ಸ್ವಚ್ಚ, ಸುಂದರವಾಗಿ ಹಳ್ಳಿಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ – ಗವಿಶ್ರೀಗಳು

ಕೊಪ್ಪಳ : ಭಾರತವನ್ನು ನೋಡಬೇಕೆಂದರೆ ತಾಜಮಹಲ್, ಅಜಂತಾ, ಎಲ್ಲೋರಾ ಹಾಗೂ ಕುತುಬ್ ಮೀನಾರ್ ನೋಡುವುದಲ್ಲ. ನಿಜವಾದ ಭಾರತ ಇರುವುದು ಹಳ್ಳಿಯ ಜನರ ಹೃದಯದಲ್ಲಿ ಮತ್ತು ಅವರ ಹೃದಯ ಶ್ರೀಮಂತಿಕೆಯಲ್ಲಿ . ಇಂದಿಗೂ ಪ್ರತಿಶತ ೭೦ ರಷ್ಟು ರೈತರು ಹಳ್ಳಿಗಳಲ್ಲೆ ಇದ್ದಾರೆ. ಕೇವಲ ನಗರಗಳಷ್ಟೇ ಅಭಿವೃದ್ಧಿಯಾದರೆ ಸಾಲದು, ಹಳ್ಳಿಗಳು ಅಭಿವೃದ್ಧಿಯಾಗಬೇಕಿದೆ. ಈ ದಿಸೆಯಲ್ಲಿ ಕಳೆದ ವರ್ಷ ಶ್ರೀಗವಿಸಿದ್ಧೇಶ್ವರ ಜಾತ್ರಾ ನಿಮಿತ್ಯ ಆ ಸಂಕಲ್ಪ ಇಟ್ಟುಕೊಂಡಿದ್ದರ ಪ್ರತಿಫಲವೇ ಇವತ್ತಿನ ಈ ಕಾರ್ಯಕ್ರಮವಾಗಿದೆಯೆಂದು ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಪೂಜ್ಯ ಶ್ರೀಗಳು ಇಂದು ಅಡವಿಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸುವ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಮುಂದುವರೆದು ಮುಂದಿನ ಕೆಲವೇ ದಿವಸಗಳಲ್ಲಿ ಈ ಅಡವಿಹಳ್ಳಿ ಸುಂದರವಾಗಿ ನಿರ್ಮಾಣವಾಗಲಿದೆ. ಮೂಲ ಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಶಾಲೆಗಳ ಕಟ್ಟಡಗಳು ಇನ್ನಿತರ ಸೌಲಭ್ಯಗಳು ನಿಮಗೆ ದೊರೆಯಲಿವೆ. ಆದ್ದರಿಂದ ನಿಮ್ಮ ಮನಸ್ಥಿತಿಗಳು ಬದಲಾಗಬೇಕು. ಸ್ವಚ್ಚತೆ ಹಾಗೂ ಸುಂದರವಾಗಿ ನಿಮ್ಮ ಹಳ್ಳಿಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ. ಕರ್ನಾಟಕದಲ್ಲಿ ಇದೊಂದು ಮಾದರಿ ಗ್ರಾಮವಾಗಬೇಕು ಎಂದರು.
ಈ ಸಂದರ್ಭದಲ್ಲಿ ಮೈನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು, ಬಿಜಕಲ್‌ನ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಜಿಲ್ಲಾ ಪಂಚಾಯತ್ ಸಿ.ಇ.ಒ ಗಳಾದ ರಘೂನಂಧನ್ ಮೂರ್ತಿ, ಕಲ್ಯಾಣ ಕರ್ನಾಟಕ ಇಲಾಖೆಯ ಶಾಂತರೆಡ್ಡಿ, ಮುಕುಂದ ಸ್ಟೀಲ್ ಸಿ.ಇ.ಓ ಗಳಾದ ಓ.ಪಿ ಸಿಂಗ್, ಸಂಸದರಾದ ಸಂಗಣ್ಣ ಕರಡಿ, ಯಲಬುರ್ಗಾ ಶಾಸಕರಾದ ಹಾಲಪ್ಪಾಚಾರ್ ಸಮಾರಂಭ ಕುರಿತು ಮಾತನಾಡಿದರು. ವೇದಿಕೆಯ ಮೇಲೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಪ್ರಾಸ್ತಾವಿಕ ನುಡಿಗಳನ್ನು ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗರಾಜ ದೇಸಾಯಿ, ನಿರೂಪಣೆ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಯಲಿ ನಿರ್ವಹಿಸದರು. ಅಡವಿಹಳ್ಳಿ ಹಾಗೂ ಸುತ್ತಲಿನ ನಾಗರೀಕರು ಭಾಗವಹಿಸಿದ್ದರು.

Please follow and like us:
error