ಕೊಪ್ಪಳದ ಕರುಣಾಮಯಿ ಪರಮ ಪೂಜ್ಯ ಮರಿಶಾಂತವೀರ ಮಹಾಶಿವಯೋಗಿಗಳು

 

 ೧೫.೦೬.೨೦೨೦ರಂದು ೫೩ನೇ  ಪುಣ್ಯ ಸ್ಮರಣೆ

(ಪೂಜ್ಯ ಸಂಸ್ಥಾನ ಶ್ರೀ ಗವಿಮಠದ ಮಹಾದಾಸೊಹ ಪರಂಪರೆಯನ್ನು ಪೋಷಿಸಿ ಬೆಳಗಿದವರು, ೧೬ನೇ ಪೀಠಾಧಿಪಾತಿಗಳಾಗಿರುವ ಶ್ರೀ.ಮ.ನಿ.ಪ್ರ.ಸ್ವ.ಜ ಮರಿಶಾಂತರವೀರ ಮಹಾಶಿವಯೋಗಿಗಳವರು. ದಿನಾಂಕ ೧೫.೦೬.೨೦೨೦ರಂದು ಅವರ ೫೩ನೇ  ಪುಣ್ಯ ಸ್ಮರಣೆ ನಿಮಿತ್ಯವಾಗಿ ಪೂಜ್ಯರನ್ನು ಸ್ಮರಿಸಿ, ಪೂಜ್ಯರ ಸತ್ಕಾರ್ಯ ಪರಿಚಯಿಸುವದೇ ಈ ಲೇಖನದ ಉದ್ದೇಶವಾಗಿದೆ. ಮತ್ತು ಪೂಜ್ಯರು ಸೇವೆಗೈದ ಪವಿತ್ರ ಹೆಜ್ಜೆಗಳನ್ನು  ಅರಿತುಕೊಂಡು ಪರಮಾನಂದ ಪಡಯುವದೇ ಒಂದು ಭಾಗ್ಯವೆಂದು ಭಾವಿಸಿದ್ದೇನೆ. ಹಾಗೆಯೇ ಪೂಜ್ಯ ಶ್ರೀ.ಮ.ನಿ.ಪ್ರ.ಸ್ವ.ಜ ಮರಿಶಾಂತವೀರ ಮಹಾಶಿವಯೋಗಿಗಳ ಘನ ಶ್ರೇಯಾತ್ಮಕ್ಕೆ ನಮನವನ್ನು ಸಲ್ಲಿಸುವುದು ಈ ಲೇಖನದ ಒಳಾಂತರಗಳಲ್ಲಿ ಒಂದಾಗಿದೆ.)

        ಕನ್ನಡ ನಾಡು ಭರತ ಭೂಮಿಯ ಹೆಮ್ಮೆಯ ತೊಟ್ಟಿಲು. ಇದು ಪ್ರಾಕೃತಿಕ ಸಂಪತ್ತಿನಿಂದ ಅಷ್ಟೆ  ಅನೇಕ ಸಂತರು, ಶರಣರು, ದಾರ್ಶನಿಕರಿಗೆ ಜನ್ಮ ನೀಡಿದ ಪುಣ್ಯ, ಶ್ರೀಮಂತಕೆ ತುಂಬಿದ  ಭೂಮಿಯಾಗಿದೆ. ಇಂತಹ ಆಧ್ಯಾತ್ಮಿಕ ಸುಗಂಧ ತಂಗಾಳಿಂದ ಕೂಡಿರುವ ಕನ್ನಡ ನಾಡಿನ ನೋಟ ನೋಡುವುದಕ್ಕೆ ನೇತ್ರಾನಂದ ಕೇಳುವುದಕ್ಕೆ ಕರಣಾನಂದ. ಈ ಭವ್ಯ ನಾಡಿನಲ್ಲಿ ನೂರಾರು ಮಠ ಮಾನ್ಯಗಳು ತಮ್ಮ ಆಧ್ಯಾತ್ಮಿಕ ಜ್ಯೋತಿಯಿಂದ ನಾಡನ್ನು ಬೆಳಗಿವೆ, ಬೆಳಗುತ್ತಲೇ ಇವೆ. ಅಂತಹ ಭವ್ಯ ಪರಂಪರೆ ಇತಿಹಾಸ ತುಂಬಿಕೊಂಡು ನಾಡಿನಾದ್ಯಾಂತ ಪ್ರಜ್ವಲಿಸುತ್ತಿರುವ ಉತ್ತರ ಕರ್ನಾಟಕದ ಸದಾ ಸತ್ಕಾರ್ಯದ ತೇಜಸ್ಸಿನಿಂದ ಕಂಗೂಳಿಸುತ್ತಿರುವ ಸಂಸ್ಥಾನ ಶ್ರೀ ಗವಿಮಠವು ಒಂದಾಗಿದೆ.

ಸಂಸ್ಥಾನ ಶ್ರೀ ಗವಿಮಠದ ಪರಂಪರೆ :

ಸಂಸ್ಥಾನ ಶ್ರೀ ಗವಿಮಠದ ಚರಿತ್ರೆ ಇತಿಹಾಸ ಸಾವಿರ ವರ್ಷಕ್ಕಿಂತಲೂ ಅಧಿಕವೆಂಬೂದು ಶಿಲಾಶಾಸನದಿಂದಲೇ ತಿಳಿದು ಬರುತ್ತದೆ. ಆಧ್ಯಾತ್ಮಿಕ ತವರಿನಂತಿರುವ ಕೊಪ್ಪಳಕ್ಕೆ ವಾರಣಾಸಿಯಿಂದ ದಯಾಮಾಡಿಸಿ ಶ್ರೀ ಗವಿಮಠವನ್ನು ಸಂಸ್ಥಾಪಿಸಿದವರು ಪ್ರಥಮ ಪೀಠಾಧಿಕಾರಿ ಶ್ರೀ.ಮ.ನಿ.ಪ್ರ.ಸ್ವ.ಜ. ರುದ್ರಮುನಿ ಶಿವಯೋಗಿಗಳವರು. ಆರಂಭದಿಂದ ೧೮ನೇ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಸ್ವ.ಜ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳವರೆಗಿನ ಒಟ್ಟು ೧೮ ಪೀಠಾಧಿಪತಿಗಳ ಭವ್ಯ ಚರಿತ್ರೆ ಹೊಂದಿದೆ.  ಸಂಸ್ಥಾನ ಶ್ರೀ ಗವಿಮಠವು ಸಮಾಜೋಧಾರ್ಮಿಕ ಕಾರ್ಯಕ್ರಮಗಳ ಮೂಲಕ ದಕ್ಷಿಣ ಭಾರತದ ಕುಂಭಮೇಳ ಹಾಗೂ ತ್ರಿವಿಧ ದಾಸೋಹದ ಎರಡನೆ ಸಿದ್ಧಗಂಗೆಯಂದು ಪ್ರಸಿದ್ಧಿ ಪಡೆದಿದೆ.

ಪೂಜ್ಯ ಸಂಸ್ಥಾನ ಶ್ರೀ ಗವಿಮಠದ ಮಹಾದಸೊಹ ಪರಂಪರೆಯನ್ನು ಪೋಷಿಸಿ ಬೆಳಗಿದವರು, ೧೬ನೇ ಪೀಠಾಧಿಪಾತಿಗಳಾಗಿರುವ ಶ್ರೀ.ಮ.ನಿ.ಪ್ರ.ಸ್ವ.ಜ ಮರಿಶಾಂತರವೀರ ಮಹಾಶಿವಯೋಗಿಗಳವರು. ದಿನಾಂಕ ೧೫.೦೬.೨೦೨೦ ೫೩ನೇ  ಪುಣ್ಯ ಸ್ಮರಣೆ ನಿಮಿತ್ಯವಾಗಿ ಪೂಜ್ಯರನ್ನು ಸ್ಮರಿಸಿ, ಪೂಜ್ಯರ ಸತ್ಕಾರ್ಯ ಪರಿಚಯಿಸುವದೇ ಈ ಲೇಖನದ ಉದ್ದೇಶವಾಗಿದೆ. ಮತ್ತು ಪೂಜ್ಯರು ಸೇವೆಗೈದ ಪವಿತ್ರ ಹೆಜ್ಜೆಗಳನ್ನು  ಅರಿತುಕೊಂಡು ಪರಮಾನಂದ ಪಡಯುವದೇ ಒಂದು ಭಾಗ್ಯವೆಂದು ಭಾವಿಸಿದ್ದೇನೆ. ಹಾಗೆಯೇ ಪೂಜ್ಯ ಶ್ರೀ.ಮ.ನಿ.ಪ್ರ.ಸ್ವ.ಜ ಮರಿಶಾಂತವೀರ ಮಹಾಶಿವಯೋಗಿಗಳ ಘನ ಶ್ರೇಯಾತ್ಮಕ್ಕೆ ನಮನವನ್ನು ಸಲ್ಲಿಸುವುದು ಈ ಲೇಖನದ ಒಳಾಂತರಗಳಲ್ಲಿ ಒಂದಾಗಿದೆ.

ಪರಮ ಪೂಜ್ಯ ಶ್ರೀ.ಮ.ನಿ.ಪ್ರ.ಸ್ವ.ಜ ಮರಿಶಾಂತವೀರ ಮಹಾಶಿವಯೋಗಿಗಳವರು ತಮ್ಮ ಜೀವಿತಕಾಲಾವಧಿಯಲ್ಲಿ ಎಲ್ಲ ಭಕ್ತರ ಮಧ್ಯದಲ್ಲಿ ಇದ್ದುಕೊಂಡೆ , ಅವರನ್ನು ಪ್ರಿತಿಸಿದವರು. ಶಿವ-ಸಾದ್ವಿಕ ವ್ಯಕ್ತಿಗಳನ್ನಾಗಿ ಸಾಮಾಜಿಕರನ್ನು  ಪರಿವರ್ತಿಸಿದವರು; ಅಳಲಿದವರ-ಬಳಲಿದವರ-ದುಃಖಿತರ-ದುರ್ಬಲರ ನಾಲಗೆಯ ನುಡಿಯಾಗಿದ್ದವರು. ಜನರು ದುಃಖಿಸಿದರೆ ತಮ್ಮ ಕಣ್ಣುಗಳಲ್ಲಿ ಕಂಬನಿ ತಂದುಕೊಳ್ಳುವ ಕೊಪ್ಪಳದ ಕರುಣಾಮಯಿಯಾಗಿದ್ದರು. ನೊಂದ ಜೀವಗಳ ಸೇವೆಯಲ್ಲಿ ಲಿಂಗಪೂಜೆಯ ಆನಂದವನ್ನು ಕಂಡವರು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ ಈ ನಾಡಿನ ಭಾಗ್ಯವೆನಿಸಿಕೊಂಡವರು. ಈ ನಾಡು ಕಂಡ ಮಹಾ ಶಿವ ಸಂಸ್ಕೃತಿಯ ಆರಾಧಕರಾದವರು. ಕೊಪ್ಪಳ ಆಧ್ಯಾತ್ಮಿಕ, ಶೈಕ್ಷಣಿಕ ದೇವರಾಗಿರುವ, ಕಾಯಕ ದಾಸೋಹ ಸಂಪನ್ನರು, ಶ್ರೀಮಠಕ್ಕೆ ಬೆಳಕಿನ ತಿಲಕವಿಟ್ಟವರು, ಯುಗ-ಜಗಸಿರಿಯಾಗಿ ಮೂಡಿಬಂದವರು, ಮಕ್ಕಳಲ್ಲಿ ಮಹಾದೇವನನ್ನು ಕಂಡವರು, ಶರಣರ ಆದರ್ಶಗಳನ್ನು ಈ ಶತಮಾನದಲ್ಲಿ ಆಚರಣೆಗೆ ತಂದ ಶ್ರೇಷ್ಠ ಸಂತರಾಗಿದ್ದಾರೆ.

ಪರಮ ಪೂಜ್ಯ ಲಿಂ. ಮರಿಶಾಂತವೀರ ಮಹಾಶಿವಯೋಗಿಗಳವರ ಈ ನಾಡಿನ ಅಚ್ಚರಿ ಎನಿಸುವಷ್ಟು ಶ್ರೀ ಶಿವಯೋಗಕ್ಕೆ ಭಾಷ್ಯರೂಪ ಬರೆದವರು. ಭಕ್ತಾದಿಗಳ ಪ್ರೀತಿ ವಾತ್ಸಲ್ಯದ ಮಹಾಮೇರುವಾಗಿದ್ದರು. ಸರ್ವರಿಗೂ ಸಮಭಾವದಿಂದ ಕಾಣುವ ಸಮದರ್ಶಿಗಳಾಗಿದ್ದರು. ಆಧ್ಯಾತ್ಮ, ಜ್ಞಾನ ತಪೋನಿಷ್ಠೆಯ ಸಾಗರವಾಗಿದ್ದರು. ಸಂಸ್ಥಾನ ಶ್ರೀ ಗವಿಮಠದ ಭವ್ಯ ಪರಂಪರೆಯ ಶಾಂತ ಸೂರ್ಯನಂತೆ ಪ್ರಜ್ವಲಿಸಿ ಲಕ್ಷೆಪಲಕ್ಷ ಭಕ್ತರ ಬಾಳಿಗೆ ಬೆಳಕು ನೀಡಿದ ಪುಣ್ಯಾತ್ಮರಾಗಿದ್ದಾರೆ. ಈ ಯುಗ ಪುರುಷರು ನಮ್ಮ ನಾಡಿನಲ್ಲಿ ಜನಿಸಿರುವುದು, ಅವರ ಚಿಂತನೆ ನೆರಳಿನಲ್ಲಿ ನಾವು ಜೀವಿಸುತ್ತಿರುವುದು ನಮ್ಮೆಲ್ಲರ ಭಾಗ್ಯ. ಪರಮ ಪೂಜ್ಯ ಲಿಂ. ಶ್ರೀ  ಮರಿಶಾಂತವೀರ ಮಹಾಸ್ವಾಮಿಗಳವರು ಕಟ್ಟಿ ಬೆಳೆಸಿದ ಇಂತಹ ಪುಣ್ಯ ಸ್ಥಳಗಳಲ್ಲಿ ನೆಲಸುವುದೇ ಜೀವನದ ದೊಡ್ಡ ಸೌಭಾಗ್ಯ.

ಕನ್ನಡ ನಾಡು ಕಂಡ ಆಧ್ಯಾತ್ಮಿಕ ರತ್ನದಂತಿರುವ ಅಕ್ಷರ, ಅನ್ನ, ಆರೋಗ್ಯ, ಆಶ್ರಯ, ಚತುರ್ವಿಧ ದಾಸೋಹಿ ಪರಮ ಪೂಜ್ಯ ಶ್ರೀ.ಮ.ನಿ.ಪ್ರ.ಸ್ವ.ಜ. ಮರಿಶಾಂತವೀರ ಮಹಾಶಿವಯೋಗಿಗಳವರ ೫೩ನೇ ಪುಣ್ಯ ಸ್ಮರಣೆಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಇರುವ ಆನಂದಕ್ಕಿಂತ ಸಂಪತ್ತು ಮತ್ತೊಂದಿಲ್ಲ. ಪೂಜ್ಯರು ಮಾಡಿದ ನೂರಾರು ಲೋಕ ಕಲ್ಯಾಣ ಪರವಾದ ಯೋಜನೆಗಳು ಯೋಜಿತಗೊಂಡಿದ್ದು ಎಲ್ಲವೂ ಸಕ್ರೀಯವಾಗಿ ಕಾರ್ಯಶೀಲವಾಗಿರುವುದು ಅವರ ದಿವ್ಯಶಕ್ತಿಯ ಫಲವೇ ಆಗಿದೆ. ಈ ಆಧ್ಯಾತ್ಮ ದಾಸೋಹಿಯ ಪರಿಸರದ ಹಿನ್ನಲೇ, ಅವತರಣ, ಪೂಜ್ಯರು ನಡೆದ ಬಂದ ದಾರಿ, ಶೈಕ್ಷಣಿಕ ಸೇವೆಯ ಯಶೋಗಾಥೆ ತಿಳಿಯುವುದೆ ಒಂದು ಪ್ರೇರಣೆ.

ದಾಸೋಹ ಸಂತನ ಅವತರಣ:

        ಇಂದಿನ ಗದಗ ಜಿಲ್ಲೆಗೆ ಸೇರಿದ ರೋಣ ತಾಲೂಕಿನ ‘ಸೂಡಿ’ ಗ್ರಾಮ ಜಗದ್ಗುರು ಮರಿಶಾಂತವೀರ ಮಹಾಶಿವಯೋಗಿಗಳ ಜನ್ಮ ಸ್ಥಳ. ಈ ಗ್ರಾಮದಲ್ಲಿರುವ ಮಾಹೇಶ್ವರ ಸುಸಂಸ್ಕೃತ ಜುಕ್ತಿ ಹಿರೇಮಠ ಮನೆತನದವರು. (ಸಂಸ್ಥಾನ ಶ್ರೀ ಗವಿಮಠದ ೧೭ನೇ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಸ್ವ.ಜ ಶಿವಶಾಂತವೀರ ಮಹಾಶಿವಯೋಗಿಗಳು ಸಹ ಈ ಮನೆತನಕ್ಕೆ ಸೇರಿದವರು). ಶ್ರೀ ವೇ|| ಬಸವಲಿಂಗಯ್ಯ ಹಾಗೂ ಶ್ರೀಮತಿ ಶಾಂತಮ್ಮ ಸಾತ್ವಿಕ ದಂಪತಿಗಳ ಉದರದಲ್ಲಿ ಜನಿಸಿದರು ಗುರುನಂಜಯ್ಯ (ಗುರುನಂಜಯ್ಯ ಎಂಬುದು ಪೂಜ್ಯ ಮರಿಶಾಂತವೀರ ಮಹಾಶಿವಯೋಗಿಗಳವರ ಜನ್ಮ ನಾಮವಾಗಿದೆ). ಪೂಜ್ಯ ಮರಿಶಾಂತವೀರ ಮಹಾಶಿವಯೋಗಿಗಳವರಿಗೆ ಗುರುನಂಜಯ್ಯ ಹೆಸರು ನೀಡಿದವರು ಅವರ ಅಜ್ಜನವರಾದ ಮುಪ್ಪಿನಾರ್ಯರು. 

ಶಿಕ್ಷಣ :

ಗುರುನಂಜಯ್ಯನವರ ಆರಂಭಿಕ ಶಿಕ್ಷಣ ಸ್ವಗ್ರಾಮ ಸೂಡಿಯಲ್ಲೇ ನಡೆಯಿತು. ತಂದೆ ಬಸವಲಿಂಗಯ್ಯನವರಿಂದ ಶಬರಶಂಕರ ವಿಳಾಸ, ರಾಜಶೇಖರ ವಿಳಾಸ, ವೃಷಭೇಂದ್ರ ವಿಜಯ ಮೇರು ಕೃತಿಗಳ ಓದು ಮುಂದುವರೆಸಿದರು. ನಂತರ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರಲ್ಲಿ ಸಂಸ್ಕೃತ ಅಧ್ಯಾಯನ ಮಾಡಿದರು. ಆಗಿನ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಕೆಲವೇ ಪಾಠಶಾಲೆಗಳಾಗಿದ್ದವು. ಶ್ರೀ ಗವಿಮಠ ಪಾಠಶಾಲೆ, ಬಾಗಲಕೋಟ ಪಾಠಶಾಲೆ, ಹುನಗುಂದ ಪಾಠಶಾಲೆ, ರೋಣ ಪಾಠಶಾಲೆ, ಅಬ್ಬಿಗೇರಿ ಪಾಠಶಾಲೆ ಹಾಗೂ ಬಟಗೇರಿ ಪಾಠಶಾಲೆ ಇದ್ದವು. ಇದರಲ್ಲಿ ಬಟಗೇರಿ ಪಾಠಶಾಲೆಗೆ ಸೇರಿದರು. ನಂತರ ಸೋಲ್ಲಾಪುರದಲ್ಲಿ ವಾರದ ಮಲ್ಲಪ್ಪನವರ ಪಾಠಶಾಲೆಗೆ ಸೇರಿ ಅಲ್ಲಿನ ಅಧ್ಯಾಪಕರ ಪ್ರೀತಿಗೆ ಪಾತ್ರರಾದರು. ಪ್ರಾಚಾರ್ಯರಾಗಿದ್ದ ಅಲ್ಲಿನ ಮಲ್ಲಿಕಾರ್ಜುನ ಶಾಸ್ತ್ರಿಗಳಿಗೆ ಗುರುನಂಜಯ್ಯ ಅಂದರೆ ಅಚ್ಚುಮೆಚ್ಚು ಅನ್ನುವ ಮಟ್ಟಿಗೆ ಗುರುಗಳ ಮೆಚ್ಚುಗಿಗೆ ಪಾತ್ರರಾಗಿದ್ದರು. ಕಾಶಿಯಲ್ಲಿ ಅಧ್ಯಾಯನಕ್ಕೆ ಸಾಗಿ ನ್ಯಾಯ, ಸಾಂಖ್ಯೆ, ವ್ಯಾಕರಣ, ಯೋಗಾಭ್ಯಾಸ ಕಲಿತರು. ಕಾಶಿಯಲ್ಲಿ ಸುಮಾರು ದಶಕಗಳ ವಿದ್ವತ್ ತಪೋನಿಷ್ಠತೆ ಅಧ್ಯಾಯನ ಮಾಡಿದರು.

ಗುರುನಂಜಯ್ಯನವರು ಸಂಸ್ಥಾನ ಶ್ರೀ ಗವಿಮಠದ ಪೀಠಾಧಿಪತಿಯಾದದ್ದು :

        ಲಿಂಗೈಕ್ಯರಾದ ಸಂಸ್ಥಾನ ಶ್ರೀ ಗವಿಮಠದ ೧೫ನೇ ಪೀಠಾಧಿಪತಿಗಳಾದ ಶಿವಶಾಂತವೀರ ಮಹಾಶಿವಯೋಗಿಗಳವರ ಲಿಂಗೈಕ್ಯರಾಗುವ ಪೂರ್ವದಲ್ಲಿಯೇ ಚಿರಂಜೀವಿ ಗುರುನಂಜಯ್ಯನವರನ್ನು ಶ್ರೀ.ಮ.ನಿ.ಪ್ರ.ಸ್ವ.ಜ ಮರಿಶಾಂತವೀರ ಮಹಾಶಿವಯೋಗಿಗಳೆಂಬ ಅಭಿಧಾನವಿತ್ತು ಸಂಸ್ಥಾನ ಶ್ರೀ ಗವಿಮಠದ ಪೀಠಾಧಿಕಾರಿ ಮಾಡಬೇಕೆಂಬ ಉಯಿಲು ಬರೆದಿಟ್ಟರು. ಆ ಪ್ರಕಾರ ಕೊಪ್ಪಳ ಭಕ್ತರು ಬಂದು ಪೂಜ್ಯರು ಬರೆದಿಟ್ಟ ಉಯಿಲು ತೋರಿಸಿದ ನಂತರ ತಂದೆ ತಾಯಿ ಹಾಗೂ ಊರ ದೈವದವರ ಹಾರೈಕೆ ಪಡೆದು, ಬುಧುವಾರ ದಿನಾಂಕ ೧೩.೧೨.೧೯೨೨ ರಂದು ಶ್ರೀ.ಮ.ನಿ.ಪ್ರ.ಸ್ವ.ಜ ಮರಿಶಾಂತವೀರ ಮಹಾಶಿವಯೋಗಿಯವರು ೧೬ನೇ ಪೀಠಾಧಿಪತಿಗಳಾಗಿ ನೇಮಕಗೊಂಡರು. ಪೂಜ್ಯರ ವಿರಕ್ತಾಶ್ರಮದ ಅನುಗ್ರಹವನ್ನು ಕಂಪ್ಲಿ ಕಲ್ಮಠದ ಶ್ರೀಗಳವರು ನೀಡಿದರು.

ಇವರ ಶೈಕ್ಷಣಿಕ ದಾಸೋಹ :

ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ,

ಕಾಮಿನಿ ನಿಮ್ಮವಳಲ್ಲ, ಅದು ಜಗಕಿಕ್ಕಿದ ವಿಧಿ,

ನಿನ್ನದೆಂಬುದು ಜ್ಞಾನ ರಕ್ತ ನೋಡ,

ಅಂತಪ್ಪ ಜ್ಞಾನ ರತ್ನವ ನೀನು,

ಅಳವಡಿಸಿಕೊಂಡದ್ದೇ ಆದರೆ ನಿನಗಿಂತ ಸಿರಿವಂತರಿಲ್ಲ ಕಾಣ ಗುಹೇಶ್ವರ

 

 ಎಂಬ ಅಲ್ಲಮಪ್ರಭುಗಳ ವಾಣಿಯಂತೆ ಮನುಷ್ಯನ ಬೆಳವಣಿಗೆಗೆ ಶಿಕ್ಷಣ ಅವಶ್ಯವೆಂದು ಅರಿತು ಶೈಕ್ಷಣೀಕವಾಗ ಹಿಂದುಳಿದಿರುವ ಈ ಪ್ರದೇಶದ ಭಕ್ತರಿಗೆ ಬೆಳವಣಿಗೆಗೆ ಶಿಕ್ಷಣವೊಂದೆ ಅವಶ್ಯವೆಂದು ಅರಿತು  ಕೊಪ್ಪಳದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆಯುವದರ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ ಶ್ರೇಷ್ಠ ಸಂತರಾಗಿದ್ದಾರೆ. ೧೯೫೦ರಲ್ಲಿ ಕೊಪ್ಪಳದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ೧೯೬೩ ರಲ್ಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್‌ನ್ನು ಸ್ಥಾಪಿಸಿದರು. ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸ್ಥಾಪಿಸಿದರು. ೧೯೬೩-೬೪ರಲ್ಲಿ  ಕುಕನೂರಿನಲ್ಲಿ ಪ್ರೌಢಶಾಲೆಯನ್ನು ಸ್ಥಾಪಿಸಿದರು. ಈ ಭಾಗದ ಶೈಕ್ಷಣಿಕ ಬರವನ್ನು ದೂರಮಾಡುವಲ್ಲಿ ಪೂಜ್ಯರ ಕಾರ್ಯ ಸ್ಮರನೀಯವಾಗಿದೆ. ಸುಮಾರು ೪೫ ವರ್ಷಗಳ ಉಗ್ರ ತಪಸ್ವಿಗಳಾಗಿ ಅಷ್ಠಾವರಣ, ಪಂಚಾಚಾರ, ಷಟಸ್ಥಲ ಶೀಲಾಚರಣೆಯ ಲಿಂಗಾಂಗ ಸಾಮರಸ್ಯದಲ್ಲಿ ಶಿವಾನುಭವಿಗಳಾಗಿ, ತ್ರಿವಿಧ ದಾಸೋಹ ಮೂರ್ತಿಗಳಾಗಿ, ಪೀಠದ ಬೆಳಕನ್ನು ಬೆಳಗಿದ ಮಹಾಶಿವಯೋಗಿಗಳವರು ೧೯೬೭ರ ಜುಲೈ ತಿಂಗಳಿನ ಮೊದಲನೇ ದಿನದಂದು (೦೧.೦೭.೧೯೬೭) ಶಿವಾಧೀನರಾದದ್ದು ಈ ಶೈಕ್ಷಣೀಕ ಕ್ಷೇತ್ರಕ್ಕೆ, ನಾಡಿಗಾದ ತುಂಬಾಲಾರದ ನಷ್ಟವೇ ಹೌದು.  ಸಮಸ್ತ ಪೂರ್ವ ಪೀಠಾಧಿಪತಿಗಳ ಉಜ್ವಲ ಪರಂಪರೆಯನ್ನು ಶ್ರೀಮಠದಲ್ಲಿ ಗಟ್ಟಿಗೊಳಿಸುವುದರ ಜೊತೆಗೆ, ಶ್ರೀಮಠದ ಸರ್ವಾಂಗೀಣ ಶ್ರೇಷ್ಠತ್ವ ಭದ್ರತೆಗೆ ಅಡಿಪಾಯ ಹಾಕಿದ ಕೀರ್ತಿ ಪರಮ ಪೂಜ್ಯ ಲಿಂ. ಮರಿಶಾಂತವೀರ ಮಹಾಶಿವಯೋಗಿಗಳವರಿಗೆ ಸಲ್ಲುತ್ತದೆ.

ಪೂಜ್ಯರ ಆಶೀರ್ವಾದದಿಂದ ಹಾಗೂ ಪ್ರಸ್ತುತ ೧೮ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಜಿಯವರ ಪೂರ್ವ ಪೂಜ್ಯರ ಸಂಕಲ್ಪದ ದಾರಿಯಲ್ಲಿ ಸಾಗುತ್ತ ಅವರು ಕಟ್ಟಿ ಬೆಳಸಿದ ಶೈಕ್ಷಣಿಕ ಸಂಸ್ಥೆಗಳನ್ನು ಉತ್ತಮ ಮಾರ್ಗದರ್ಶನದಲ್ಲಿ ನಡೆಸುತ್ತ ಬೆಳೆಸುತ್ತಿದ್ದಾರೆ. ಪ್ರಸ್ತುತ ಶ್ರೀ ಶಿವಶಾಂತವೀರ ಆಯುರ್ವೇದ ಮಹಾವಿದ್ಯಾಲಯ, ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ, ಶ್ರೀ ಗವಿಸಿದ್ಧೇಶ್ವರ ಸಂಗೀತ ಪಾಠಶಾಲೆ, ಶ್ರೀಮತಿ ಶಾರದಮ್ಮ ವ್ಹಿ. ಕೊತಬಾಳ ಪದವಿ ಮಹಾವಿದ್ಯಾಲಯ, ಶ್ರೀ ಗವಿಸಿದ್ಧೇಶ್ವರ ೨೦೦೦ ವಿದ್ಯಾರ್ಥಿಗಳ ಉಚಿತ ವಸತಿ ನಿಲಯ ಒಳಗೊಂಡ ಮುಂತಾದ ಸುಮಾರು ೨೩ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣ ನೀಡುವ ಕಾರ್ಯದಲ್ಲಿ ನಿರತವಾಗಿವೆ.

ಡಾ. ನಾಗರಾಜ ಜೆ. ದಂಡೋತಿ (ಸಹಾಯಕ ಪ್ರಾಧ್ಯಾಪಕ , ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ, ಕೊಪ್ಪಳ   ಮೋ: ೯೭೪೦೪೭೯೧೨೭)

 

 

Please follow and like us:
error