ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದಗೊಳ್ಳಲು ಆತ್ಮ ಸಂಕಲ್ಪ ಮುಖ್ಯ: AC ನಾರಯಣ ರೆಡ್ಡಿ ಕನಕರೆಡ್ಡಿ

ಕೊಪ್ಪಳ: ಸಮರ್ಪಣಾ ಮನೋಭಾ, ಪರಿಶ್ರಮ, ನಿರಂತರ ಅಧ್ಯಯನ, ಸಮಯ ಪ್ರಜ್ಞೆ, ಒಳಗೊಳ್ಳುವಿಕೆ ನಿಮ್ಮ ಯಶಸ್ಸಿನ ದಾರಿಗಳು ಎಂದ ಸಹಾಯಕ‌ ಆಯುಕ್ತ ನಾರಯಣರೆಡ್ಡಿ ಕನಕರೆಡ್ಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು

ಕೊಪ್ಪಳದ ಆಳವಂಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಜರುಗಿದ ಸ್ಪರ್ಧಾತ್ಮಕ ಹಾಗೂ ಉದ್ಯೋಗ ಮಾಹಿತಿ ಕೇಂದ್ರ ಉದ್ಘಾಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ನಮ್ಮ ಪರಿವರ್ತನೆಯ ಬಹುಮುಖ್ಯ ವೇದಿಕೆ. ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ನಡೆಯಬೇಕು. ಕನಸುಗಳನ್ನು ಕಾಣಬೇಕು, ಕಾಣುವುದರ ಜೊತೆ ಅದರ ಗುರಿಯನ್ನು ತಲುಪಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳಲು ಆತ್ಮಸಂಕಲ್ಪ ಬೇಕು, ಕೀಳರಿಮೆ, ಹಿಂಜರಿಕೆ ಇರಬಾರದು. ನಿಮಗೆ ಯಾವುದೇ ಸರ್ಕಾರಿ ಹುದ್ದೆ ಬಗ್ಗೆ ಕನಸಿದ್ದರೂ, ಅದನ್ನು ಪರಿಪೂರ್ಣವಾಗಿ ತಿಳಿದು ಪೂರ್ವ ಸಿದ್ಧತೆ ಮಾಡಿಕೊಳ್ಳಿ, ನಿಮ್ಮದೇ ಆದ ನೋಟ್ಸ್ ನ್ನು ಸಿದ್ದಪಡಿಸಿಕೊಳ್ಳಿ, ಹಳೆ ಪ್ರಶ್ನಾಪತ್ರಿಕೆಗಳನ್ನು ಒಮ್ಮೆ ಬಿಡಿಸಿಕೊಳ್ಳಿ ನಿಮಗೆ ಸುಲಭ ಮಾರ್ಗ ಸಿಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರಲ್ಲಿ ಸಂದೇಹವೆ ಇಲ್ಲ ಎಂದು ಸಲಹೆ ನೀಡಿದರು.

ಸಾಧಿಸುವ ಹಠ ಇದ್ದರೆ ಎಲ್ಲಾ ದಾರಿಗಳು ತೆರೆದುಕೊಳ್ಳುತ್ತವೆ. ನಾನು ಇಂಜಿನಿಯರ್ ವಿದ್ಯಾರ್ಥಿ ಆದ್ರೂ, ಕನ್ನಡ ಸಾಹಿತ್ಯದ ಮೇಲೆ ಕೆಎಎಸ್ ಪರೀಕ್ಷೆ ಬರೆದು ಇಂದು ಉನ್ನತ ಹುದ್ದೆ ಅಲಂಕರಿಸಿರುವೆ ಹಾಗಾಗಿ ನಾವು ಪ್ರಾಥಮಿಕ ಶಾಲಾ ಹಂತದಿಂದ ಸ್ನಾತಕೋತ್ತರ ಪದವಿ ಮುಗಿಸುವ ಎಲ್ಲಾ ವಿಷಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದಗೊಳ್ಳುವ ವಿಷಯಗಳು ಒಳಗೊಂಡಿವೆ. ಸರಿಯಾಗಿ ಅಧ್ಯಯನ ಮಾಡಿ,ನಿಮ್ಮದೆ ಒಂದು ಟೀಮ್ ಮಾಡಿಕೊಂಡು ವಿಷಯಗಳನ್ನು ಚರ್ಚೆ ಮಾಡಿ ಪರೀಕ್ಷೆ ಬರೆಯುವುದಕ್ಕೆ ಇನ್ನಷ್ಟು ಸಹಾಯವಾಗುತ್ತದೆ ಎಂದರು

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅಳವಂಡಿ‌‌ ಪಿಎಸ್ ಐ ಚಂದ್ರಪ್ಪ ಹೆಚ್ ಅವರು ಮಾತನಾಡಿ, ನಿರಂತರ ಪರಿಶ್ರಮದಿಂದ ನೀವು ಕಂಡ ಕನಸನ್ನು ನನಸಾಗಿಸಿಕೊಳ್ಳಬಹುದು. ದೈಹಿಕವಾಗಿ ಸದೃಢವಾಗಿರಬೇಕು, ಆರೋಗ್ಯದ ಜೊತೆಗೆ ನಿರಂತರ ಅಧ್ಯಯನಶೀಲರಾಗಿರಬೇಕು. ಗ್ರಾಮೀಣ ಪ್ರದೇಶದಲ್ಲಿಯೇ ಪ್ರತಿಭೆ ಅಡಗಿರುವುದು. ನಿಮ್ಮ ಜೀವನವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಜೀವನಮೌಲ್ಯಗಳನ್ನು ಅರಿತು ಭವಿಷ್ಯ ರೂಪಿಸಿಕೊಂಡು, ಸುಂದರ ಬದುಕುಕಟ್ಟಿಕೊಳ್ಳಿ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿಕ್ಷಕ ಶರಣಯ್ಯ ಹಿರೇಮಠ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಕುರಿತು ಕೆಲವು ಸೂತ್ರ ಹಾಗೂ ಸಲಹೆಗಳನ್ನು ಪ್ರಸ್ತಾಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಗವಿಸಿದ್ಧಪ್ಪ‌ ಮುತ್ತಾಳ ವಹಿಸಿದ್ದರು.
ಪ್ರಾಧ್ಯಾಪಕ ನಾಗೇಂದ್ರಪ್ಪ, ಬಿ ಪ್ರಾಸ್ತಾವಿಕ ನುಡಿದರು, ಪ್ರಾಧ್ಯಾಪಕರಾದ ಮಲ್ಲಿಕಾರ್ಜುನ, ಇಮಾಮ್ ಸಾಬ್ ಸೇರಿದಂತೆ ಅತಿಥಿ ಉಪನ್ಯಾಸಕರು, ನೂರಾರು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಸಿದ್ದರು.

Please follow and like us:
error