ಸಮಗ್ರ ಅಭಿವೃದ್ಧಿಗೆ ವಿಷನ್ ೨೦೨೫ : ತಯಾರಿ ಪ್ರಕ್ರಿಯೆಗೆ ಅ.೩ ರಿಂದ ಚಾಲನೆ- ಎಂ. ಕನಗವಲ್ಲಿ

) : ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರ ಕೈಗೊಳ್ಳಲು ಉದ್ದೇಶಿಸಿರುವ ಮಹತ್ವಾಕಾಂಕ್ಷಿ ವಿಷನ್ ೨೦೨೫ ಡಾಕ್ಯುಮೆಂಟ್ ತಯಾರಿ ಕುರಿತಂತೆ ಅ.೩ ರಿಂದ ಸಿದ್ಧತೆಗಳನ್ನು ಪ್ರಾರಂಭಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.     ಜಿಲ್ಲಾ ವಾರು ಸಂವಾದ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಇಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ವಿಷನ್ ೨೦೨೫ ರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ರೇಣುಕಾ ಚಿದಂಬರಂ ಅವರ ನೇತೃತ್ವದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರದಂದು ಏರ್ಪಡಿಸಲಾದ ವಿಡಿಯೋ ಕಾನ್ಫರೆನ್ಸ್ ಬಳಿಕ ಅವರು ಮಾತನಾಡಿದರು.     ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ದೂರದೃಷ್ಟಿ ಚಿಂತನೆಯೊಂದಿಗೆ ವಿಷನ್ ೨೦೨೫ ಡಾಕ್ಯುಮೆಂಟ್ ತಯಾರಿಗೆ ಸರ್ಕಾರ ಮುಂದಾಗಿದ್ದು ಇದಕ್ಕೆ ತಂಡಗಳನ್ನು ರಚಿಸಿದೆ. ಸಮಾಜದ ಎಲ್ಲಾ ವರ್ಗದ ಜನಸಮುದಾಯಗಳು ಹಾಗೂ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಆಯಾಯ ಕ್ಷೇತ್ರದಲ್ಲಿನ ಅನುಭವಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಸಾಧಕರನ್ನು ಒಗ್ಗೂಡಿಸಿ, ಕ್ಷೇತ್ರವಾರು ಗುಂಪುಗಳನ್ನು ರಚಿಸಿ, ಸಂವಾದದ ಮೂಲಕ ಅಭಿವೃದ್ಧಿಯ ಆಧ್ಯತೆ, ಸಾಧ್ಯತೆ ಅದಕ್ಕಿರುವ ಸಾಧನ ಸಂಪನ್ಮೂಲಗಳನ್ನು ಗುರುತಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.ಎಲ್ಲಾ ಅಧಿಕಾರಿಗಳು ಸರ್ಕಾರದ ಆಶಯವನ್ನು ಅರಿತು ಜಿಲ್ಲೆಯಲ್ಲಿ ಗಂಭೀರವಾದಂತಹ ಚಿಂತನಾ, ಸಮಾಲೋಚನಾ ಸಭೆ ಆಯೋಜಿಸಿ ಎಂದು ವಿಷನ್ ೨೦೨೫ ರ ಸಿಇಒ ರೇಣುಕಾ ಚಿದಂಬರಂ ಅವರು ತಿಳಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಅ. ೦೩ ರಂದು ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಕೈಗೊಂಡು, ವಿಷನ್ ೨೦೨೫ ಡಾಕ್ಯುಮೆಂಟ್ ತಯಾರಿಕೆಗೆ ಚಾಲನೆ ನೀಡಲಾಗುವುದು.  ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಸುಮಾರು ೧೨ ಆದ್ಯತಾ ವಲಯಗಳನ್ನು ನಿಗದಿಪಡಿಸಲಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ, ಕೃಷಿ ಮತ್ತು ಕೃಷಿಗೆ ಸಂಬಂಧಿತ ಕ್ಷೇತ್ರಗಳು, ಉದ್ಯೋಗ ಮತ್ತು ಕೌಶಲ್ಯ, ಆಡಳಿತ, ಆರೋಗ್ಯ, ಕೈಗಾರಿಕೆ, ಮೂಲಭೂತ ಸೌಕರ್ಯ, ಕಾನೂನು ಮತ್ತು ಸುವ್ಯವಸ್ಥೆ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ನಗರಾಭಿವೃದ್ಧಿ, ಸ್ಮಾರ್ಟ್ ಸಿಟಿ ಸೇರಿದಂತೆ ಅಭಿವೃದ್ಧಿಯ ಆದ್ಯತೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಗತಿಪರ ಚಿಂತಕರು, ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳು, ತಜ್ಞರು ಸೇರಿದಂತೆ ಎಲ್ಲ ನಿಟ್ಟಿನಿಂದಲೂ, ಅಭಿವೃದ್ಧಿಗಾಗಿ ಚಿಂತನೆಗಳನ್ನು, ಸಲಹೆಗಳನ್ನು ಕ್ರೋಢೀಕರಿಸುವ ಕಾರ್ಯ ಆಗಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್, ಸರ್ಕಾರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.    ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಂಡಿವಡ್ಡರ್ ಸೇರಿದಂತೆ ಹಲವು ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದರು.

Please follow and like us:
error