ಶ್ರೀ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಕಳಸದ ಮೆರವಣಿಗೆ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರಾ ಮಹೋತ್ಸವದದ ಆಂಗವಾಗಿ ಇಂದು ಸಂಜೆ ಶ್ರೀ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಕಳಸದ ಮೆರವಣಿಗೆಯು ಕೋಟೆ ಏರಿಯಾದಲ್ಲಿರುವ ಜಡೇಗೌಡರ ಮನೆಯಿಂದ ಗಡಿಯಾರ ಕಂಭ, ಜವಾಹರ ರಸ್ತೆ, ಕಿತ್ತೂರ ಚನ್ನಮ್ಮ ಸರ್ಕಲ್, ಕವಲೂರ ಓಣಿ, ಸಿದ್ಧೇಶ್ವರ ವೃತ್ತದ ಮಾರ್ಗವಾಗಿ ಶ್ರೀಗವಿಮಠದವರೆಗೆ ಜರುಗಿತು. ಸಂಸ್ಥಾನಶ್ರೀ ಗವಿಮಠದ ೧೧ ಪೀಠಾಧೀಶರಾಗಿದ್ದ ಜ|| ಗವಿಸಿದ್ದೇಶ್ವರ ಮಹಾಸ್ವಾಮಿಗಳವರು ಶ್ರೀ ಗವಿಮಠಕ್ಕೆ ಆಗಮಿಸುವ ಪೂರ್ವದಲ್ಲಿ ಕೊಪ್ಪಳದ ಜಡೇಗೌಢರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದರು. ಶ್ರೀ ಗವಿಮಠಕ್ಕೆ ಬರುವ ಪೂರ್ವದಲ್ಲಿ ಗೌಡರ ಧರ್ಮಪತ್ನಿಯವರಿಗೆ ತಮ್ಮ ಶಿಖೆ ಅಂದರೆ (ಜಡೆ)ಯನ್ನೇ ತೆಗೆದುಕೊಟ್ಟರು. ಆಂದಿನಿಂದ ಆ ಮನೆತನಕ್ಕೆ ಜಡೇಗೌಡ್ರ ಎಂಬ ಹೆಸರು ಬಂದಿತು.ಈ ಕಾರಣಕ್ಕಾಗಿ ಶ್ರೀಮಠದಲ್ಲಿ ಪೂಜೆಗೊಂಡ ಗವಿಸಿದ್ದೇಶ್ವರ ಮೂರ್ತಿಯನ್ನು ಜಡೇಗೌಡರ ಮನೆಯಲ್ಲಿ ಮೂಹರ್ತಗೊಳಿಸಿ ಪೂಜಾದಿಗಳನ್ನು ಸಲ್ಲಿಸಿದ ತರುವಾಯ ವಾದ್ಯಗಳ ಸಮೇತ ಪಲ್ಲಕ್ಕಿಯನ್ನು ಕೊಪ್ಪಳದ ಪ್ರಮುಖ ಬೀದಿಗಳಲ್ಲಿ ಹಲವು ಜಾನಪದ ಕಲಾ ತಂಡಗಳಾದ ಸಮಾಳ ಮೋಜಿನ ಗೊಂಬೆ, ಹಲಗೆ ಮಜಲು, ಮಹಿಳಾ ಡೊಳ್ಳು ಕುಣಿತ, ಮಹಿಳಾ ವೀರಾಗಾಸೆ, ಕೋಲಾಟ, ಕರಡಿ ಮಜಲು, ಸಮಾಳ, ನಂದಿಕೋಲು, ಹಗಲು ವೇಷ, ಜಾಂಜ್ ಮೇಳ, ಚಿಟ್ಟಿ ಮೇಳ ಇವುಗಳ ಮೆರವಣಿಗೆಯ ಮುಖಾಂತರ ಶ್ರೀ ಗವಿಮಠಕ್ಕೆ ತರುವದು ಸತ್‌ಸಂಪ್ರದಾಯ.ಜಡೇಗೌಡರ ಮನೆಯಲ್ಲಿಯೇ ಪೂಜಾದಿಗಳನ್ನು ತೀರಿಸಿಕೊಂಡು ಬಂದ ಗವಿಸಿದ್ದೇಶ್ವರನನ್ನು ಪುನಃ ಆ ಮನೆಯಿಂದಲೇ ಆಮಂತ್ರಿಸುವ ಹಾಗೂ ಕರೆತರುವ ಹಿನ್ನಲೆಯು ಇದರಲ್ಲಿ ಅಳವಟ್ಟಿದೆ.

ದೇವಿಗೆ ಉಡಿ ತುಂಬುವ ಕಾರ್ಯಕ್ರಮ:

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಪ್ರತಿವರ್ಷದಂತೆ ಇಂದು ಸಹ ಶ್ರೀಗವಿಮಠದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ಸಾಯಂಕಾಲ ಜರುಗಿತು. ಈ ಕಾರ್ಯಕ್ರಮದಲ್ಲಿ ಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಉಡಿತುಂಬುವ ಕಾರ್ಯದಲ್ಲಿ ಸಕ್ರೀಯವಾಗಿ ಎಲ್ಲ ತಾಯಂದಿರು ಭಾಗವಹಿಸಿದ್ದರು. ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬಿನ ಹಂದರ ಹಾಕಿ ಅಲಂಕರಿಸಲಾಗಿತ್ತು ಮತ್ತು ಹೋಳಿಗೆ ಸಜ್ಜಕದ ನೈವೇದ್ಯ ಅರ್ಪಣೆಯಾಯಿತು. ಆಗಮಿಸಿದ ಎಲ್ಲ ತಾಯಂದಿರಿಗೂ ಮಂಗಳಕರವಾದ ಬಾಗೀನ ಕೊಡುವ ಮೂಲಕ ಉಡಿತುಂಬುವ ಕಾಯಕವನ್ನು ಪರಸ್ಪರರು ನಡೆಸಿಕೊಟ್ಟರು. ಕೊಪ್ಪಳ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಸಹಸ್ರಾರು ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು. ಶ್ರೀ ಅನ್ನಪೂರ್ಣೇಶ್ವರಿಗೆ ಹಾಗೂ ಎಲ್ಲ ತಾಯಂದಿರಿಗೂ ಉಡಿತುಂಬುವ ಮೂಲಕ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ, ಮಂಗಳಕರವಾಗಿ ಸಾಗಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಇದರ ಜೊತೆಗೆ ತಮ್ಮ ತಮ್ಮ ಇಷ್ಟಾರ್ಥಗಳ ಶೀಘ್ರ ಈಡೇರಿಕೆಯಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪವನ್ನು ತಂದುಕೊಂಡು ಅಂದು ಎಲ್ಲ ತಾಯಂದಿರು ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಈ ಮೂಲಕ ಹರಕೆ ಮಾಡಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಮಹೇಶ್ವರ ದೇವಸ್ಥಾನದ ಅಕ್ಕನ ಬಳಗದವರು, ಪ್ಯಾಟಿ ಈಶ್ವರ ದೇವಸ್ಥಾನದ ಅಕ್ಕನ ಬಳಗದವರು, ಮೊದಲಾದ ಮಹಿಳಾ ಬಳಗದವರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳಾ ಭಕ್ತರಿಗೆ ಶ್ರೀಮಠದಿಂದ ಅವರವರ ಮನೆಗೆ ತೆರಳಲು ಅನೂಕುಲವಾಗಲಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಮುದ್ದಾಬಳ್ಳಿ- ಮಂಗಳಾಪುರ ಭಕ್ತರಿಂದ ಮೂರ್ತಿ ಕಳಸವು ಹಲಗೇರಿಯಿಂದ ಶ್ರೀಮಠಕ್ಕೆ ಆಗಮನ:

ಕೊಪ್ಪಳ: ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮುನ್ನಾ ಪ್ರತಿವರ್ಷದ ಸಂಪ್ರದಾಯದಂತೆ ಸಾಯಂಕಾಲ ೬ ಗಂಟೆಗೆ ಹಲಗೇರಿ ಗ್ರಾಮದ ಸದ್ಭಕ್ತರಾದ ಲಿಂ.ಶ್ರೀ ವೀರನಗೌಡರು ಪಾಟೀಲ ಮತ್ತು ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಪಾಟೀಲರ ಮನೆಯಿಂದ ಶ್ರೀ ಗವಿಸಿದ್ಧೇಶ್ವರ ರಥದ ಮೇಲಿನ ಕಳಸವು ಸಹಸ್ರಾರು ಭಕ್ತರಾದಿಯಾಗಿ ಕೊಪ್ಪಳದ ಗವಿಮಠಕ್ಕೆ ಬಂದಿತು. ಈ ಮೆರವಣಿಗೆಯಲ್ಲಿ ಹಲಗೇರಿ ಗ್ರಾಮದ ಸದ್ಭಕ್ತರು ಹಾಗೂ ಗೌಡರ ಮನೆತನದವರು ಭಾಗವಹಿಸಿದ್ದರು. ಇದೇ ದಿವಸ ಮುದ್ದಾಬಳ್ಳಿ- ಮಂಗಳಾಪುರ ಭಕ್ತರಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯು ಮೆರವಣಿಗೆಯಿಂದ ಹೊರಟು ಮಾರ್ಗ ಮಧ್ಯದಲ್ಲಿ ಕಳಸೋತ್ಸವ ಹಾಗೂ ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಕೂಡಿಕೊಂಡು ಗವಿಮಠಕ್ಕೆ ಬಂದಿತು.ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಈ ಮಹತ್ತರ ಕಾಂiiಕ್ರಮಕ್ಕೆ ಇಂದು ಸಹಸ್ರಾರು ಜನರು ಸಾಕ್ಷಿಯಾದರು.

Please follow and like us:
error