ಹಾಲುಮತ ಒಂದು ಜಾತಿಯಲ್ಲ; ಅದೊಂದು ಸಾಂಸ್ಕೃತಿಕ ಪರಂಪರೆ- ಡಾ.ಬಿ.ವಿ.ಸತ್ಯನಾರಾಯಣರಾವ

ಕೊಪ್ಪಳ: ಹಾಲುಮತ ಸಮಾಜದವರು ಸಕಲರೊಂದಿಗೂ ಹೊಂದಿಕೊಂಡು ಹೋಗುವ ಜಾಯಮಾನದವರು. ಹಾಲುಮತ ಸಂಸ್ಕೃತಿಯು ಮಾನವ ಜನಾಂಗದ ಸೃಷ್ಠಿಯೊಂದಿಗೇ ಬೆರೆತಿದೆ. ಇದು ಪ್ರಾಕೃತಿಕ ಸಹಜ ಸಂಸ್ಕೃತಿಯೊಂದಿಗೆ ವೈಭವೀಕರಿಸಲ್ಪಟ್ಟಿದೆ. ಹಾಲುಮತದ ಸರ್ವಮಾನ್ಯ ಅಧಿದೈವವೆಂದರೆ ಬೀರೇಶ್ವರ. ಪ್ರತಿ ಕುರುಬರ ನೆಲೆಗಳಲ್ಲಿಯೂ ಬೀರೇಶ್ವರನ ದೇಗುಲವಿರುತ್ತದೆ. ಹಾಲುಮತ ಜನಾಂಗದಲ್ಲಿ ಆಡಂಬರದ ಪೂಜೆಗೆ ಅವಕಾಶವಿಲ್ಲ. ಇಲ್ಲಿ ಕಾಯಾರ್ಪಣ, ಕರಣಾರ್ಪಣ, ಭಾವಾರ್ಪಣಗಳಿಗೆ ಪ್ರಾಶಸ್ತ್ಯವಿದೆ. ಹಾಲುಮತದವರು ಎಲ್ಲಾ ದೇವರುಗಳನ್ನು ಪೂಜಿಸುತ್ತಾರೆ, ಸರ್ವಧರ್ಮಗಳನ್ನು ಗೌರವಿಸುತ್ತಾರೆ. ಹಾಲುಮತ ಒಂದು ಜಾತಿಯಲ್ಲ; ಅದೊಂದು ಸಾಂಸ್ಕೃತಿಕ ಪರಂಪರೆ ಎಂದು ಬೆಂಗಳೂರಿನ ಹಿರಿಯ ಸಾಹಿತಿ, ಕಾವ್ಯನಾಡೋಜ ಡಾ.ಬಿ.ವಿ.ಸತ್ಯನಾರಾಯಣರಾವ ಹೇಳಿದರು.
ಅವರು ಶನಿವಾರ ಸಂಜೆ ಕೊಪ್ಪಳ ತಾಲೂಕಿನ ಭಾಗ್ಯನಗರದ ಬೀರೇಶ್ವರ ದೇವಸ್ಥಾನದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಹಾಗೂ ಚಲಚಿತ್ರ ನಿರ್ದೇಶಕರಾದ ರಮೇಶ ಸುರ್ವೆ ಮಾನತಾಡುತ್ತಾ, ಹಾಲುಮತ ಸಂಸ್ಕೃತಿಯು ಭಾರತದ ಬಹುಪ್ರಾಚೀನ ಸಂಸ್ಕೃತಿಯಾಗಿದೆ. ಮನುಷ್ಯನ ಮನಸ್ಸು ಹಾಲಿನಂತಿರಬೇಕು. ಮನಸ್ಸು ಹಾಲಿನಂತಿರಬೇಕಾದರೆ ಮನುಷ್ಯ ಸದಾ ಧರ್ಮಪಥದಲ್ಲಿ ನಡೆಯುತ್ತಾ, ನಿಸ್ವಾರ್ಥ ಜೀವನ. ಲೋಕೋಪಕಾರಿ ಕೆಲಸಗಳಲ್ಲಿ ತೊಡಗಿಕೊಂಡಿರಬೇಕು. ಮನಸ್ಸಿನ ಶುದ್ಧತೆಯ ಭಾವರೂಪವೇ ಈ ಹಾಲು. ಹಾಲುಮತದವರು ಹಾಲು, ಮೊಸರು, ತುಪ್ಪಗಳಿಂದಲೇ ದೇವರಿಗೆ ನೈವೇಧ್ಯ ಮಾಡುತ್ತಾರೆ ಎಂದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ, ಹಾಲುಮತದ ಸಂಸ್ಕೃತಿಯನ್ನು ಕುರಿತು ಕನ್ನಡದ ಪ್ರಪ್ರಥಮ ಭಾವಾರ್ಥ ಸಹಿತ ಭಾಮಿನಿ ಷಟ್ಪದಿಯ ಗ್ರಂಥವೇ ಈ ಹಾಲುಮತ ಮಹಾಕಾವ್ಯ. ಹಾಲುಮತ ಸಮಾಜಕ್ಕೆ ಹಾಲುಮತ ಆರಾಧನಾ ಮಂಜರಿ, ಸಂಗೋಳ್ಳಿ ರಾಯಣ್ಣ ಲಾವಣಿ, ಅಹಿಲ್ಯಾಬಾಯಿ ಹೋಳ್ಕರ್, ಕನಕ ಶತಕಂ ಮೊದಲಾದ ಕೃತಿಗಳನ್ನು ರಚಿಸಿಕೊಟ್ಟಿರುವ ಸತ್ಯವಿಠಲ ಕಾವ್ಯಾಂಕಿತರಾದ ಡಾ.ಬಿ.ವಿ.ಸತ್ಯನಾರಾಯಣರಾವ ಅವರು ಹಾಲುಮತ ಸಂಸ್ಕೃತಿಯನ್ನು ನಾಡಿನಾದ್ಯಂತ ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಬೀರಲಿಂಗೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ದ್ಯಾಮಣ್ಣ ಕರಿಗಾರ, ಹಾಲುಮತ ಸಮಾಜದ ಮುಖಂಡರಾದ ಬಿ.ಎಫ್.ಬೀರನಾಯ್ಕರ, ಪ್ರಕಾಶ ಕಿನ್ನಾಳ, ಚಂದ್ರು ಎಚ್.ಪ್ಯಾಟಿ, ಪರಶುರಾಮ ಅಣ್ಣಿಗೇರಿ, ಕುಬೇರ ಮಜ್ಜಿಗಿ, ಹನುಮಂತಪ್ಪ ಕೌದಿ, ಅನ್ನದಾನಸ್ವಾಮಿ ಭೂತಣ್ಣನವರ, ರಮೇಶ ಸಿಂದೋಗಿ, ಶರಣಗೌಡ ಹಿರೇಗೌಡ್ರ, ದೇವೇಂದ್ರಪ್ಪ ಬಳಿಗೇರಿ, ಶಿವಲಿಂಗೇಶ ತಳಕಲ್, ಕುಬೇರಗೌಡ ಪೊಲೀಸ್ ಪಾಟೀಲ, ಸಿದ್ಧಮ್ಮ ಮುರುಡಿ, ಮಹಾಮುನಿಸ್ವಾಮಿ ಭೂತಣ್ಣನವರ, ಗಂಗಾಧರ ಸಣ್ಣಸಿದ್ಧಪ್ಪನವರ, ಶಿವಾನಂದ ಯಲ್ಲಮ್ಮನವರ, ಅರುಣಕುಮಾರ ಪಾಟೀಲ, ರಮೇಶ ಬೂದಿಹಾಳ, ಪತ್ರಕರ್ತ ರುದ್ರಪ್ಪ ಭಂಡಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error