fbpx

ಸಂತ್ರಸ್ತ ಬಾಲಕಿಯ ಗುರುತು ಬಹಿರಂಗ ಪಡಿಸಿದ್ದ ಯುವಕನ ವಿರುದ್ಧ ದೂರು ದಾಖಲು


ಕೊಪ್ಪಳ ಜು. : ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಲೈಂಗಿಕ ಅಪರಾಧಕ್ಕೊಳಪಟ್ಟ ಸಂತ್ರಸ್ತ ಬಾಲಕಿಯ ಗುರುತು ಬಹಿರಂಗಪಡಿಸಿದ್ದ ಯುವಕನ ವಿರುದ್ಧ ಪೋಕ್ಸೋ ಮತ್ತು ಜೆ.ಜೆ. ಕಾಯ್ದೆಯಡಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಡಿ. ಎಲಿಗಾರ ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿಯ ಕುರಿತು ಛಾಯಾಚಿತ್ರವುಳ್ಳ ವಿಡಿಯೋ ಒಂದನ್ನು ಟಿಕ್-ಟಾಕ್ ಅಪ್ಲಿಕೇಷನ್ ಬಳಸಿಕೊಂಡು ಚಿತ್ರೀಕರಿಸಿ ವಾಟ್ಸಪ್ ಮೂಲಕ ಜೂನ್ 29 ರಂದು ಬಾಲಕಿಯ ಗುರುತನ್ನು ಯುವಕ ಬಹಿರಂಗ ಪಡಿಸಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ವಿಡಿಯೋ ವೈರಲ್ ಮಾಡಿದ ಯುವಕನ ವಿರುದ್ಧ ಪ್ರಕರಣ ದಾಖಲಿಸುವಂತೆ ತಿಳಿಸಿತ್ತು. ಅದರಂತೆ ಜೂನ್ 30 ರಂದು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪೋಕ್ಸೋ-2012 ಸೆಕ್ಷನ್ 23, ಜೆ.ಜೆ.ಕಾಯ್ದೆ-2015ರ ಸೆಕ್ಷನ್-74(1&3) ಹಾಗೂ ಐ.ಪಿ.ಸಿ-1860 ಸೆಕ್ಷನ್-354(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ರ ಸೆಕ್ಷನ್-23(4) ಅಡಿಯಲ್ಲಿ ಸಂತ್ರಸ್ತರಾದ ಮಕ್ಕಳ (ಜೀವಂತವಾಗಿದ್ದು, ಮಾನಸಿಕ ಅಸ್ವಸ್ಥವಾಗಿದ್ದು ಅಥವಾ ಮರಣ ಹೊಂದಿದ್ದು, ಅಂತಹ ಮಗುವಿನ ಮೇಲೆ ಅತ್ಯಾಚಾರ ಆಗಿದ್ದಲ್ಲಿ) ಗುರುತನ್ನು ಬಹಿರಂಗಪಡಿಸಲು ಸೆಷನ್ ನ್ಯಾಯಾಧೀಶರ ಹೊರತಾಗಿ ಯಾರಿಗೂ ಅಧಿಕಾರವಿಲ್ಲ. ಮಕ್ಕಳ ನ್ಯಾಯ(ಮಕ್ಕಳ ಪೋಷಣೆ & ರಕ್ಷಣೆ) ಕಾಯ್ದೆ-2015ರ ಸೆಕ್ಷನ್ 74(1&3) ರ ಪ್ರಕಾರ ಕಾನೂನು ಸಂಘರ್ಷದಲ್ಲಿರುವ, ಪೋಷಣೆ ಮತ್ತು ರಕ್ಷಣೆಯ ಅವಶ್ಯಕತೆ ಇರುವ, ಅಪರಾಧಕ್ಕೀಡಾದ ಮಕ್ಕಳು, ಸಾಕ್ಷಿಯಾಗಿರುವ ಮಕ್ಕಳು, ಯಾವುದೇ ವಿಚಾರಣೆ, ತನಿಖೆ, ನ್ಯಾಯಿಕ ಪ್ರಕ್ರಿಯೆಗಳ ಕುರಿತು ಮಕ್ಕಳ ಗುರುತು ನೀಡಬಹುದಾದ ಹೆಸರು, ವಿಳಾಸ, ಶಾಲೆ, ಯಾವುದೇ ವಿವರ, ವರದಿ, ಛಾಯಾಚಿತ್ರಗಳನ್ನು ಪತ್ರಿಕೆಗಳಲ್ಲಿ, ವಾರ್ತಾ ಸಂಚಿಕೆ ಅಥವಾ ಯಾವುದೇ ರೀತಿಯ ಸಂವಹನ ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ. ಒಂದು ವೇಳೆ ಪ್ರಕಟಿಸಿದಲ್ಲಿ 6 ತಿಂಗಳ ಕಾರಾಗೃಹ ವಾಸ ಅಥವಾ ರೂ. 2 ಲಕ್ಷ ದಂಡ ಅಥವಾ ಈ ಎರಡನ್ನೂ ವಿಧಿಸಬಹುದಾಗಿದೆ.
ಆದ್ದರಿಂದ ಫೇಸ್‌ಬುಕ್, ವಾಟ್ಸಪ್, ಯೂಟ್ಯೂಬ್ ಸೇರಿದಂತೆ ಯಾವುದೇ ಸಾಮಾಜಿಕ ತಾಣದಲ್ಲಿ 0-18 ವರ್ಷದೊಳಗಿನ ಲೈಂಗಿಕ ಹಿಂಸೆ, ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ, ಕಾನೂನು ಸಂಘರ್ಷದಲ್ಲಿರುವ, ಪೋಷಣೆ ಮತ್ತು ರಕ್ಷಣೆಯ ಅವಶ್ಯಕತೆಯಿರುವ, ಅಪರಾಧಕ್ಕೀಡಾದ ಮಕ್ಕಳು, ಸಾಕ್ಷಿಯಾಗಿರುವ ಮಕ್ಕಳ ಯಾವುದೇ ಮಾಹಿತಿಯನ್ನು ಸಾರ್ವಜನಿಕರಾಗಲೀ, ಅಧಿಕಾರಿಗಳಾಗಲೀ, ಪೋಷಕರಾಗಲೀ ಅನವಶ್ಯಕವಾಗಿ ಅಪ್‌ಲೋಡ್ ಮಾಡುವಂತಿಲ್ಲ ಎಂದು   ತಿಳಿಸಿದ್ದಾರೆ.

Please follow and like us:
error
error: Content is protected !!