ಹಾಲ್ಕುರಿಕೆ ಶಿವಶಂಕರ ಅದ್ಬುತ ರಂಗಕರ್ಮಿ,ರಂಗವಿಜ್ಞಾನಿ – ಗೋರಂಟ್ಲಿ

ಹಾಲ್ಕುರಿಕೆ ಶಿವಶಂಕರರಿಗೆ ನುಡಿನಮನ


ಕೊಪ್ಪಳ : ನಿನ್ನೆ ಅನಿರೀಕ್ಷಿತವಾಗಿ ನಿಧನರಾದ ರಂಗ ನಿರ್ದೇಶಕ, ರಂಗ ವಿಜ್ಞಾನಿ ಶಿವಶಂಕರ ಹಾಲ್ಕುರಿಕೆ ಕೊಪ್ಪಳ ಜಿಲ್ಲೆಯಲ್ಲಿ ನಿಂತು ಹೋಗಿದ್ದ ರಂಗಚಟುವಟಿಕೆಗಳಿಗೆ ಮರುಹುಟ್ಟು ನೀಡಿದವರು. ಅನಕ್ಷರಸ್ಥರನ್ನು, ಕಲಾವಿದರಲ್ಲದವರನ್ನೂ ಸಹ ತರಬೇತುಗೊಳಿಸಿ ಅವರಿಂದ ಅದ್ಬುತ ನಟನೆ ಹೊರತೆಗೆದ ಅದ್ಬುತ ರಂಗ ಕರ್ಮಿ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು
ರಂಗಕರ್ಮಿ ಹಾಲ್ಕುರಿಕೆ ನಿಧನದ ಪ್ರಯುಕ್ತ ಕೊಪ್ಪಳದ ಐಬಿಯಲ್ಲಿ ನಡೆದ ಶಿವಶಂಕರ ಹಾಲ್ಕುರಿಕೆ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು ಹೊಸ ರೀತಿಯ ಪರಿಕರಗಳನ್ನು ಉಪಯೋಗಿಸುವ ಮೂಲಕ ಹೊಸ ಯೋಚನೆ, ಯೋಜನೆಗಳೊಂದಿಗೆ ಅವರು ಕೊಪ್ಪಳದಲ್ಲಿ ವಿಭಿನ್ನವಾದ ಪ್ರಯತ್ನ ಮಾಡುವ ಮೂಲಕ ಮತ್ತೊಮ್ಮೆ ಕೊಪ್ಪಳ ಜಿಲ್ಲೆಯ ರಂಗಚಟುವಟಿಕೆಗಳು ನಡೆಯುವಂತೆ ನೋಡಿಕೊಂಡರು. ಅವರ ಇಡೀ ಕುಟುಂಬ ರಂಗಭೂಮಿಗೆ ಅರ್ಪಿತಗೊಂಡಿದ್ದು ಅವರ ಶ್ರೀಮತಿ ಶೀಲಾ ಹಾಲ್ಕುರಿಕೆ ಮತ್ತು ಮಕ್ಕಳೂ ಸಹ ಅದ್ಬುತ ಕಲಾವಿದರು ಹೌದು. ಅನಿರೀಕ್ಷಿತವಾಗಿ ಅವರು ನಮ್ಮನ್ನಗಲಿದ್ದು ವಿಶಾದದ ಸಂಗತಿ ಎಂದು ಸಂತಾಪ ವ್ಯಕ್ತಪಡಿಸಿದರು. ಸಂತಾಪ ಸಭೆಯಲ್ಲಿ ಮೊದಲಿಗೆ ಶಿವಶಂಕರ ಹಾಲ್ಕುರಿಕೆಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಒಂದು ನಿಮಿಷದ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಿರಾಜ್ ಬಿಸರಳ್ಳಿ, ಡಾ.ವಿ.ಬಿ.ರಡ್ಡೇರ್, ಅಮರದೀಪ್ ಪಿಎಸ್, ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ್, ಬಸವರಾಜ್ ಶೀಲವಂತರ, ನಾಗರಾಜ್ ಡೊಳ್ಳಿನ, ಮಂಜುನಾಥ ಗೊಂಡಬಾಳ,ಶಿವಕುಮಾರ್ ಹಿರೇಮಠ, ಮಹಾಂತೇಶ ಕೊತಬಾಳ ಸೇರಿದಂತೆ ಇತರರು ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿದರು. ಪ್ರತಿಭಾವಂತ ಕಲಾವಿದ, ಸಾಹಿತಿ, ಜೀವಪರ ಕಾಳಜಿಯ ವ್ಯಕ್ತಿಯಾಗಿದ್ದ ಶಿವಶಂಕರ ಹಾಲ್ಕುರಿಕೆಯವರು ಇನ್ನಷ್ಟು ದಿನ ನಮ್ಮೊಂದಿಗೆ ಇರಬೇಕಿತ್ತು ಎಂದು ಅಭಿಪ್ರಾಯ ಹಂಚಿಕೊಂಡರು. ಅವರ ಕುಟುಂಬಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಅವರ ಅಭಿಮಾನಿಗಳು, ಶಿಷ್ಯಂದಿರು ಸೇರಿದಂತೆ ಎಲ್ಲ ಸಂಘಟನೆಗಳವರು ಸೇರಿಕೊಂಡು ಸ್ಮರಣಾರ್ಥ ನಾಟಕ ಪ್ರದರ್ಶನ ಹಮ್ಮಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು.

Please follow and like us:
error