ಸೊಲ್ಲಾಪುರ-ಬೆಂಗಳೂರು ಹೊಸ ಮಾರ್ಗಕ್ಕೆ ಬೇಡಿಕೆ-ಸಂಗಣ್ಣ ಕರಡಿ

೧೫೦ ಕಿಮೀ ಅಂತರ ಹಾಗೂ ೨-೩ ಗಂಟೆ ಪ್ರಯಾಣ ಸಮಯ ಉಳಿತಾಯ: ಸಂಗಣ್ಣ ಕರಡಿ
ಸೊಲ್ಲಾಪುರ-ಬೆಂಗಳೂರು ಹೊಸ ಮಾರ್ಗಕ್ಕೆ ಬೇಡಿಕೆ

ಕೊಪ್ಪಳ: ಸೊಲ್ಲಾಪುರ ಮತ್ತು ಬೆಂಗಳೂರು ನಡುವೆ, ರಾಷ್ಟ್ರೀಯ ಹೆದ್ದಾರಿ ೫೦ಕ್ಕೆ ಸಮಾನಾಂತರದಲ್ಲಿ ಹೊಸ ರೈಲ್ವೆ ಮಾರ್ಗ ನಿರ್ಮಿಸುವ ಪ್ರಸ್ತಾಪವನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ನೀಡಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿರುವ ಅವರು, ನೂತನ ಮಾರ್ಗ ರಚನೆಯ ಸಂಭವನೀಯ ಲಾಭಗಳತ್ತ ಅವರ ಗಮನ ಸೆಳೆದರು.
ಸದ್ಯ ಸೊಲ್ಲಾಪುರದಿಂದ ಬೆಂಗಳೂರಿಗೆ ಇರುವ ರೈಲು ಮಾರ್ಗ ಗುಂತಕಲ್ಲ ಮತ್ತು ಹುಬ್ಬಳ್ಳಿ ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯತೆ ತಂದಿದೆ. ಇದರಿಂದ ಪ್ರಯಾಣದ ಸಮಯ ಸಾಕಷ್ಟು ದೀರ್ಘವಾಗಿದ್ದು, ರಾಜ್ಯದ ಬಹುತೇಕ ಪ್ರಮುಖ ರೈಲ್ವೆ ನಿಲ್ದಾಣಗಳು ಹೊರಗುಳಿಯುತ್ತಿವೆ. ಅದರ ಬದಲು, ಸೊಲ್ಲಾಪುರ-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೫೦ಕ್ಕೆ ಸಮಾನಾಂತರದಲ್ಲಿ ಹೊಸ ರೈಲ್ವೆ ಮಾರ್ಗ ನಿರ್ಮಿಸಿದರೆ, ಪ್ರಯಾಣದ ಅಂತರ ೧೫೦ ಕಿಮೀ ತಗ್ಗಲಿದೆ. ಜೊತೆಗೆ, ಪ್ರಯಾಣ ಸಮಯದಲ್ಲಿ ೨ರಿಂದ ೩ ಗಂಟೆ ಉಳಿತಾಯವಾಗಲಿದೆ ಎಂದು ಸಂಗಣ್ಣ ಕರಡಿ ಅವರು ವಿವರಿಸಿದರು.

ನೂತನ ಮಾರ್ಗ: ಪ್ರಸ್ತಾವಿತ ಹೊಸ ಮಾರ್ಗ ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣ, ತುಮಕೂರು, ಸಿರಾ, ಹಿರಿಯೂರು, ಚಿತ್ರದುರ್ಗ, ಕೂಡ್ಲಿಗಿ, ತುಂಗಭದ್ರಾ ಅಣೆಕಟ್ಟು (ಮುನಿರಾಬಾದ್), ಕೂಕನಪಳ್ಳಿ, ಕುಷ್ಟಗಿ, ಹುನಗುಂದ, ಕೂಡಲಸಂಗಮ, ಆಲಮಟ್ಟಿ ಹಾಗೂ ವಿಜಯಪುರ ಮೂಲಕ ಸೊಲ್ಲಾಪುರ ತಲುಪಲಿದೆ. ಈ ಮೂಲಕ ವಿಜಯಪುರದ ದ್ರಾಕ್ಷಿ, ಕುಷ್ಟಗಿ ಮತ್ತು ಹುನಗುಂದ ಭಾಗದ ಗ್ರಾನೈಟ್, ತುಂಗಭದ್ರಾ ಅಣೆಕಟ್ಟೆ ವ್ಯಾಪ್ತಿಯ ಭತ್ತದಂತಹ ಸರಕು ರಾಜಧಾನಿ ಹಾಗೂ ಮಹಾರಾಷ್ಟ್ರ ಭಾಗಕ್ಕೆ ತಲುಪುವುದು ಸುಲಭವಾಗುತ್ತದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಮೇಲಿನ ಒತ್ತಡವೂ ತಗ್ಗುತ್ತದೆ ಎಂದು ಸಂಸದರು ಹೇಳಿದರು.

ಪ್ರವಾಸೋದ್ಯಮಕ್ಕೂ ಇಂಬು: ಕೂಡಲಸಂಗಮ, ಆಲಮಟ್ಟಿ ಅಣೆಕಟ್ಟು, ತುಂಗಭದ್ರಾ ಅಣೆಕಟ್ಟೆಯಂತಹ ಪ್ರವಾಸಿ ಸ್ಥಳಗಳಿಗೂ ಇದು ಅನುಕೂಲವಾಗಲಿದ್ದು, ರಾಜ್ಯದ ಪ್ರಮುಖ ನಗರ ಹಾಗೂ ಪಟ್ಟಣಗಳನ್ನು ಪ್ರಸ್ತಾಪಿತ ರೈಲ್ವೆ ಮಾರ್ಗ ಒಳಗೊಳ್ಳುವುದರಿಂದ, ಆ ಭಾಗದ ಬೆಳವಣಿಗೆಗೆ ನೆರವಾಗಲಿದೆ. ಈ ಹಿನ್ನೆಲೆಯಲ್ಲಿ, ಸೊಲ್ಲಾಪುರ-ಬೆಂಗಳೂರು ಮಾರ್ಗ ಸಮೀಕ್ಷೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ವಿನಂತಿಸಿಕೊಂಡರು.
ಮನವಿ ಸ್ವೀಕರಿಸಿದ ರೈಲ್ವೆ ಸಚಿವ ಪಿಯುಷ್ ಗೋಯಲ್, ಈ ಕುರಿತು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.

Please follow and like us:
error