ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಟಿಪ್ಪು ಸುಲ್ತಾನ್- ರಾಘವೇಂದ್ರ ಹಿಟ್ನಾಳ್

ಅಪ್ರತಿಮ ದೇಶಭಕ್ತ ಹಾಗೂ ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಟಿಪ್ಪು ಸುಲ್ತಾನ್, ಟೀಕೆ ವ್ಯಕ್ತಪಡಿಸುವವರು ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಲಿ ಎಂಬುದಾಗಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಹಜರತ್ ಟಿಪ್ಪು ಸುಲ್ತಾನ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಹಾಗೂ ಸರ್ವಧರ್ಮ ರಕ್ಷಕರಾಗಿದ್ದರು. ಇಂತಹ ಮಹಾನ್ ಪುರುಷ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ನಿರ್ಧಾರ ಕೈಗೊಂಡ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಭಿನಂದನಾರ್ಹರು. ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕುರಿತಂತೆ ಟೀಕಿಸುವವರು, ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕಿದೆ. ಕೃಷಿ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಆಗಿನ ಕಾಲದಲ್ಲೇ ಟಿಪ್ಪು ಸುಲ್ತಾನ್ ಅಳವಡಿಸಿದ್ದರು. ಮಕ್ಕಳನ್ನು ಒತ್ತೆ ಇಡಲು ಬಯಸುತ್ತೇನೆಯೇ ಹೊರತು, ಗುಲಾಮರಂತೆ ಬಾಳಲಾರೆ ಎಂಬ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದವರು ಟಿಪ್ಪು ಸುಲ್ತಾನ್. ತಮ್ಮ ಸ್ವಂತ ಮಕ್ಕಳನ್ನು ದೇಶಕ್ಕಾಗಿ ಒತ್ತೆ ಇರಿಸಿದ ಇತಿಹಾಸ ಇಡೀ ಜಗತ್ತಿನಲ್ಲಿ ಎಲ್ಲೂ ಇಲ್ಲ. ಶೃಂಗೇರಿ ಜಗದ್ಗುರುಗಳ ರಕ್ಷಣೆಗಾಗಿ ಪಣ ತೊಟ್ಟಿದ್ದ ಟಿಪ್ಪು ಸುಲ್ತಾನ್ ಜಾತಿವಾದಿಯಾಗಲು ಹೇಗೆ ಸಾಧ್ಯ. ಟಿಪ್ಪುವಿನ ಆಸ್ತಾನದಲ್ಲಿ ಎಲ್ಲ ಜಾತಿ, ಧರ್ಮದವರು ಸ್ಥಾನ ಪಡೆದಿದ್ದರು. ಬಡವರಿಗೆ, ಶೋಷಿತರಿಗೆ ಭೂಮಿಯನ್ನು ದಾನ ಮಾಡಿಕೊಟ್ಟಿದ್ದರು. ಇಡೀ ದೇಶಕ್ಕೆ ರೇಷ್ಮೆಯನ್ನು ಪರಿಚಯ ಮಾಡಿಕೊಟ್ಟ ಟಿಪ್ಪು ಸುಲ್ತಾನ್, ಉಳುವವನೆ ಭೂಮಿಯೊಡೆಯ ಯೋಜನೆಯನ್ನು ತಮ್ಮ ಕಾಲದಲ್ಲಿಯೇ ಜಾರಿಗೊಳಿಸಿದ್ದರು. ಮಹನೀಯರ ಜೀವನ ಚರಿತ್ರೆ, ಅವರ ತತ್ವಾದರ್ಶಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ. ಭೂ ಒಡೆತನ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದವರಿಗೆ ಭೂಮಿ ಮಂಜೂರು ಮಾಡಲು ಸರ್ಕಾರ ಕ್ರಮ ವಹಿಸಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು. ಟಿಪ್ಪು ಸುಲ್ತಾನ್ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ‘ಮೈಸೂರು ಹುಲಿ ಟಿಪ್ಪು ಸುಲ್ತಾನ್’ ಎನ್ನುವ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಬಿಡುಗಡೆಗೊಳಿಸಿದರು.
ಟಿಪ್ಪು ಸುಲ್ತಾನ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಡಾ. ನಯೀಮ್ ಉರ್ ರೆಹಮಾನ್ ಅವರು, ಟಿಪ್ಪು ಸುಲ್ತಾನ್ ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಲ್ಲ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶಭಕ್ತ ಅಲ್ಲ ಎಂದು ಅನಗತ್ಯವಾಗಿ ಗೊಂದಲವನ್ನು ಸೃಷ್ಟಿಸಲಾಗುತ್ತಿದೆ. ಟಿಪ್ಪು ನಿಜವಾದ ಅರ್ಥದಲ್ಲಿ ದೇಶಾಭಿಮಾನ ತುಂಬಿಕೊಂಡಿದ್ದ ನಾಯಕನಾಗಿದ್ದ, ನಿಜಾಮರು, ನವಾಬರ ವಿರುದ್ಧವೂ ಹೋರಾಡಿದ್ದರು ಟಿಪ್ಪುಸುಲ್ತಾನ್. ಬ್ರಿಟೀಷರು ಟಿಪ್ಪುವಿನ ಸಹಯೋಗ ಬಯಸಿದ್ದರೇ ಹೊರತು ಸಾವನ್ನಲ್ಲ. ಆದರೆ ಟಿಪ್ಪುವಿನ ಸ್ವಾಭಿಮಾನ ಇದಕ್ಕೆ ಅವಕಾಶ ನೀಡಲಿಲ್ಲ. ಗುಲಾಮನಾಗಿ ಬಾಳಲು ಟಿಪ್ಪು ಇಷ್ಟಪಡಲಿಲ್ಲ. ಸ್ವಾಭಿಮಾನಕ್ಕಾಗಿ ತನ್ನ ಮಕ್ಕಳನ್ನು ಒತ್ತೆಯಿರಿಸಿದ ಘಟನೆ ಇಡೀ ಜಗತ್ತಿನಲ್ಲಿ ಚರಿತ್ರಾರ್ಹವಾಗಿ ಉಳಿದಿದೆ. ಟಿಪ್ಪುವಿನ ಆಡಳಿತ ಯಂತ್ರ ಪರಿಪೂರ್ಣವಾಗಿತ್ತು. ಪ್ರತಿಭಾವಂತರನ್ನು ತನ್ನ ಆಸ್ಥಾನದಲ್ಲಿರಿಸಿಕೊಂಡಿದ್ದರು. ಸುಮಾರು 156 ಹಿಂದೂ ದೇವಾಲಯಗಳಿಗೆ ದತ್ತಿ ಕೊಟ್ಟಿದ್ದು, ರಾಜಪತ್ರದಲ್ಲಿ ದಾಖಲೆಯಾಗಿ ಉಳಿದಿದೆ. ಶೃಂಗೇರಿಯ ಜಗದ್ಗುರುಗಳಿಗೆ ಸುಮಾರು 29 ಪತ್ರಗಳನ್ನು ಗೌರವಪೂರ್ವಕವಾಗಬಿ ಬರೆದಿರುವ ದಾಖಲೆಗಳು ಇಂದಿಗೂ ಇವೆ. ಇಂತಹ ಮಹಾನ್ ಪುರುಷರ ಜಯಂತಿಯನ್ನು ಸರ್ಕಾರದಿಂದ ಆಚರಿಸುವ ಬಗ್ಗೆ ಟೀಕೆ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಮಾತನಾಡಿದರು. ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಪ್ಪಳ ಯೂಸುಫಿಯಾ ಮಸ್ಜಿದ್‍ನ ಮೌಲಾನಾ ಮುಫ್ತಿ ಮಹಮ್ಮದ್ ನಜೀರ್ ಅಹ್ಮದ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಖಾಜಾವಲಿ ಬನ್ನಿಕೊಪ್ಪ, ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ, ನಗರಸಭೆ ಸದಸ್ಯರುಗಳಾದ ಬಾಷುಸಾಬ್ ಖತೀಬ್, ಮೌಲಾಹುಸೇನ್ ಜಮೇದಾರ್, ಮುತ್ತುರಾಜ್ ಕುಷ್ಟಗಿ, ರಾಮಣ್ಣ ಹದ್ದಿನ, ಬಾಳಪ್ಪ ಬಾರಕೇರ, ಸೇರಿದಂತೆ ಕಾಟನ್ ಪಾಶಾ, ಯಮನೂರಪ್ಪ ನಾಯಕ್, ಮಹಮದ್ ಸಾಬ್ ಮಂಡಲಗೇರಿ, ನಿಸಾರ್ ಅಹ್ಮದ್ ಸಿದ್ದಿಕಿ, ಚಾಂದ್ ಪಾಶಾ ಕಿಲ್ಲೇದಾರ, ಮಾನ್ವಿ ಪಾಶಾ, ಗೌಸುಸಾಬ್ ಸರದಾರ್, ವಿಠ್ಠಪ್ಪ ಗೋರಂಟ್ಲಿ, ಗಾಯತ್ರಿ ಕಠಾರೆ, ಶಶಿಕಾಂತ್ ಕಲಾಲ್ ಮುಂತಾದವರು ಪಾಲ್ಗೊಂಡಿದ್ದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಸ್ವಾಗತಿಸಿದರು. ಸಿ.ವಿ. ಜಡಿಯವರ್ ಅವರು ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಗಣ್ಯರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಗರ ಪೊಲೀಸ್ ಠಾಣೆ ಬಳಿಯ ಟಿಪ್ಪು ಸರ್ಕಲ್‍ನಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಗಣ್ಯರಿಂದ ಮಾಲಾರ್ಪಣೆ ಕಾರ್ಯ ನೆರವೇರಿತು.

Please follow and like us:
error