ಸಾಹಿತ್ಯ ಭವನದ ನಿರ್ವಹಣೆಗೆ ಬಾಡಿಗೆ ಪಡೆಯಲು ಡಿಸಿಗೆ ಮನವಿ


ಕೊಪ್ಪಳ, ಮೇ. ೨೦: ಕೊಪ್ಪಳ ನಗರದ ಮುಖ್ಯವಾದ ಏಕೈಕ ಸಭಾ ಭವನವಾಗಿರುವ ಸಾಹಿತ್ಯ ಭವನದ ನಿರ್ವಹಣೆಗೆ, ಮೂಲ ಸೌಕರ್ಯ ಸರಿಮಾಡಲು ಭವನದ ಪಕ್ಕದಲ್ಲಿರುವ ಜಾಗದಲ್ಲಿ ಅಂಗಡಿ ನಡೆಸಲು ಬಾಡಿಗೆ ಪಡೆಯಬೇಕು ಎಂದು ಯುವ ಹೋರಾಟಗಾರ ಮಂಜುನಾಥ ಜಿ. ಗೊಂಡಬಾಳ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಗರದ ಪ್ರಮುಖ ಹೃದಯ ಭಾಗದಲ್ಲಿರುವ ಸಾಹಿತ್ಯ ಭವನ ೬೨ನೇ ಸಾಹಿತ್ಯ ಸಮ್ಮೇಳನದ ಸವಿನೆನಪಲ್ಲಿ ಅದರಲ್ಲಿ ಉಳಿದ ಹಣದಿಂದ ಮಲ್ಲಿಕಾರ್ಜುನ ದಿವಟರ್ ಅವರು ಶಾಸಕತ್ವದಲ್ಲಿ ನಿರ್ಮಾಣ ಮಾಡಲಾಗಿದ್ದು. ಪ್ರತ್ಯೇಕವಾಗಿ ಅದರನ್ನು ಕೋಟಿ ಕೋಟಿ ಹಣ ಹಾಕಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಏನು ಅಭಿವೃದ್ಧಿಯಾಗಿದೆ ಎಂಬುದು ಮಾತ್ರ ಅರ್ಥವೇ ಆಗುತ್ತಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ಒಂದು ಪ್ರಮುಖ ಏಕೈಕ ಸಾಂಸ್ಕೃತಿಕ ಭವನವಾಗಿದ್ದು, ನೀರು ಮತ್ತು ಶೌಚಾಲಯದ ಸಮಸ್ಯೆ ಈಗಲೂ ಸುಧಾರಿಸಿಲ್ಲ. ಇಲ್ಲಿ ಕಾರ್ಯಕ್ರಮ ಮಾಡಬೇಕೆಂದರೆ, ಆಯೋಜಕರಿಗೆ ಹುಚ್ಚು ಹಿಡಿದು ಹೋಗುತ್ತದೆ. ಆದರೂ ಬೇರೆ ವಿಧಿಯಿಲ್ಲದೆ ಮಾಡಬೇಕಿದೆ.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರವೆಂಬ ಸುಸಜ್ಜಿತ ಸಭಾ ಭವನವನ್ನು ಕೇವಲ ೬ ಸಾವಿರ ರುಪಾಯಿಗಳಿಗೆ ಕೊಡುತ್ತಾರೆ. ವಿದ್ಯುತ್, ಅಲಂಕಾರ, ಆಸನಗಳು, ಮೈಕ್‌ಸೆಟ್, ಸ್ಕರೀನ್ ಸೇರಿದಂತೆ ಎಲ್ಲವೂ ಇದೆ. ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಸಹ ಇದೆ. ಆದರೆ ಸಾಹಿತ್ಯ ಭವನಕ್ಕೆ ಒಂದು ದಿನಕ್ಕೆ ೮ ಸಾವಿರ ರುಪಾಯಿಗಳನ್ನು ಬಾಡಿಗೆ ಕೊಟ್ಟರೂ ಸಹ ಅಲ್ಲಿ ಮತ್ತೆ ಹೊರಗಿನಿಂದ ಡೆಕೋರೇಷನ್ ಅವರನ್ನು ಕರೆಸಿ ಅವರಿಗೆ ಮತ್ತೆ ಹಣತೆತ್ತು ಕಾರ್ಯಕ್ರಮ ಮಾಡಬೇಕು. ಇತ್ತೀಚೆಗೆ ಸುಮಾರು ೭೦ ಲಕ್ಷ ರುಪಾಯಿಗಳನ್ನು ಖರ್ಚು ಮಾಡಿ ಅತ್ಯಧುನಿಕವಾಗಿ ಸಾಹಿತ್ಯ ಭವನ ಸಜ್ಜುಗೊಳಿಸಿದ್ದರು. ಆದರೆ ಇವಾಗಲೇ ಅಲ್ಲಿ ಲೈಟ್, ಮೈಕ್‌ಸೆಟ್, ಫ್ಯಾನ್ ಯಾವುದು ಸರಿಯಾಗಿ ಕೆಲಸ ಮಾಡುವದಿಲ್ಲ. ಇಬ್ಬರು ಸಾಹಿತ್ಯ ಭವನದ ನಿರ್ವಹಣೆ ಮಾಡುತ್ತಾರೆ ಆದರೆ, ಸಿಕ್ಕಾಪಟ್ಟೆ ದುಡ್ಡು ಸುರಿದು ಲೋಕಲ್ ಬ್ರ್ಯಾಂಡ್ ವಸ್ತುಗಳನ್ನು ಹಾಕಿ ಸಾಹಿತ್ಯ ಭವನದ ಹೆಸರಲ್ಲಿ ಲೂಟಿ ಮಾಡಿದ್ದು, ಅದನ್ನು ಮಾಡಿರುವ ಗುತ್ತಿಗೆದಾರರನ್ನು ನೇರವಾಗಿ ಬ್ಲ್ಯಾಕ್ ಲಿಷ್ಟ್‌ಗೆ ಸೇರಿಸಬೇಕು.
ಶೌಚಾಲಯ ನೀರು ಇಲ್ಲದ ಒಂದು ಸಾಹಿತ್ಯ ಭವನಕ್ಕೆ ಕಾಯಕಲ್ಪ ಅಗತ್ಯವಾಗಿದೆ. ನಗರದಲ್ಲಿ ಕೋಟಿ ಕೋಟಿ ಖರ್ಚು ಮಾಡಿರುವ ಅರ್ಧಕ್ಕೆ ನಿಂತಿರುವ ಜಿಲ್ಲಾ ರಂಗ ಮಂದಿರ, ವಾಲ್ಮೀಕಿ ಭವನ, ಜಗಜೀವನ್ ರಾಮ್ ಭವನ, ಕನಕ ಭವನಗಳು ಯಾವಾಗ ಮುಗಿಯುತ್ತವೆ ಎಂಬುದು ಮಾತ್ರ ದೊಡ್ಡ ಯಕ್ಷ ಪ್ರಶ್ನೆಗಳಾಗಿವೆ. ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ಮಾಡಲು ಹೊರಗಿನವರಿಗೆ ಅಷ್ಟೇ ಅಲ್ಲ ಸರಕಾರಿ ಕಾರ್ಯಕ್ರಮಕ್ಕೂ ಪೆಂಡಾಲ್ ಬಾಡಿಗೆ ೨೦ ರಿಂದ ೨೫ ಸಾವಿರ ಆಗುತ್ತದೆ. ಸುಸಜ್ಜಿತವಾಗಿ ಇಟ್ಟಲ್ಲಿ ಅದೇ ದುಡ್ಡಿಂದ ಸರಕಾರಿ ಜಯಂತಿಗಳನ್ನು ಅರ್ಥಪೂರ್ಣ ಮತ್ತು ಅಪೂರ್ವವಾಗಿ ಮಾಡಬಹುದು. ಇನ್ನು ತಡಮಾಡದೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು. ಒಂದು ೨೫ ಕೆವಿ ಜನರೇಟರ್ ಖರೀದಿಸಬೇಕು. ವೈರಿಂಗ್ ಸರಿ ಮಾಡಿಸಬೇಕು. ಎಲ್ಲಾ ರಿಪೇರಿಗಳನ್ನು ಉಚಿತವಾಗಿ ಮಾಡಿಸಿ, ಅದನ್ನು ಮಾಡಿದ ಗುತ್ತಿಗೆದಾರನ ವಿರುದ್ಧ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು, ಅವರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿ ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಅವರು ಇದೆ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಈ ಮದ್ಯೆ ಸಾಹಿತ್ಯ ಭವನದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಒಂದು ಮಿರ್ಚಿ ಹೋಟಲ್, ಚಿಕನ್ ಕಾರ್ನರ್, ಟೀ ಸ್ಟಾಲ್, ಎಗ್ ಸೆಂಟರ್, ಬಾಳೆ ಹಣ್ಣು ಮತ್ತು ಹೂವಿನ ಅಂಗಡಿಗಳು ನಡೆಯುತ್ತವೆ. ಹಲವು ವರ್ಷಗಳಿಂದ ಅವರು ಅಲ್ಲಿ ಯಾವುದೇ ಬಾಡಿಗೆ ಕಟ್ಟದೆ ಲಕ್ಷ ಲಕ್ಷ ಹಣ ಸಂಪಾದಿಸಿದ್ದಾರೆ. ಈಗ ಅವರಿಂದ ಒಟ್ಟು ತಿಂಗಳಿಗೆ ೧೫ ಸಾವಿರ ರುಪಾಯಿಗಳನ್ನು ಬಾಡಿಗೆ ರೂಪದಲ್ಲಿ ವಸೂಲಿ ಮಾಡಿ ಅದೇ ಹಣದಿಂದ ಸಾಹಿತ್ಯ ಭವನದ ಸ್ವಚ್ಛತೆ ಮತ್ತು ನೀರು ಹಾಗೂ ಶೌಚಾಲಯ ನಿರ್ವಹಣೆ ಮಾಡಿದಲ್ಲಿ ಇಬ್ಬರಿಗೆ ಉದ್ಯೋಗ ನೀಡಿ ಅಲ್ಲಿ ಕಾರ್ಯಕ್ರಮ ಮಾಡುವ ಜನರಿಗೆ ನೆಮ್ಮದಿ ನೀಡಿದಂತೆ ಆಗುತ್ತದೆ. ಇಷ್ಟು ಹಣ ನೀಡಲು ಖಂಡಿತ ಸಾಧ್ಯವಿದ್ದು, ಅಲ್ಲಿನ ಮಿರ್ಚಿ ಮಂಡಕ್ಕಿ ಅಂಗಡಿಯಿಂದಲೇ ಕನಿಷ್ಟ ೧೦ ಸಾವಿರ ಬಾಡಿಗೆ ಪಡೆಯಬಹುದು. ಇವರಿಂದ ಬಾಡಿಗೆ ವಸೂಲಿ ಮಾಡಿ, ಸರಕಾರದ ಖಾತೆಗೆ ಜಮಾ ಮಾಡಿಸಿ ಅದರಿಂದಲೇ ನಿರ್ವಹಣೆ ಮಾಡಲು ಜಿಲ್ಲಾಡಳಿತಕ್ಕೆ ಸಾಧ್ಯವಿಲ್ಲ ಎನ್ನುವದಾದರೆ, ತಮ್ಮ ಸಂಸ್ಥೆಗೆ ನೀಡಿದಲ್ಲಿ ಅಷ್ಟು ಹಣ ತುಂಬಲು ಸಿದ್ಧವಿರುವದಾಗಿ ಹೇಳಿರುವ ಅವರು, ಸಾಹಿತ್ಯ ಭವನಕ್ಕೆ ಬೇಕಿರುವ ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಹಾಗೂ ಸಾಹಿತ್ಯ ಭವನದಲ್ಲಿ ಕೆಳಗೆ ದೊಡ್ಡ ಮಳಿಗೆಯೊಂದು ಖಾಲಿ ಇದ್ದು ಅಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಛೇರಿ ತೆರೆದರೆ, ಬಡ ಕಲಾವಿದರಿಗೆ ಅನುಕೂಲವಾಗುತ್ತದೆ ಎಂದು ಗೊಂಡಬಾಳ ಕೋರಿದ್ದಾರೆ.

Please follow and like us:
error