ಸ್ವಾವಲಂಬನೆ ಜೀವನದ ಮೂಲಕ ಮಹಿಳೆಯರು ಎಲ್ಲರಿಗೂ ಮಾದರಿ : ಆರ್.ಎಸ್. ಪೆದ್ದಪ್ಪಯ್ಯ


ಕೊಪ್ಪಳ ಮಾ. ೦೮  ಸ್ವಾವಲಂಬನೆ ಜೀವನ ನಡೆಸುವ ಮೂಲಕ ಮಹಿಳೆಯರು ಎಲ್ಲರಿಗೂ ಮಾದರಿ ಮಾದರಿ ಆಗುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ರೀಶಕ್ತಿ ಒಕ್ಕೂಟ, ಇವರ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರದಂದು ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನೆಯನ್ನು ಸಮರ್ಥವಾಗಿ ನಿಭಾಯಿಸುವ ಮಹಿಳೆಯರು ಉತ್ತಮ ಆಡಳಿತವನ್ನು ಸಹ ನಿಭಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಹಿಳೆಯರು ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ಉನ್ನತ ಅಧಿಕಾರಿಗಳು ಆಗಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳು ಇವೆ. ಮಹಿಳೆಯು ತಾಯಿ, ಮಗಳು, ಹೆಂಡತಿ ಹಿಗೇ ಪ್ರತಿಯೊಬ್ಬ ವ್ಯಕ್ತಿಯ ಯಶಸ್ವಿಯ ಹಿಂದೆ ಇದ್ದೇಇರುತ್ತಾಳೆ. ಮಹಿಳೆ ಮತ್ತು ಪುರುಷರಿಬ್ಬರೂ ಸಮಾನರು. ಆದ್ದರಿಂದ ಮಹಿಳೆಯರ ಸಮಾನತೆಯನ್ನು ಎಲ್ಲರೂ ಗೌರವಿಸಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಪೌಷ್ಟಿಕತೆ, ಬಾಲ್ಯವಿವಾಹ ಹಾಗೂ ದೇವದಾಸಿ ಪದ್ಧತಿ ಜಿಲ್ಲೆಯಲ್ಲಿ ಇದೆ. ಎಲ್ಲ ಮಹಿಳೆಯರು ಸಹಚರರಿಗೆ ಮಾರ್ಗದರ್ಶನ ನೀಡಬೇಕು. ಸರ್ಕಾರಿ ಕಾರ್ಯಕ್ರಮಗಳ ಮೂಲಕ ಎಷ್ಠೆ ಜಾಗೃತಿ ಮೂಡಿಸಿದರು. ಮೊದಲು ಅವರಲ್ಲಿಯೇ ಜಾಗೃತಿ ಭಾವನೆ ಮೂಡಬೇಕು. ನರೇಗಾ ಯೋಜನೆಯಲ್ಲಿಯೂ ಸಹ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಸ್ವಾವಲಂಬನೆ ಜೀವನ ನಡೆಸುವ ಮೂಲಕ ಎಲ್ಲರಿಗೂ ಮಾದರಿ ಆಗುತ್ತಿದ್ದಾರೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಅವರು ಹೇಳಿದರು.
ಸಮಾರಂಭಕ್ಕೂ ಪೂರ್ವದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಎಲ್ಲಾ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರತ್ನವ್ವ ಬಿ. ನಗರ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಸರೋಜಾ ಬಾಕ್ಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಬಾಗೇವಾಡಿ, ಕರ್ನಾಟಕ ಸಾಂಸ್ಕೃತಿ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ, ಸೇರಿದಂತೆ ವಿವಿಧ ತಾಲೂಕುಗಳ ಸಿ.ಡಿ.ಪಿ.ಓ.ಗಳು, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸದಸ್ಯರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ವಿಜೇತರಿಗೆ ಹಾಗೂ ಇಂದು ಬೆಳಿಗ್ಗೆ ನಡೆದ ಅನಿಲ ರಹಿತ ಅಡುಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರಿಗೆ, ಉತ್ತಮ ಕಾರ್ಯನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಅಲಕನಂದ ಮಳಗಿ ಅವರು ಮಹಿಳೆಯರ ಆರೋಗ್ಯದ ಕುರಿತು, ಎರಿಗೇರಾ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಲೀಲಾ ಎಸ್. ಶೆಟ್ಟರ್ ಅವರು ಮಹಿಳಾ ಜಾಗೃತಿ ಮತ್ತು ಪ್ರಗತಿಪರ ಚಿಂತನೆ ಕುರಿತು ಹಾಗೂ ಸಂಗಿನಿ ಪಿಂಕ್ ಪ್ಯಾಡ್‌ನ ಭಾರತಿ ಗುಡ್ಲಾನೂರ ಅವರು ಋತುಚಕ್ರ ನಿರ್ವಹಣೆ ಮತ್ತು ವೈಯಕ್ತಿಕ ಸ್ವಚ್ಛತೆ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಿಳಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಅಂಗವಾಗಿ ಜನಪದ, ಸಂಗೀತಾ, ತತ್ವಪದ, ಭಾವಗೀತೆ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಾಕ್ರಗಳು ಅದ್ದೂರಿಯಾಗಿ ನಡೆದವು.

Please follow and like us:
error