ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ – ಸಿರಾಜ್ ಬಿಸರಳ್ಳಿ


ಕೊಪ್ಪಳ :- ಸಂವಿಧಾನ ಜಾರಿಗೆ ಬಂದು ೭೦ ವರ್ಷಗಳ ನಂತರವೂ ಸಹ ಇನ್ನೂ ನಮಗೆ ಸಂವಿಧಾನದ ಕುರಿತು ಸೂಕ್ತ ತಿಳುವಳಿಕೆ ಮತ್ತು ಮಾಹಿತಿ ಇಲ್ಲ. ನಮ್ಮ ಸಮಸ್ಯೆಗಳಿಗೆ ಸಂವಿಧಾನದ ಬಗೆಗಿನ ತಿಳುವಳಿಕೆಯ ಕೊರತೆಯೇ ಮೂಲ ಕಾರಣ. ಸಮ ಪಾಲು, ಸಮ ಬಾಳಿನ ಆಶಯ ಹೊಂದಿರುವ ಸಂವಿಧಾನವನ್ನು ಓದಿದವರ ಸಂಖ್ಯೆ ಬಹಳ ಕಡಿಮೆ. ಕಳೆದ ಕೆಲವು ವರ್ಷಗಳಿಂದ ಸಂವಿಧಾನದ ಆಶಯಗಳನ್ನೇ ಬದಲಾಯಿಸುವ ಕೆಲಸ ನಡೆಯುತ್ತಿದೆ. ಅದನ್ನು ತಡೆಗಟ್ಟಬೇಕಾದರೆ ಮೊದಲು ನಾವು ಸಂವಿಧಾನದ ಕುರಿತು ಜ್ಞಾನ ಪಡೆದುಕೊಳ್ಳಬೇಕು. ನಮ್ಮೆಲ್ಲರ ರಕ್ಷಣೆ ಸಂವಿಧಾನದಿಂದಲೇ ಸಾಧ್ಯ. ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಎಂದು ಪತ್ರಕರ್ತ ಸಿರಾಜ್ ಬಿಸರಳ್ಳಿ ಹೇಳಿದರು.
ಕೊಪ್ಪಳದ ಅಂಬೇಡ್ಕರ್ ಸರ್ಕಲ್ ನಲ್ಲಿ ವೆಲ್ಫೇರ್ ಪಾರ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಮಂಗಳೂರು ವಿಜಯರವರು ಬರೆದಿರುವ ನಮ್ಮ ಸಂವಿಧಾನ ಮತ್ತು ವಿರೋಧಾಭಾಸ ಕೂಡಲೇ ಕೊನೆಯಾಗಲಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.


ಸಂವಿಧಾನವನ್ನು ಓದುವುದರ ಮೂಲಕ ನಮ್ಮ ಹಕ್ಕುಗಳ ಬಗ್ಗೆ, ಕರ್ತವ್ಯಗಳ ಬಗ್ಗೆ ತಿಳಿಯಲು ಸಾಧ್ಯ. ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನ ಬಂದು ೭೦ ವರ್ಷಗಳಾದವು. ಆದರೆ ಸಂವಿಧಾನದ ಬಗೆಗೆ ಅರಿವು ಮೂಡಿಸುವ ಕೆಲಸ ನಮ್ಮಲ್ಲಿ ಆಗಿಲ್ಲ. ಅಜ್ಞಾನ, ಅವಿವೇಕಗಳನ್ನೇ ವ್ಯವಸ್ಥಿತವಾಗಿ ಬೆಳೆಸಲಾಗುತ್ತಿದೆ. ಜನ ಸಾಮಾನ್ಯರ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಸಂವಿಧಾನವನ್ನೇ ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಹೋರಾಡಲು ಸಂವಿಧಾನದ ಬಗ್ಗೆ ಅರಿವು ಮತ್ತು ತಿಳುವಳಿಕೆ ಬಹಳ ಮುಖ್ಯ. ಇತ್ತೀಚೆಗೆ ಸಂವಿಧಾನದ ಓದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ನಿಟ್ಟಿನಲ್ಲಿ ಮಂಗಳೂರು ವಿಜಯರವರು ಬರೆದಿರುವ ನಮ್ಮ ಸಂವಿಧಾನದಂತಹ ಸಂಕ್ಷಿಪ್ತ ಕೈಪಿಡಿಗಳು ಸಂವಿಧಾನವನ್ನು ಅರಿಯುವಲ್ಲಿ ದಾರಿ ದೀಪವಾಗುತ್ತವೆ. ಇಂತಹ ಕೃತಿಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಶಿಕ್ಷಣದಿಂದಲೇ ಬದಲಾವಣೆ ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ರಾಜು, ಬಿ.ಆರ್.ಅಂಬೇಡ್ಕರ್‌ರವರ ಆಶಯಗಳನ್ನು ಅರಿತುಕೊಂಡು ನಾವು ನಡೆಯಬೇಕಿದೆ. ನಮ್ಮನ್ನು ಹೊಡೆದಾಳುವ ನೀತಿ ಅನುಸರಿಸಲಾಗುತ್ತಿದೆ. ಅದರ ವಿರುದ್ಧ ಹೋರಾಡಲು ನಮಗೆ ಅರಿವಿನ ಕೊರತೆ ಇದೆ ಅದನ್ನು ನೀಗಿಸಲು ಇಂತಹ ಕೃತಿಗಳನ್ನು ಓದಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ, ಜಿಲ್ಲಾ ಅಧ್ಯಕ್ಷ ಆದಿಲ್ ಪಟೇಲ್ ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಸಲೀಂ ಮಂಡಲಗೇರಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರಘು ಬೆಲ್ಲದ, ರಘು ಚಾಕ್ರಿ, ಶ್ರೀಕಾಂತ ಹೊಸಮನಿ, ನಜೀರ್ ಮುದಗಲ್, ಅಬ್ದುಲ್ ಖಯ್ಯೂಮ್, ವಿನಾಯಕ ಬೆಲ್ಲದ್, ಅವಿನಾಶ್ ದೊಡ್ಡಮನಿ, ಆಕಾಶ್ ಬೆಲ್ಲದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error