ಹುಸೈನಬ್ಬ ಸಾವಿನ ಪ್ರಕರಣ : ಹಿರಿಯಡ್ಕ ಎಸ್ಸೈ, ಇಬ್ಬರು ಪೊಲೀಸರ ಸಹಿತ ಆರು ಮಂದಿ ಸೆರೆ

ಬಜರಂಗದಳ ಕಾರ್ಯಕರ್ತರ ಜೊತೆ ಸೇರಿ ಮೃತದೇಹವನ್ನು ಹಾಡಿಯಲ್ಲಿ ಇರಿಸಿದ್ದ ಪೊಲೀಸರು !
ಪೊಲೀಸ್ ಜೀಪಿನಲ್ಲಿಯೇ ಮೃತ್ಯು

ಹುಸೈನಬ್ಬ ಸಾವಿನ ಪ್ರಕರಣಕ್ಕೆ ತಿರುವು: ಹಿರಿಯಡ್ಕ ಎಸ್ಸೈ, ಇಬ್ಬರು ಪೊಲೀಸರ ಸಹಿತ ಆರು ಮಂದಿ ಸೆರೆ

ಹಿರಿಯಡ್ಕ, ಜೂ.: ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ (62) ಅನುಮಾನಾಸ್ಪದ ಸಾವಿನ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆಗಳೊಗಾದ ಹುಸೈನಬ್ಬ ಪೊಲೀಸ್ ಜೀಪಿನಲ್ಲಿ ಮೃತಪಟ್ಟಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ಹಿರಿಯಡ್ಕ ಎಸ್ಸೈ ಹಾಗೂ ಇಬ್ಬರು ಪೊಲೀಸರು ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಡಿ.ಎನ್.ಕುಮಾರ್, ಹೆಡ್‌ಕಾನ್ ಸ್ಟೇಬಲ್ ಮೋಹನ್ ಕೊತ್ವಾಲ್, ಠಾಣಾ ಜೀಪು ಚಾಲಕ ಗೋಪಾಲ್ ಮತ್ತು ಬಜರಂಗದಳದ ಕಾರ್ಯಕರ್ತರಾದ ಪೆರ್ಡೂರು ಪಕಾಲು ನಿವಾಸಿ ಚೇತನ್ ಯಾನೆ ಚೇತನ್ ಆಚಾರ್ಯ(22), ಪೆರ್ಡೂರು ಅಲಂಗಾರು ನಿವಾಸಿ ಶೈಲೇಶ್ ಶೆಟ್ಟಿ (20), ಪೆರ್ಡೂರು ಕೆನ್ನೆತ್ ಬೈಲುವಿನ ಗಣೇಶ್ ನಾಯ್ಕ (24) ಬಂಧಿತ ಆರೋಪಿಗಳು. ಈ ಮೊದಲು ಸುರೇಶ್ ಮೆಂಡನ್ ಯಾನೆ ಸೂರಿ (43), ಕೊಂಡಾಡಿಯ ಪ್ರಸಾದ್ ಮರಕಾಲ (30), ಉಮೇಶ್ ಶೆಟ್ಟಿ (28), ರತನ್ ಪೂಜಾರಿ (22) ಎಂಬವರನ್ನು ಪೊಲೀಸರು ಬಳ್ಳಾರಿ ಹಾಗೂ ಹಿರಿಯಡ್ಕ ದಲ್ಲಿ ಬಂಧಿಸಿದ್ದರು. ಈವರೆಗೆ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 10ಕ್ಕೇರಿಕೆಯಾಗಿದೆ.

ತನಿಖೆಯಿಂದ ಬಹಿರಂಗ: ಬಜರಂಗದಳದ ಕಾರ್ಯಕರ್ತರು ಹಾಗೂ ಹಿರಿಯಡ್ಕ ಪೊಲೀಸರು ಪೆರ್ಡೂರು ಶೇನರಬೆಟ್ಟು ಎಂಬಲ್ಲಿ ಮೇ 30ರಂದು ಬೆಳಗ್ಗೆ 4 ಗಂಟೆಗೆ ಅಕ್ರಮ ದನ ಸಾಗಾಟದ ವಾಹನಕ್ಕಾಗಿ ಕಾದು ನಿಂತಿದ್ದರು. ಈ ವೇಳೆ ಶೇನರಬೆಟ್ಟು ಕಡೆಯಿಂದ ಪೆರ್ಡೂರು ಕಡೆಗೆ ಬರುತ್ತಿದ್ದ ಸ್ಕಾರ್ಪಿಯೋ ವಾಹನವನ್ನು ಆರೋಪಿಗಳು ಪೊಲೀಸರ ಎದುರಲ್ಲೇ ತಡೆದರು. ಈ ಸಂದರ್ಭ ಸ್ಕಾರ್ಪಿಯೋದಲ್ಲಿದ್ದ ಇಬ್ಬರು ಓಡಿ ಹೋಗಿದ್ದು, ಹುಸೈನಬ್ಬ ಗುಂಪಿನ ಕೈಗೆ ಸಿಕ್ಕಿ ಬಿದ್ದರು.

ಈ ವೇಳೆ ಬಜರಂಗದಳ ಕಾರ್ಯಕರ್ತರು ಸ್ಕಾರ್ಪಿಯೋ ವಾಹನವನ್ನು ದ್ವಂಸಗೊಳಿಸಿ ಹುಸೈನಬ್ಬರಿಗೆ ಹಲ್ಲೆ ನಡೆಸಿದರು. ತೀವ್ರವಾಗಿ ಗಾಯಗೊಂಡ ಹುಸೈನಬ್ಬರನ್ನು ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದರು. ಅಲ್ಲಿಂದ ಪೊಲೀಸರು ಹುಸೈನಬ್ಬರನ್ನು ಇಲಾಖಾ ಜೀಪಿನಲ್ಲಿ ಹಾಗೂ ದನ ಸಾಗಾಟ ಮಾಡಿದ ಸ್ಕಾರ್ಪಿಯೋ ವಾಹನವನ್ನು ಸುರೇಶ್ ಮೆಂಡನ್ ಯಾನೆ ಸೂರಿ ಹಾಗೂ ಇತರ ಆರೋಪಿಗಳು ಠಾಣೆಗೆ ತಂದರು. ಆ ವೇಳೆ ಗಂಭೀರವಾಗಿ ಹಲ್ಲೆಗೆ ಒಳಗಾಗಿ ಜೀಪಿನ ಹಿಂಬದಿ ಕುಳಿತಿದ್ದ ಹುಸೈನಬ್ಬ ಮೃತಪಟ್ಟರು ಎಂದು ತನಿಖೆಯಿಂದ ಬಹಿರಂಗ ಗೊಂಡಿದೆ.

ನಂತರ ಪೊಲೀಸರು ಠಾಣೆಗೆ ಬಂದಿದ್ದ ಬಜರಂಗದಳದ ಕಾರ್ಯಕರ್ತರಾದ ಪ್ರಸಾದ್ ಕೊಂಡಾಡಿ ಹಾಗೂ ಇತರರೊಂದಿಗೆ ಸೇರಿ ಮೃತದೇಹವನ್ನು ಕೃತ್ಯ ನಡೆದ ಶೇನರಬೆಟ್ಟು ಸ್ಥಳದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿರುವ ಪೆರ್ಡೂರು ಗ್ರಾಮದ ಕೊತ್ಯಾರು ಹಾಡಿಯಲ್ಲಿ ಇಟ್ಟು ಬಂದಿದ್ದರು. ನಂತರ ಬೆಳಗ್ಗೆ 9.45ರ ಸುಮಾರಿಗೆ ಹುಸೈನಬ್ಬ ದನದ ವಾಹನವನ್ನು ತಡೆಗಟ್ಟಿದ ಸಮಯ ಓಡಿ ತಪ್ಪಿಸಿಕೊಂಡು ಭಯದಿಂದ ಹೃದಯಾಘಾತಕ್ಕೆ ಒಳಗಾಗಿ ಮೃತ ಪಟ್ಟಿರಬಹುದೆಂದು ಪೊಲೀಸರು ಅಸಹಜ ಸಾವು ಪ್ರಕರಣವನ್ನು ದಾಖಲಿಸಿ ಕೊಂಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ತಪ್ಪೊಪ್ಪಿಕೊಂಡ ಎಸ್ಸೈ

ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಿ ಜೂ.1ರಂದು ಬಳ್ಳಾರಿಯಲ್ಲಿ ಇಬ್ಬರು ಹಾಗೂ ಹಿರಿಯಡ್ಕದಲ್ಲಿ ಇಬ್ಬರು ಬಜರಂಗದಳದ ಕಾರ್ಯಕರ್ತರನ್ನು ಬಂಧಿಸಲಾಯಿತು. ನಂತರ ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಪಡೆದ ತನಿಖಾಧಿಕಾರಿ ಕಾರ್ಕಳ ಎಎಸ್ಪಿ ಹೃಷಿಕೇಶ್ ಸೋನಾವಣೆ, ಹಿರಿಯಡ್ಕ ಎಸ್ಸೈ ಡಿ.ಎನ್.ಕುಮಾರ್, ಸಿಬ್ಬಂದಿಗಳಾದ ಮೋಹನ್ ಕೊತ್ವಾಲ್, ಗೋಪಾಲ್ ರನ್ನು ವಶಕ್ಕೆ ಪಡೆದುಕೊಂಡ ವಿಚಾರಣೆಗೆ ಒಳಪಡಿಸಿದರು.

ವಿಚಾರಣೆಯ ವೇಳೆ ಎಸ್ಸೈ ಸಹಿತ ಮೂವರು ಪೊಲೀಸರು ಘಟನೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಅದರಂತೆ ಮೂವರನ್ನು ಬಂಧಿಸಲಾಯಿತು. ಈಗಾಗಲೇ ನಾಲ್ವರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಅವರ ವಿಚಾರಣೆ ಮುಂದುವರಿದಿದೆ. ಇಂದು ಬಂಧಿಸಲ್ಪಟ್ಟ ಆರು ಮಂದಿ ಆರೋಪಿಗಳನ್ನು ಇಂದು ಸಂಜೆ ಉಡುಪಿಯಲ್ಲಿರುವ ನ್ಯಾಯಾಧೀಶರ ಮನೆಯ ಮುಂದೆ ಹಾಜರು ಪಡಿಸಲಾಯಿತು. ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸುವು ದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಶಂಸೆಗೆ ಕಾರಣವಾದ ಎಸ್ಪಿ ಕಾರ್ಯಾಚರಣೆ

ಘಟನೆ ಸಂಭವಿಸಿದ ಆರಂಭದಿಂದಲೂ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಕ್ಷಿಪ್ರವಾಗಿ ಘಟನೆಯ ಸತ್ಯಾಸತ್ಯೆಯನ್ನು ಹೊರಗೆಡುವಲ್ಲಿ ಯಶಸ್ವಿಯಾಗುವ ಮೂಲಕ ಸಾವಜರ್ನಿಕರ ಪ್ರಶಂಸೆ ಪಾತ್ರರಾಗಿದ್ದಾರೆ.

ಘಟನೆ ಸಂಭವಿಸಿದ ದಿನವೇ ಹಿರಿಯಡ್ಕ ಠಾಣೆಗೆ ತೆರಳಿದ್ದ ಎಸ್ಪಿ ನಿಷ್ಪಕ್ಷಪಾತ ತನಿಖೆ ನಡೆಸಿ ಶೀಘ್ರವೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಘಟನೆ ನಡೆದ ಮರುದಿನ ಮೇ 31ರಂದು ಕರ್ತವ್ಯ ಲೋಪ ಎಸಗಿದ ಎಸ್ಸೈ ಡಿ.ಎನ್.ಕುಮಾರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.