ಸಣ್ಣ ನೀರಾವರಿ ಗಣತಿ ಮಾಹಿತಿಯನ್ನು ನಿಯಮಾನುಸಾರ ಸಂಗ್ರಹಿಸಿ: ರಘುನಂದನ್ ಮೂರ್ತಿ

ಕೊಪ್ಪಳ :  ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳು 6 ನೇ ಸಣ್ಣ ನೀರಾವರಿ ಗಣತಿಯ ಮಾಹಿತಿಯನ್ನು ಗ್ರಾಮವಾರು
ಮತ್ತು ಸರ್ವೆ ನಂಬರ್‌ಗಳವಾರು ಸಂಗ್ರಹಿಸುವ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತನ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಇಂದು ನಡೆದ 6ನೇ ಸಣ್ಣ
ನೀರಾವರಿಗಣತಿಯ ಮತ್ತು ನೀರಿನಾಸರೆಯ ಗಣತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂತರ್ಜಲ ಯೋಜನೆಗಳಲ್ಲಿ ಬರುವ ಅಗೆದ ಬಾವಿಗಳ ಸಂಖ್ಯೆ, ಆಳವಲ್ಲದ ಕೊಳವೆ ಬಾವಿಗಳ ಸಂಖ್ಯೆ, ಮಧ್ಯಮ ಆಳದ ಕೊಳವೆ ಬಾವಿಗಳ ಸಂಖ್ಯೆ, ಆಳದ ಕೊಳವೆ ಬಾವಿಗಳ ಸಂಖ್ಯೆ ಇವುಗಳ ಮಾಹಿತಿಯನ್ನು ಗ್ರಾಮ ಲೆಕ್ಕಾಧಿಕಾರಿಗಳು ಭರ್ತಿ ಮಾಡಬೇಕು. ತಹಶೀಲ್ದಾರರು ಕಂದಾಯ ನಿರೀಕ್ಷಕರ, ಉಪತಹಶೀಲ್ದಾರರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಹೇಳಿದರು. 1986-87 ರಲ್ಲಿ 1 ನೇ ಸಣ್ಣ ನೀರಾವರಿ ಗಣತಿ, 1993-94 ರಲ್ಲಿ 2 ನೇ ಸಣ್ಣ ನೀರಾವರಿ ಗಣತಿ, 2000-01 ರಲ್ಲಿ 3  ನೇ ಸಣ್ಣ ನೀರಾವರಿ ಗಣತಿ, 2006-07 ರಲ್ಲಿ 4 ನೇ ಸಣ್ಣ ನೀರಾವರಿ ಗಣತಿ, 20013-14 ರಲ್ಲಿ 5 ನೇ ಸಣ್ಣ ನೀರಾವರಿ ಗಣತಿಯನ್ನು, ಪ್ರಸ್ತುತ 6 ನೇ ಸಣ್ಣ ನೀರಾವರಿ ಗಣತಿಯನ್ನು 2017-18 ನೇ ವರ್ಷವನ್ನಾಧರಿಸಿ ಗಣತಿಯನ್ನು ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು. ಗುಲ್ಬರ್ಗಾ ವಿದ್ಯತ್ ಸರಬರಾಜು ನಿಗಮವು(ಜೆಸ್ಕಾಂ) ಗ್ರಾಮವಾರು ನೀರಾವರಿಗಾಗಿ ವಿದ್ಯಚ್ಛಕ್ತಿ ಪಡೆದುಕೊಂಡಿರುವ ರೈತರ ವಿವರಗಳನ್ನು ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಒದಗಿಸಬೇಕು. ವಿಶೇಷವಾಗಿ ಈ ಬಾರಿ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಬರುವ ಬಳಕೆಯಾಗುವ ಎಲ್ಲಾ ನೀರಿನಾಸರೆಗಳನ್ನು (ಉದಾ: ಕೈಗಾರಿಕೆ, ಮೀನುಗಾರಿಕೆ, ಕುಡಿಯಲು, ಆಟೋಟ, ಧಾರ್ಮಿಕ, ಅಂತರ್ಜಲ ಪುನಶ್ಚೇತನ) ಇವುಗಳನ್ನು ಈ ಗಣತಿಯಲ್ಲಿ ಪರಿಗಣಿಸಲಾಗುವುದು. ಗಣತಿ ಪ್ರಕ್ರಿಯೆಯಲ್ಲಿ ನಗರ ಪ್ರದೇಶದ ಅಧಿಕಾರಿಗಳು,
ನೌಕರರು ಮೂಲ ಕಾರ್ಯಕರ್ತರಾಗಿರುತ್ತಾರೆ. ನಗರ-ಪಟ್ಟಣ ಪ್ರದೇಶಗಳಲ್ಲಿ ಯಾವುದೇ ನೀರಿನಾಸರೆಯನ್ನು ಕೈಬಿಡದೆ ಗಣತಿ ಮಾಡಬೇಕು. ಮೊಬೈಲ್ ಸ್ನೇಹಿ ಆಪ್ ಬಳಸಿಕೊಂಡು ಅಕ್ಷಾಂಶ ಮತ್ತು ರೇಖಾಂಶಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ತಂತ್ರಾAಶದಲ್ಲಿ ಅಪಲೋಡ್ ಮಾಡಬೇಕು.
ತಾಲೂಕ ಮಟ್ಟದಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ತಾಲೂಕ ಮಟ್ಟದ ಸಮನ್ವ ಸಮಿತಿ ಸಭೆ ಮತ್ತು ತರಬೇತಿಯನ್ನು ಏರ್ಪಡಿಸಬೇಕು. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರನ್ನು ತಾಲೂಕು ನೋಡಲ್ ಅಧಿಕಾರಿಗಳೆಂದು ನೇಮಿಸಲಾಗುವುದು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಸಮಗ್ರ ಮಾಹಿತಿಯೊಂದಿಗೆ ತರಬೇತಿಯನ್ನು ನೀಡಬೇಕು ಮತ್ತು ಕಾರ್ಯಪಾಲಕ ಅಭಿಯಂತರರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು. ಸಭೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error