2 ವರ್ಷಗಳ ಹಿಂದೆ ಮನೆ ಬಿಟ್ಟಿದ್ದ ಯುವಕ ಮರಳಿ ಮನೆ ಸೇರಲು ಕಾರಣವಾಯಿತು ‘ಲಾಕ್‍ಡೌನ್’ !

ಬಾಗಲಕೋಟೆ, ಎ.11: ಹೆತ್ತವರು ಬೈದ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದ ಯುವಕನೋರ್ವ ಈಗ ಎರಡು ವರ್ಷಗಳ ನಂತರ ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮರಳಿ ತನ್ನವರನ್ನು ಸೇರಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.         

ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಪ್ರಶಾಂತ ಮತ್ತರಗಿ (22) ಎಂಬ ಯುವಕ ಈಗ ಮತ್ತೆ ತನ್ನ ಪೋಷಕರನ್ನು ಸೇರಿದ್ದಾನೆ. ಗೋಕಾಕ್‍ನ ‘ಮನಃಸಾಕ್ಷಿ ಪೌಂಡೇಷನ್’ ಯುವಕ ತನ್ನ ಪೋಷಕರನ್ನು ಸೇರಲು ನೆರವಾಗಿದೆ.

ಪ್ರಶಾಂತ ಎರಡು ವರ್ಷದ ಹಿಂದೆ ಹೆತ್ತವರ ಬೈಗುಳಕ್ಕೆ ಕೋಪಗೊಂಡು ರೈಲು ಹತ್ತಿ ಬೆಂಗಳೂರು ಕಡೆ ಹೋಗಿದ್ದ. ಬಳಿಕ ಅಲ್ಲಿಯೇ ಹೊಟೇಲ್‍ವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ ಕೊರೋನ ವೈರಸ್‍ನಿಂದ ದೇಶಾದ್ಯಂತ ಲಾಕ್‍ಡೌನ್ ವಿಧಿಸಿದ್ದರಿಂದ ಬೆಂಗಳೂರಿನಲ್ಲಿ ಕೆಲಸ ಇಲ್ಲದೇ ಕಳೆದ 20 ದಿನಗಳ ಹಿಂದೆ ಮತ್ತೆ ರೈಲಿನ ಮೂಲಕ ಪ್ರಶಾಂತ ಗೋಕಾಕ ನಗರಕ್ಕೆ ಬಂದಿದ್ದಾನೆ. ಗೋಕಾಕ ನಗರದಲ್ಲಿ ಒಬ್ಬಂಟಿಯಾಗಿ ಅಲೆದಾಡುತ್ತಿದ್ದ ಪ್ರಶಾಂತನನ್ನು ಗಮನಿಸಿದ ಮನಃಸಾಕ್ಷಿ ಫೌಂಡೇಶನ್ ಸದಸ್ಯರು ಆತನನ್ನು ವಿಚಾರಿಸಿದ್ದಾರೆ. ಬಳಿಕ ಮಾಹಿತಿಗಾಗಿ ಪ್ರಶಾಂತನ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆಗ ಫೇಸ್‍ಬುಕ್‍ನಲ್ಲಿ ಪ್ರಶಾಂತನ ಫೋಟೊ ನೋಡಿದ ಸಂಬಂಧಿಕರು ಮನಃಸಾಕ್ಷಿ ಫೌಂಡೇಷನ್‍ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಎಲ್ಲವೂ ಗೊತ್ತಾದ ಬಳಿಕವೂ ಲಾಕ್‍ಡೌನ್ ಇದ್ದ ಕಾರಣ ಪ್ರಶಾಂತನನ್ನು ಕರೆತರಲು ಪೋಷಕರು ಅಸಹಾಯಕರಾಗಿದ್ದರು.

ಈ ಬಗ್ಗೆ ಮನಃಸಾಕ್ಷಿ ಪೌಂಡೇಷನ್ ಸದಸ್ಯರು ಗೋಕಾಕ ತಹಶೀಲ್ದಾರ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಶಾಂತನನ್ನು ವಾಹನ ವ್ಯವಸ್ಥೆ ಮಾಡಿಕೊಂಡು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಪ್ರಶಾಂತನ ಮನೆಗೆ ಬಿಟ್ಟು ಬಂದಿದ್ದಾರೆ.

Please follow and like us:
error