. ನಮ್ಮ ಓದಿನ ಜೊತೆಗೆ ಈ ಜ್ಞಾನವೂ ಮಹತ್ವದ್ದು ಎಂದು ಎಎಂ.ಎಸ್. ಗ್ರೂಪ್‍ನ ತರಬೇತಿದಾರರು ವಿವರಿಸಿದರು.
ಉದ್ಯೋಗ ಮೇಳದ ಅಂಗವಾಗಿ ಪಾಲಕರು ಹಾಗೂ ಅಭ್ಯರ್ಥಿಗಳಿಗೆ ಶನಿವಾರ ದಿನವಿಡೀ ನಡೆದ ಶಿಬಿರದಲ್ಲಿ, ವಿವಿಧ ಸಂಪನ್ಮೂಲ ವ್ಯಕ್ತಿಗಳು ಸಂದರ್ಶನ ಅಂದರೆ ಏನು, ಅದು ಹೇಗಿರುತ್ತೆ, ಅದಕ್ಕೆ ನಾವು ಹೇಗೆ ಸನ್ನದ್ಧರಾಗಿ ಬರಬೇಕು, ಸಂದರ್ಶನಕ್ಕೂ ಮುನ್ನ ನಾವು ಹೇಗೆ ತಯಾರಾಗಿ ಬರಬೇಕು, ಸಂದರ್ಶನದಲ್ಲಿ ನಮ್ಮ ಬಾಡಿ ಲಾಂಗ್ವೇಜ್ ಮತ್ತು ಡ್ರೆಸ್ ಸೆನ್ಸ್ ಹೇಗಿರಬೇಕು, ನಮ್ಮ ಮಾನಸಿಕ ಸಿದ್ಧತೆ ಎಂತಿರಬೇಕು ಎಂಬುದನ್ನೆಲ್ಲ ಎಳೆಎಳೆಯಾಗಿ, ಉದಾಹರಣೆ ಸಹಿತ ವಿವರಿಸಿದರು.
ಸಂದರ್ಶನ ಎಂಥದು, ಸಂದರ್ಶಕರ ಯೋಚನಾಧಾಟಿ ಹೇಗಿರುತ್ತದೆ, ಮೆಂಟಾಲಿಟಿ ಹೇಗಿರುತ್ತೆ, ನಾವು ಯಾವ ಕಂಪನಿ ಕೆಲಸಕ್ಕೆ ಸಂದರ್ಶನಕ್ಕೆ ಹೊರಟಿದ್ದೇವೋ ಆ ಕಂಪನಿಯ ಹಿನ್ನೆಲೆ ಏನು, ಆ ಕಂಪನಿಯ ಕುರಿತು ಸ್ವಲ್ಪ ಮಟ್ಟಿಗಾದರೂ ಪೂರ್ವಾಪರ ಮಾಹಿತಿ ತಿಳಿದುಕೊಳ್ಳಬೇಕಾದ ಮಹತ್ವವನ್ನು ತರಬೇತುದಾರರು ವಿವರಿಸಿದರು.
ಬಹುತೇಕ ಕಂಪನಿಗಳು ನಿಮ್ಮ ವಿದ್ಯಾಭ್ಯಾಸಕ್ಕಿಂತ ಹೆಚ್ಚಾಗಿ ನಿಮ್ಮ ಅಟಿಟ್ಯೂಡ್ (ದೃಷ್ಟಿಕೋನ) ಹೇಗಿರುತ್ತೆ ಎಂಬುದಕ್ಕೆ ಒತ್ತು ಕೊಡುತ್ತಾರೆ. ನಿಮ್ಮ ದೃಷ್ಟಿಕೋನ ನೋಡಿಕೊಂಡು, ಅದರ ಮೇಲೆ ಎಂತಹ ಕೆಲಸ, ಯಾವ ಹುದ್ದೆ ಎಂಬುದನ್ನು ನಿರ್ಧರಿಸುತ್ತಾರೆ ಎಂಬುದನ್ನು ತಿಳಿಸಿದರು. ಶ್ರೀದೇವಿ ಹಿರೇಮಠ ಅವರು ನಾನಾ ಬಗೆಯ ಪ್ರಯೋಗಗಳ ಮೂಲಕ ತಮ್ಮ ವಿಶಿಷ್ಟ ಮಾತುಗಾರಿಕೆಯಿಂದ ಅಭ್ಯರ್ಥಿಗಳ ಗಮನ ಸೆಳೆದರು.
ತಮ್ಮ ಮಾತಿನಿಂದ ಸುಮಾರು 3,500ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಗೂ ಪಾಲಕರಲ್ಲಿ ಪ್ರೇರಣೆ ಮೂಡಿಸುವ ಮೂಲಕ ಹೊಸ ಜಗತ್ತನ್ನೇ ಅನಾವರಣ ಮಾಡಿದರು. ಭಾನುವಾರ ನಿಗದಿಯಾಗಿರುವ ಸಂದರ್ಶನವನ್ನು ಅತ್ಯುತ್ತಮವಾಗಿ ಎದುರಿಸಬಲ್ಲೆವು ಎಂಬ ಆತ್ಮವಿಶ್ವಾಸವನ್ನು ಅವರಲ್ಲಿ ತುಂಬಿದರು.
ಸಮೂಹ ಸಾಮಥ್ರ್ಯ ಸಂಸ್ಥೆಯ ಸುಮಾರು 40 ಜನ ವಿಚೇತನ ಮಕ್ಕಳಿಗೆ (ಕಿವುಡ ಮತ್ತು ಮೂಗ) ಅವರಿಗೆ ಅವರಿಗೆ ತಿಳಿಯುವ ಹಾಗೆ ಸಂಜ್ಞೆ ಭಾಷೆಯಲ್ಲಿ ಸಂವಹನ ನಡೆಸುವ ಮೂಲಕ, ಅಂತಹ ಅಭ್ಯರ್ಥಿಗಳಿಗೂ ಸಂದರ್ಶನದ ಕಲೆಗಾರಿಕೆಯನ್ನು ಮನದಟ್ಟು ಮಾಡಿದ್ದು ವಿಶೇಷ ಎನಿಸಿತು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಜಿಪ. ಸದಸ್ಯ ರಾಮಣ್ಣ ಚೌಡ್ಕಿ, ಗವಿಸಿದ್ದಪ್ಪ ಕರಡಿ, ಅಮರೇಶ ಕರಡಿ, ನವೀನ್ ಗುಳಗಣ್ಣವರ, ಗಿರೀಶ್ ಕಣವಿ, ಸೇರಿದಂತೆ ಇನ್ನಿತರರು ಇದ್ದರು.

Please follow and like us:
error