ಹಿಂದೂ ಮಠದಲ್ಲಿ ಮುಸ್ಲಿಂ ಲೇಖಕರ ಪುಸ್ತಕ ಬಿಡುಗಡೆ : ಭಾವೈಕ್ಯತೆ ಮೆರೆದ ಮಮದಾಪುರದ ವಿರಕ್ತಮಠ

ವಿಜಯಪುರ ಸೆ. : ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂಥ ಘಟನೆಗಳು ನಡೆಯುತ್ತಿರುವ ಇವತ್ತಿನ ದಿನಗಳಲ್ಲಿ ಮಮದಾಪುರದ ವಿರಕ್ತಮಠದ ಶ್ರೀ ಅಭಿನವ ಮುರುಘರಾಜೇಂದ್ರ ಮಹಾಸ್ವಾಮಿಗಳು ತಮ್ಮ ಮಠದ ಕಾರ್ಯಕ್ರಮದಲ್ಲಿ ಮುಸ್ಲಿಂ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಕೋಮು ಸಾಮರಸ್ಯ ಮೆರೆದಿದ್ದಾರೆ.
ಶ್ರೀಮಠದಲ್ಲಿ ತಿಂಗಳಪರ್ಯಂತ ನಡೆದ ಶ್ರಾವಣಮಾಸದ ನಿಮಿತ್ಯ ಸೋಮವಾರ ಜರುಗಿದ `ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾರಾಜರ’ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಉರ್ದು ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ವಯೋವೃದ್ಧ ಅಲ್ಲಾಬಕ್ಷ ಮೀರಾಸಾಹೇಬ ಮಿರ್ಜಿ ಅವರಿಂದ ವಿರಚಿತ `ಮರ್ಮಜ್ಞನ ವಚನಗಳು’ ೨ ಮತ್ತು ೩ನೇ ಸಂಪುಟಗಳನ್ನು ಅಭಿನವ ಮುರುಘರಾಜೇಂದ್ರ ಶ್ರೀಗಳು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಎಲ್ಲ ಜನರು ಜಾತಿ, ಧರ್ಮ, ಕೋಮು ವೈಷಮ್ಯಗಳನ್ನು ಮರೆತು ಭಾವೈಕ್ಯತೆಯಿಂದ ಕೂಡಿ ಬಾಳುವ ಮೂಲಕ `ವಿವಿಧತೆಯಲ್ಲಿ ಏಕತೆ’ ಸಾರುವ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.
ಉರ್ದು ಭಾಷಿಕರಾದರೂ ಕನ್ನಡ ಭಾಷೆಯ ಮೇಲೆ ಹಿಡಿತವನ್ನು ಹೊಂದಿರುವ ಅಲ್ಲಾಬಕ್ಷ ಮಿರ್ಜಿ ಅವರು ಸರ್ವಜ್ಞನ ವಚನಗಳ ಮಾದರಿಯಲ್ಲಿ ರಚಿಸಿರುವ `ಮರ್ಮಜ್ಞನ ವಚನಗಳು’ ಸಮಾಜದ ಓರೆಕೋರೆಗಳನ್ನು, ಅನಿಷ್ಟಗಳನ್ನು ಎತ್ತಿ ತೋರಿಸುತ್ತ ಅವುಗಳಿಗೆ ಪರಿಹಾರವನ್ನು ಸೂಚಿಸುತ್ತವೆ. ಮಾನವ ಬದುಕಿನ ದಾರಿದೀಪವಾಗಿವೆ ಎಂದರು.
ಟಿ.ವಿ., ಮೊಬೈಲುಗಳ ಹಾವಳಿಯಿಂದಾಗಿ ಜನವರು ಅದರಲ್ಲೂ ವಿಶೇಷವಾಗಿ ಯುವಜನರು ಓದುವ ಹವ್ಯಾಸವನ್ನು ಕಳೆದುಕೊಂಡಿದ್ದಾರೆ. ನಶಿಸುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಕಾಪಾಡುವ ಕೆಲಸವೂ ಆಗಬೇಕಿದೆ ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಲಬುರಗಿ ಜಿಲ್ಲೆಯ ಶ್ರೀನಿವಾಸ ಸರಡಗಿಯ ಡಾ. ರೇವಣಸಿದ್ಧ ಶಿವಾಚಾರ್ಯರು, ಆಲಮೇಲ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಗುಣದಾಳದ ಶ್ರೀ ವಿವೇಕಾನಂದ ದೇವರು, ತಡವಲಗಾದ ಅಭಿನವ ರಾಚೋಟೇಶ್ವರ ಶ್ರೀಗಳು ಅಲ್ಲಾಬಕ್ಷ ಮಿರ್ಜಿ ಅವರ ವಚನಗಳನ್ನು ವಿಶ್ಲೇಷಣೆ ಮಾಡುತ್ತ ಕವಲುದಾರಿಯಲ್ಲಿರುವ ಇವತ್ತಿನ ಸಮಾಜಕ್ಕೆ ಮರ್ಮಜ್ಞನ ವಚನಗಳು ಕೈಮರವಾಗಿವೆ ಎಂದು ಹೇಳಿದರು.
ಪುಸ್ತಕಗಳ ಪರಿಚಯ ಮಾಡಿದ ಸಾಹಿತಿ ಸಿದ್ಧರಾಮ ಬಿರಾದಾರ (ಮನಗೂಳಿ) ಮತ್ತು ನಿವೃತ್ತ ಪ್ರಾಚಾರ್ಯ ರಸೂಲ ಪೀರಸಾಬಗೋಳ, ೧೨ನೆಯ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದಂತೆಯೇ ಅಲ್ಲಾಬಕ್ಷ ಮಿರ್ಜಿ ಅವರ `ಮರ್ಮಜ್ಞನ ವಚನಗಳು’ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತವೆ. ಉರ್ದು ಭಾಷಿಕರಾದರೂ ಕನ್ನಡ ಸಾಹಿತ್ಯಕ್ಕೆ ಉತ್ಕೃಷ್ಟ ಕೃತಿಗಳನ್ನು ನೀಡಿರುವ ಅಲ್ಲಾಬಕ್ಷ ಮಿರ್ಜಿ ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ ಎಂದರು.
ಶ್ರೀಮಂತ ಸಿದ್ದಣ್ಣ ದೇಸಾಯಿ (ಜೈನಾಪುರ), ಹಣಮಂತ ಹರನಟ್ಟಿ (ಕೊಡಬಾಗಿ), ಶಿವನಗೌಡ ಪಾಟೀಲ (ತಾಜಪುರ), ನಾಗಯ್ಯ ಹಿರೇಮಠ (ಮಂಗಳೂರ), ಅಪ್ಪಾಸಾಹೇಬ ಪಾಟೀಲ (ಶೇಗುಣಸಿ), ನೌಲಾಸಾಬ ಜಹಾಗಿರದಾರ, ಶೇಖಪ್ಪ ಪೂಜಾರಿ (ಉಪ್ಪಲದಿನ್ನಿ), ಡಾ. ಕೌಸರನಿಯಾಜ ಅತ್ತಾರ (ಮಮದಾಪುರ), ಮಹ್ಮದಯುನುಸ್ ಮಿರ್ಜಿ (ಹಂಚಿನಾಳ), ನ್ಯಾಯವಾದಿ ಅಸ್ಲಮ್ ಅತ್ತಾರ, ಪತ್ರಕರ್ತ ಅನಿಲ ಹೊಸಮನಿ ಮತ್ತಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಎಚ್. ಗುರುರಾಜ ಕಾರ್ಯಕ್ರಮ ನಿರೂಪಿಸಿದರು. ಮಮದಾಪುರ ಸುತ್ತಮುತ್ತಲ ಗ್ರಾಮಗಳ ನೂರಾರು ಹಿರಿಯರು, ಮಹಿಳೆಯರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us:
error

Related posts