ಸಂಸದರಾದ ಪ್ರತಾಪ್ ಸಿಂಹ, ಅನಂತ್ ಕುಮಾರ್ ಹೆಗಡೆಯ ಮಾನಸಿಕ ಸ್ವಾಸ್ಥ್ಯ ಚಿಕಿತ್ಸೆಗಾಗಿ ದೇಣಿಗೆ ಸಂಗ್ರಹ !

ಮೈಸೂರು,ಡಿ.27: ಇಬ್ಬರು ಬಿಜೆಪಿ ಸಂಸದರುಗಳ ಮಾನಸಿಕ ಸ್ವಾಸ್ಥ್ಯ ಚಿಕಿತ್ಸೆಗಾಗಿ ಒತ್ತಾಯಿಸಿ ಮೈಸೂರಿನಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಯಿತು.

ಮೈಸೂರು ನ್ಯಾಯಾಲಯ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಮತ್ತು ಅಕ್ಕ ಪಕ್ಕದ ರಸ್ತೆ ಬದಿ ವ್ಯಾಪಾರಿಗಳ ಬಳಿ ಬುಧವಾರ ಮೈಸೂರಿನ ಕೆಲ ವಕೀಲರು ಮತ್ತು ಜಿಲ್ಲಾ ಕಾಂಗ್ರಸ್ ಸದಸ್ಯರು, ಸಾರ್ವಜನಿಕರು ಒಟ್ಟು ಸೇರಿ ಸಂಸದರಾದ ಅನಂತ್ ಕುಮಾರ್ ಹೆಗಡೆ ಮತ್ತು ಪ್ರತಾಪ್ ಸಿಂಹ ಅವರ ಮಾನಸಿಕ ಚಿಕಿತ್ಸೆಗಾಗಿ ಸಾರ್ವಜನಿಕ ದೇಣಿಗೆಯನ್ನು ಸಂಗ್ರಹಿಸಿದರು.

ಇವರು ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಹರಕು ನಾಲಿಗೆಯನ್ನು ಹರಿಬಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಲೆತಗ್ಗಿಸುವಂತಹ ಮಾತುಗಳನ್ನಾಡುತ್ತಿದ್ದಾರೆ. ದೇಶದ ಐಕ್ಯತೆಗೆ ಧಕ್ಕೆ ತರುತ್ತಿದ್ದಾರೆ.ಅವರನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರಿಬ್ಬರೂ ಮಾನಸಿಕ ಅಸ್ವಸ್ಥರಂತೆ ಕಂಡು ಬಂದಿದ್ದು,ಅವರುಗಳಿಗೆ ಮಾನಸಿಕ ಚಿಕಿತ್ಸೆ ನೀಡಬೇಕಾಗಿದೆ. ಚಿಕಿತ್ಸಾ ವೆಚ್ಚಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಸಂಗ್ರಹಿತವಾದ ಮೊತ್ತವನ್ನು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಹಾಗೂ ವಕೀಲೆ ಮಂಜುಳಾ ಮಾನಸ, ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಸುರೇಶ್ ಪಾಳ್ಯ, ಗ್ರಾಮ ಘಟಕ ಅಧ್ಯಕ್ಷೆ ನಂದಿನಿ ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ವಿಜಯಕುಮಾರ್, ವಕೀಲ ಎಸ್.ಶ್ರೀಕೃಷ್ಣ, ಡಾ.ಸುಜಾತಾ ಎಸ್.ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.