ಹಿರಿಯರ ಭಾವನಾತ್ಮಕ, ಅನುಭವ ಆಧಾರಿತ ಬೆಂಬಲ ನಮಗೆ ಅಗತ್ಯ : ಸಂಗಣ್ಣ ಕರಡಿ


ಕೊಪ್ಪಳ, : ಹಿರಿಯ ನಾಗರಿಕರು ನಮ್ಮೆಲ್ಲರ ಜೀವನದ ಮೂಲ ಬೇರುಗಳಾಗಿದ್ದು, ಮಾರ್ಗದರ್ಶಿಗಳಾಗಿ ನಮಗೆ ಬದುಕು ರೂಪಿಸಿಕೊಳ್ಳಲು ಅವರ ಭಾವನಾತ್ಮಕ, ಅನುಭವ ಆಧಾರಿತ ಬೆಂಬಲ ಅಗತ್ಯ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಜಿಲ್ಲಾ ಪಂಚಾಯತನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ನಿವೃತ್ತ ನೌಕರರ ಸಂಘ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ, ಅವರಿಗೆ ಅವಶ್ಯಕವಾದ ಎಲ್ಲ ಸೌಲಭ್ಯವನ್ನು ನೀಡಿ ಉತ್ತಮವಾಗಿ ಬೆಳೆಸುತ್ತಾರೆ. ಸ್ವಂತ ಬದುಕು ಕಟ್ಟಿಕೊಳ್ಳಲು ಸಶಕ್ತರನ್ನಾಗಿಸಿ, ಪ್ರತಿ ಕ್ಷಣ ನಮ್ಮ ಬೆಂಬಲಕ್ಕೆ ನಿಂತು ನಮ್ಮ ಯಶಸ್ಸಿನಲ್ಲಿ ಅವರು ಸಂತೋಷ ಕಾಣುತ್ತಾರೆ. ಆದ್ದರಿಂದ ಮಕ್ಕಳು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಹಿರಿಯರ ಮಾರ್ಗದರ್ಶನ, ಸಲಹೆಯನ್ನು ಪಡೆಯಬೇಕು. ಮುಪ್ಪಿನಲ್ಲಿ ಅವರಿಗೆ ಮಕ್ಕಳು ನೆರಳಾಗಬೇಕು ಎಂದರು.
ಹಿರಿಯ ನಾಗರಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಹಿರಿಯರ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿ ಕೇಂದ್ರ ರಚಿಸಲಾಗಿದೆ. ನೇರವಾಗಿ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿದರೆ ಸಂಬAಧಪಟ್ಟ ಅಧಿಕಾರಿಗಳು ಪರಿಹಾರ ಒದಗಿಸುತ್ತಾರೆ. ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಡಿ.ಕೆ ಇಮಾಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 97,295 ನಾಗರಿಕರಿರುವುದಾಗಿ ಅಂದಾಜಿಸಲಾಗಿದ್ದು, ಇಲಾಖೆಯಿಂದ ಇದುವರೆಗೆ 52,198 ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ವಿತರಿಸಲಾಗಿದೆ. ಸರ್ಕಾರದ ಅನುದಾನದಲ್ಲಿ 2 ವೃದ್ಧಾಶ್ರಮಗಳನ್ನು ನಡೆಸುತ್ತಿದ್ದು, ಕುಕನೂರಿನ ವಿದ್ಯಾನಂದ ಗುರುಕುಲ ವೃದ್ಧಾಶ್ರಮ ಮತ್ತು ಕೊಪ್ಪಳ ಭಾಗ್ಯನಗರದ ಮೈತ್ರಿ ವೃದ್ಧಾಶ್ರಮಗಳನ್ನು ನಿರ್ವಹಿಸಲಾಗುತ್ತಿದೆ. ಇದರಲ್ಲಿ 50 ಜನ ವೃದ್ಧರು ಆಶ್ರಯ ಪಡೆದಿದ್ದಾರೆ.
ಜಿಲ್ಲೆಯಲ್ಲಿನ ಹಿರಿಯ ನಾಗರಿಕರಿಗೆ ಬಸ್ ಪ್ರಯಾಣ ದರದಲ್ಲಿ ಶೇ.25 ರಷ್ಟು ರಿಯಾಯತಿ ಸೌಲಭ್ಯ ನೀಡಲಾಗಿದೆ. ಜಿಲ್ಲೆಯಲ್ಲಿ 91,453 ನಾಗರಿಕರು ಸರ್ಕಾರದ ವಿವಿಧ ಯೋಜನೆಯಡಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ. ಹಿರಿಯ ನಾಗರಿಕರಿಗಾಗಿ 2014ನೇ ಅಗಸ್ಟ್ ಮಾಹೆಯಿಂದ 1090 ಟೋಲ್ ಫ್ರೀ ಸಹಾಯವಾಣಿ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಹಗಲು ಯೋಗ ಕ್ಷೇಮ ಕೇಂದ್ರಾ ಆರಂಭಿಸಲಾಗಿದೆ ಮತ್ತು ಕೊಪ್ಪಳ ಕಂದಾಯ ಉಪವಿಭಾಗಕ್ಕೆ ವೃದ್ದಾಶ್ರಮ ಪ್ರಾರಂಭಿಸಲು ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೊಪ್ಪಳದ ಹಿರಿಯ ನ್ಯಾಯವಾದಿ ವಿ.ಎಮ್.ಭೂಸನೂರಮಠ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಹಿರಿಯ ನಾಗರಿಕರಿಗಾಗಿ 2007 ರ ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಅನುಷ್ಠಾನವಾಗಿದ್ದು, ಇದರಲ್ಲಿ ಅವರ ಉಪಜೀವನಕ್ಕಾಗಿ ಬೇಕಾಗುವ ಯೋಜನೆಗಳು, ಅವರ ಹಕ್ಕುಗಳು ಕುರಿತು ತಿಳಿಸಲಾಗಿದೆ. ಅದನ್ನು ಹಿರಿಯ ನಾಗರಿಕರು ತಿಳಿದುಕೊಳ್ಳಬೇಕು ಮತ್ತು ಅಗತ್ಯವಿದ್ದಲ್ಲಿ ಬಳಸಿಕೊಳ್ಳಬೇಕು. ಹಾಗೆಯೇ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಅಡಿಯಲ್ಲಿ ಮಕ್ಕಳು ಪೋಷಕರಿಂದ ಆಸ್ತಿ ಕಬಳಿಸಿ, ಅವರನ್ನು ಮನೆಯೊಂದ ಹೊರ ಹಾಕಿದಲ್ಲಿ ಅವರ ವಿರುದ್ಧ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಕುರಿತು ಹಾಗೂ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ನ್ಯಾಯಮಂಡಳಿಯಲ್ಲಿ ನಾಗರಿಕರು ಸಲ್ಲಿಸುವ ದೂರನ್ನು ಗರಿಷ್ಠ 90 ದಿನಗಳೊಳಗೆ ಇತ್ಯರ್ಥಪಡಿಸಲಾಗುವ ವಿವರಗಳ ಬಗ್ಗೆ ಮಾಹಿತಿ ನೀಡಿದರು.
ನಂತರ ಹಿರಿಯ ನಾಗರಿಕರು ಜೀವನಾಂಶ ಕೋರಿ ನ್ಯಾಯಾಲಯಗಳ ಮೊರೆ ಹೋಗಲು ಇರುವ ಸಂದೇಹಗಳನ್ನು ನ್ಯಾಯವಾದಿಗಳ ಮೂಲಕ ಪರಿಹಾರ ಕಂಡುಕೊAಡರು. ಸಮಾರಂಭಕ್ಕೆ ಆಗಮಿಸಿದ್ದ ಹಿರಿಯ ನಾಗರಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಸಿ.ವಿ.ಜಡಿಯವರ, ಜಿಲ್ಲಾ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ ಹಾಗೂ ಜಿಲ್ಲಾ ವಿಕಲಚೇತನರ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಮುದಿಯಪ್ಪ ಮೇಟಿ ನಿರೂಪಿಸಿದರು.

Please follow and like us:
error