ಸರೂರ ಶಾಂತಮುತ್ತಯ್ಯ ಹಾಲುಮತದ ಪ್ರಥಮ ಗುರು-ಹನುಮಂತಪ್ಪ ಅಂಡಗಿ

ಕೊಪ್ಪಳ: ಕರ್ನಾಟಕದ ಬಹುಸಂಖ್ಯಾತ ಸಮಾಜಗಳಲ್ಲಿ ಹಾಲುಮತ ಸಮಾಜವೂ ಒಂದು. ಸಾಂಸ್ಕೃತಿಕವಾಗಿ, ಚಾರಿತ್ರಿಕವಾಗಿ ಈ ಸಮಾಜಕ್ಕೆ ಸುದೀರ್ಘವಾದ ಇತಿಹಾಸವಿದೆ. ಸರೂರ ಶಾಂತಮುತ್ತಯ್ಯ ಹಾಲುಮತದ ಪ್ರಥಮ ಗುರು. ಸರೂರ ಶಾಂತಮುತ್ತಯ್ಯ ರೇವಣಸಿದ್ಧೇಶ್ವರರ ಶಿಷ್ಯರು. ರೇವಣಸಿದ್ಧರು ಶಾಂತಮುತ್ತಯ್ಯನಿಗೆ ಲಿಂಗದೀಕ್ಷೆಯನ್ನು ಕೊಟ್ಟು ಗುರುಕಂಕಣವನ್ನು ಕಟ್ಟಿದರು. ಈ ಗುರು ಪರಂಪರೆಯಲ್ಲಿ ಸರೂರ ಶಾಂತಮುತ್ತಯ್ಯನಿಗೆ ಅಗ್ರಸ್ಥಾನವಿದೆ. ಬಸವಾದಿ ಪ್ರಮಥರು ಜೀವಿಸಿರುವ ಕಾಲವೇ ಸರೂರ ಶಾಂತಮುತ್ತಯ್ಯನವರು ಜೀವಿಸಿದ ಕಾಲವಾಗಿದೆ. ಅವರು ಬಸವಣ್ಣನವರ ಸಮಕಾಲೀನರಾಗಿದ್ದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ಶಾಂತಮುತ್ತಯ್ಯನವರ ಊರು. ಶಾಂತಮುತ್ತಯ್ಯನ ಮೂಲ ನೆಲೆಯಾದ ಸರೂರನ್ನು ಹಾಲುಮತದ ಸಾಂಸ್ಕೃತಿಕ ಕೇಂದ್ರ ಎಂದು ಪರಿಗಣಿಸಬೇಕಾಗಿದೆ. ಸರೂರ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಆ ಊರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿಬೇಕಾಗಿದೆ. ಅಮೋಘಸಿದ್ಧನ ಅರಕೇರಿ, ಬೀರಪ್ಪನ ಕೋಣಗನೂರು-ಅಲಕನೂರು, ಮಾಳಿಂಗರಾಯನ ಹುಲಿಜಂತಿ, ಮೈಲಾರಲಿಂಗನ ಮೈಲಾರ ಈ ಸ್ಥಳಗಳನ್ನು ಅಭಿವೃದ್ಧಿಪಡಿಸುವಂತಹ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಬೇಕಾಗಿದೆ. ಹಾಲುಮತ ಗುರುಪರಂಪರೆಯಲ್ಲಿ ಮೂರು ಸಂಪ್ರದಾಯಗಳಿವೆ. ರೇವಣಸಿದ್ಧ ಸಂಪ್ರದಾಯ, ಸಿದ್ಧರಾಮೇಶ್ವರ ಸಂಪ್ರದಾಯ, ಅಮೋಘಸಿದ್ಧೇಶ ಸಂಪ್ರದಾಯಗಳಿವೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಕೊಪ್ಪಳದ ಸಾಹಿತ್ಯ ಭವನದಲ್ಲಿ ಚಲನಚಿತ್ರ ನಿರ್ದೇಶಕರು ಮತ್ತು ಹಿರಿಯ ಪತ್ರಕರ್ತರಾದ ರಮೇಶ ಸುರ್ವೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರವಾಸಿ ಉತ್ಸವದಲ್ಲಿ ಬೆಂಗಳೂರಿನ ಹಿರಿಯ ಸಾಹಿತಿ, ಕಾವ್ಯನಾಡೋಜ, ‘ಸತ್ಯವಿಠಲ’ ಡಾ.ಬಿ.ವಿ.ಸತ್ಯನಾರಾಯಣರಾವ ಅವರ ‘ಹಾಲುಮತ ಮಹಾಕಾವ್ಯ’ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ, ಗದಗಿನ ಹಿರಿಯ ಸಾಹಿತಿ ಡಾ.ರಾಜೇಂದ್ರ ಎಸ್.ಗಡಾದರವರ ಆಯ್ದ ಲೇಖಗಳ ಸಂಕಲನ ‘ಸಮಾಲೋಕನ’ ಗ್ರಂಥವು ಸಮ್ಮಿಶ್ರ ಲೇಖನಗಳ ಸಂಕಲನವಾಗಿದೆ. ಇದರಲ್ಲಿ ಸಾಹಿತ್ಯ ಹಾಗೂ ವ್ಯಕ್ತಿಚಿತ್ರ, ಪುಸ್ತಕಗಳ ವಿಮರ್ಶೆಗಳ ಲೇಖನಗಳಿವೆ. ಚುಟುಕು ಸಾಹಿತ್ಯ ಬೆಳೆದು ಬಂದ ಹಾದಿಯ ಕುರಿತು ತುಂಬ ಉಪಯುಕ್ತವಾದ ಸಂಶೋಧನಾ ಲೇಖನವಿದೆ. ಪ್ರಾಚೀನ ಕಾವ್ಯ ಹಾಗೂ ಪ್ರಸ್ತುತ ಕಾವ್ಯದ ವಿಮರ್ಶೆಯಿದೆ. ಸಾಂಗತ್ಯ ಸಾಹಿತ್ಯ ಇತಿಹಾಸ ಪರಂಪರೆ ಕುರಿತಾದ ಲೇಖನಗಳಿವೆ. ಒಟ್ಟಾರೆ ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದೆ ಎಂದರು.
ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ಘಟಕದ ಅಧ್ಯಕ್ಷರಾದ ಡಾ.ನೆ.ಲ.ನರೇಂದ್ರಬಾಬು, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶಕುಮಾರ ಹೊಸಮನಿ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಎಚ್.ಎಲ್.ಹಿರೇಗೌಡರ, ಚಲನಚಿತ್ರ ನಿರ್ದೇಶಕರು ಮತ್ತು ಹಿರಿಯ ಪತ್ರಕರ್ತರಾದ ರಮೇಶ ಸುರ್ವೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಂ.ಎ.ಮುಲ್ಲಾ, ಜಿಲ್ಲಾ ವಕ್ಫ ಅಧಿಕಾರಿಗಳಾದ ಮಕಬೂಲ್‌ಪಾಷಾ, ಹಿರಿಯ ಪತ್ರಕರ್ತರಾದ ಎಂ.ಸಾಧಿಕಅಲಿ, ಸಾವಿತ್ರ ಮುಜುಮದಾರ, ರಾಷ್ಟ್ರೀಯ ಕ್ರೀಡಾಪಟು ಬಿ.ಕೆ.ಪ್ರಕಾಶ ಭಾರಧ್ವಾಜ್, ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹದಳದ ಕಾರ್ಯದರ್ಶಿಯಾದ ಮೋಹನ ಕೃಷ್ಣಸಿಂಗ್, ಕಾರ್ಮಿಕ ಕಲ್ಯಾಣ ಇಲಾಖೆಯ ಸಹ ಆಯುಕ್ತರಾದ ಉಷಾಸಿಂಗ್, ಕಿರುತೆರೆ ನಟಿಯಾದ ಮೀನಾಕ್ಷಿ, ಬೆಳಗಾವಿ ಜಿಲ್ಲೆ ರಾಯದುರ್ಗಾ ತಾಲೂಕಿನ ಚಿಪ್ಪಲಕಟ್ಟಿ ಹಿರೇಮಠದ ಕಲ್ಮೇಶ್ವರ ಮಹಾಸ್ವಾಮಿಗಳು, ಉಡುಪಿಯ ದುರ್ಗಾ ಆಧಿಶಕ್ತಿ ದೇವಸ್ಥಾನದ ಧರ್ಮದರ್ಶಿಗಳಾದ ರಮಾನಂದಾ ಗುರೂಜಿ, ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ರುದ್ರಪ್ಪ ಭಂಡಾರಿ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಉಮೇಶ ಸುರ್ವೆ ನಿರೂಪಿಸಿ, ವಂದಿಸಿದರು.

Please follow and like us:
error