ಸಿಎಂ ಎದುರೇ ಸಂಸದ ಸಂಗಣ್ಣ ಕರಡಿ ವಾಗ್ದಾಳಿ

ನೀರಾವರಿಗೆ ಅನುದಾನ ನೀಡದೇ ವಂಚನೆ | ಬಳಕೆಯಾಗದ ಕೇಂದ್ರ ಅನುದಾನ

ಕೊಪ್ಪಳ: ಮಾತೆತ್ತಿದರೆ ಸಾವಿರಾರು ಕೋಟಿ ಅನುದಾನವನ್ನು ನೀಡಿದ್ದೇವೆ ಎಂದು ಹೇಳುವ ರಾಜ್ಯ ಸರ್ಕಾರ ಕೃಷ್ಣಾ ಬಿ ಸ್ಕೀಂಗೆ ಎಷ್ಟು ಅನುದಾನ ನೀಡಿದೆ? ಅನುದಾನ ನೀಡಿದ್ದರೆ, ನೀರಾವರಿ ಏಕೆ ಆಗಲಿಲ್ಲ? ಎಂದು ಸಂಸದ ಸಂಗಣ್ಣ ಕರಡಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ನಗರದಲ್ಲಿ ಪಾಲ್ಗೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಸಮ್ಮುಖದಲ್ಲಿಯೇ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದರು.

ಕೃಷ್ಣಾ ಬಿ ಸ್ಕೀಂ ಕಡೆಗಣನೆ: ಈ ಭಾಗದ ಮಹತ್ವದ ನೀರಾವರಿ ಯೋಜನೆಯಾದ ಕೃಷ್ಣ ಬಿ ಸ್ಕೀಮ್ ಒಂದು ಇಂಚು ಸಹ ಮುಂದೆ ಹೋಗಿಲ್ಲ. ಆದರೆ, ಇದೇ ಸ್ಕೀಮ್‌ನಡಿ ಆಂಧ್ರಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಜಾರಿಯಾಗಿವೆ. ನಮ್ಮ ರಾಜ್ಯದ ಸರ್ಕಾರಕ್ಕೆ ನಾಚಿಕೆ ಆಗಬೇಕು. ಅನ್ನಭಾಗ್ಯದ ಬಗ್ಗೆ ಬಣ್ಣಿಸುವ ರಾಜ್ಯ ಸರ್ಕಾರ, ಅದಕ್ಕೆ ಹಣ ಎಲ್ಲಿಂದ ಬರುತ್ತೆ ಅಂತ ಮಾತ್ರ ಹೇಳಲ್ಲ. ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳಿಗೆ ನಮ್ಮ ಭಾಗದ ನೀರಾವರಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಅನುದಾನವನ್ನು ಒಳಗೊಳಗೇ ಹರಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೃಷ್ಣಾ ಬಿ ಸ್ಕಿಂ ನ ಕೊಪ್ಪಳ ಏತ ನಿರಾವರಿ ಯೋಜನೆಗೆ ಅಡಿಗಲ್ಲು ಹಾಕಿದ್ದು ಬಿಜೆಪಿ ಸರ್ಕಾರ. ಹೀಗಾಗಿ, ಈ ಯೋಜನೆಗೆ ಕಾಂಗ್ರೆಸ್ ಸರಕಾರ ಹಣ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದ ಸಂಸದರು, ವಾರ್ಷಿಕ ೧೦ ಸಾವಿರ ಕೋಟಿ ರೂ. ಅನುದಾನ ನೀಡುತ್ತೇವೆ ಎಂದ ಸರಕಾರ ಸುಳ್ಳು ಹೇಳಿ ಕೆವಲ ೭೬೩ ಕೋಟಿ ಅನುದಾನ ನೀಡಿ ರೈತರಿಗೆ ಮೋಸ ಮಾಡಿತು ಎಂದರು.
ನೀರಿಗಾಗಿ ಪಾದಯಾತ್ರೆ ಕೈಗೊಂಡು ಸಿದ್ದರಾಮಯ್ಯ, ತಮ್ಮ ವಾಗ್ದಾನವನ್ನು ಮರೆತಿದ್ದಾರೆ. ಪ್ರಗತಿಪರ ಯೋಜನೆಗಳಿಗೆ ಕೊಡಬೇಕಿದ್ದ ಅನುದಾನವನ್ನು ಜನಪ್ರಿಯ ಯೋಜನೆಗಳಿಗೆ ನೀಡುವ ಮೂಲಕ ಪ್ರಗತಿಯನ್ನು ಕಡೆಗಣಿಸಿದ್ದಾರೆ. ಇದರಿಂದ ಪ್ರಮುಖ ಯೋಜನೆಗಳ್ಯಾವವೂ ಕಾರ್ಯರೂಪಕ್ಕೆ ಬರುತ್ತಿಲ್ಲ. ನೀರಾವರಿ ಕಡೆಗಣಿಸಿ, ಕೆಲವೇ ಕೆಲವರಿಗೆ ಅನುಕೂಲವಾಗುವಂತಹ ದೊಡ್ಡ ಯೋಜನೆಗಳಿಗೆ ಹಣ ಸುರಿಯುತ್ತಿದ್ದಾರೆ ಎಂದು ಆರೋಪಿಸಿದರು.

ರಾಯರೆಡ್ಡಿ ಸಾಧನೆ ಏನು?: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ೬ ಬಾರಿ ಎಂಎಲ್‌ಎ ಆಗಿದ್ದಾರೆ. ಒಂದು ಬಾರಿ ಎಂಪಿ ಆಗಿದ್ದಾರೆ ಹಾಗೂ ಎರಡು ಸಲ ಸಚಿವರಾಗಿದ್ದಾರೆ. ಹೀಗಿದ್ದರೂ ಅವರ ಕ್ಷೇತ್ರದಲ್ಲಿ ಒಂದೇ ಒಂದು ಎಕರೆ ಕೃಷಿ ಭೂಮಿ ನೀರಾವರಿ ಆಗಿಲ್ಲ. ಹೀಗಿರುವಾಗ, ಇತರ ಕ್ಷೇತ್ರಗಳ ಪರಿಸ್ಥಿತಿ ಹೇಗಿರಬೇಡ? ಇಂತಹ ವಾಸ್ತವ ಸಂಗತಿಯನ್ನು ಮುಚ್ಚಿಟ್ಟು ಅದ್ಯಾವ ಪ್ರಗತಿ ಮಾಡಲಾಗಿದೆ ಎಂಬುದನ್ನು ಸಚಿವರೇ ವಿವರಿಸಬೇಕು ಎಂದು ವ್ಯಂಗ್ಯವಾಡಿದರು.
ಕೊಪ್ಪಳದಲ್ಲಿ ರೇಲ್ವೆ ವ್ಯಾಗನ್ ವರ್ಕ ಶಾಪ್ ಆಗಬೇಕು ಅದಕ್ಕೆ ಆರ್.ವಿ. ದೇಶಪಾಂಡೆ ಅವರು ಕೆಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದ ಸಂಗಣ್ಣ ಕರಡಿ, ಅಭಿವೃದ್ಧಿ ಯೋಜನೆಗಳನ್ನು ಯಾವ ಸರಕಾರವೂ ಕಡೆಗಣಿಸಬಾರದು ಎಂದು ಅಭಿಪ್ರಾಯಪಟ್ಟರು.
——-