ಶ್ರೀಗವಿಮಠದ ಜಾತ್ರಾ ಮಹೋತ್ಸವ : ನಾಳೆ ದಿನಾಂಕ ೨೬ ರಂದು ಬಸವ ಪಟ ಆರೋಹಣ ಕಾರ್ಯಕ್ರಮ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ ದಿನಾಂಕ ೨೬-೦೧-೨೦೨೧ ರಂದು ಮಂಗಳವಾರ ಸಂಜೆ ೪.೩೦ ಗಂಟೆಗೆ ‘ಬಸವ ಪಟ ಆರೋಹಣ’ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಶ್ರೀಗವಿಮಠದ ಜಾತ್ರಾ ಪರಂಪರೆಯಲ್ಲಿ ಬಸವಪಟ ಆರೋಹಣದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಗುವದು. ಬಸವಪಟದಲ್ಲಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರ, ಗಿಡ-ಮರ, ಬಳ್ಳಿ ಮುಂತಾದ ಪ್ರಕೃತಿಯ ಚಿತ್ರಣಗಳನ್ನು ಅಳವಡಿಸಿರುವ ಬಸವಪಟಕ್ಕೆ ವಿಧಿ-ವಿಧಾನವಾಗಿ ಭಕ್ತರು ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ ೫ ಸುತ್ತ ಪ್ರದಕ್ಷಿಣೆ ಹಾಕುತ್ತಾ ಶ್ರೀಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಶ್ರೀ ಗವಿಮಠದ ಕರ್ತೃ ಗದ್ದುಗೆಯ ದ್ವಾರ ಬಾಗಿಲಿನ ಎದುರಿಗಿರುವ ಶಿಲಾಸ್ತಂಭಕ್ಕೆ ಕಂಭಕ್ಕೆ ಬಸವ ಪಟ ಕಟ್ಟುವರು.
. ಬಸವಪಟ ಆರೋಹಣ ಮಾಡುವ ಉದ್ಧೇಶವೇನೆಂದರೆ- ನಮ್ಮದು ಕೃಷಿ ಪ್ರಧಾನ ನಾಡು. ಆ ಕಾರಣಕ್ಕಾಗಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪೃಕೃತಿಗಳಂತಹ ಪಂಚಮಹಾಭೂತಗಳಿಗೂ ಪೂಜೆ ಸಲ್ಲಿಸುವದು ನಮ್ಮ ಆಧ್ಯ ಕರ್ತವ್ಯವಾಗಿದೆ. ಶ್ರೀಗವೀಶನ ಈ ನಾಡಿನಲ್ಲಿ ವರ್ಷ ಪೂರ್ತಿಯಾಗಿ ಉತ್ತಮ ಮಳೆ, ಉತ್ತಮ ಬೆಳೆ ಬಂದು ರೈತಾಪಿ ವರ್ಗಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾ ದೊರೆಯಲೆಂಬ ಆಶಯ ಒಂದೆಡೆಯಾದರೆ ಜೊತೆಗೆ ಅದರಲ್ಲಿ ಆಧ್ಯಾತ್ಮದ ಅನುಸಂಧಾನವು ಅಳವಟ್ಟಿದೆ. ಆ ಹಿನ್ನೆಲೆಯಲ್ಲಿ ‘ಬಸವ ಪಟ ಆರೋಹಣ’ ಕಾರ್ಯಕ್ರಮವು ಪರಂಪರಾಗತವಾಗಿ ಜರುಗುತ್ತಾ ಬಂದಿದೆ.

.ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರಾಮಹೋತ್ಸವದ ಅಂಗವಾಗಿ ನಾಳೆ ದಿನಾಂಕ ೨೬ ರಂದು ಮಂಗಳವಾರ ಸಂಜೆ ೫ ಕ್ಕೆ ಶ್ರೀಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ಜರುಗಲಿದೆ. ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬಿನಗಳ, ತಳಿರು ತೋರಣಗಳಿಂದ ಅಲಂಕೃತಗೊಂಡ ಹಂದರವನ್ನು ನಿರ್ಮಿಸಿರುತ್ತಾರೆ. ದೇವಿಗೆ ಸೇವಂತಿಗೆ, ಮಲ್ಲಿಗೆ, ಜಾಜಿ, ಸಂಪಿಗೆ ಬಗೆಬಗೆಯ ಹೂವುಗಳಿಂದ ಅಲಂಕೃತಗೊಳಿಸಿರುತ್ತಾರೆ. ಹೋಳಿಗೆ ಪಾಯಸ ಹಾಗೂ ವೈವಿಧ್ಯಮಯವಾದ ಪಂಚ ಪಕ್ವಾನ್ನಗಳ ಪ್ರಸಾದವನ್ನು ನೈವೇದ್ಯ ಮುಖಾಂತರ ಅರ್ಪಿಸುವರು. ವೀಳ್ಯೆದೆಲೆ, ಅಡಿಕೆ, ಅಕ್ಕಿ, ಕೊಬ್ಬರಿ ಬಟ್ಟಲು , ಅರಿಷಣಕೊಂಬು, ಉತ್ತತ್ತಿ ,ಹಸಿರುಬಳೆ, ಖಣ.ಹಣ್ಣು ಹಂಪಲಗಳ ಮುಖೇನ ದೇವಿಗೆ ಉಡಿತುಂಬುವರು. ನಂತರ ಆಗಮಿಸಿದ ಎಲ್ಲ ತಾಯಂದಿರಿಗೂ ಮಂಗಳಕರ ದ್ರವ್ಯಗಳನ್ನು ಪರಸ್ಪರ ಉಡಿತುಂಬಿಕೊಳ್ಳುವರು.

ಪಂಚಕಳಸದ ಗದ್ದುಗೆಗೆ ಪಂಚ ಕಳಸೋತ್ಸವ

ಕೊಪ್ಪಳ: ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ ದಿನಾಂಕ ೨೬ ರಂದು ಮಂಗಳವಾರ ಸಂಜೆ ೪.೨೦ ಕ್ಕೆ ಪಂಚ ಕಳಸೋತ್ಸವ ಕಾರ್ಯಕ್ರಮ ಪ್ರತಿವರ್ಷದಂತೆ ಗವಿಮಠದಲ್ಲಿ ಜರುಗವುದು. ಒಂದನೇಯದು ಕೊಪ್ಪಳದ ಬನ್ನಿಕಟ್ಟಿ ಭಾಗದ್ದು ಶ್ರೀ ಗೌರಿಶಂಕರ ದೇವಸ್ಥಾನದಿಂದ, ಎರಡನೆಯದು ವಿ.ಕೆ. ಸಜ್ಜನರ ಮನೆಯಿಂದ, ಮೂರನೆಯದು ಪಲ್ಲೇದವರ ಓಣಿಯ ಶ್ರೀ ಬಸವೇಶ್ವರ ದೇವಸ್ಥಾನದ ದೈವದವರಿಂದ, ನಾಲ್ಕನೆಯದು ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದ ದೈವದವರಿಂದ ಹಾಗೂ ಐದನೆಯದು ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದ ದೈವದವರಿಂದ ಗವಿಮಠಕ್ಕೆ ಭಜನಾ ಮೆರವಣಿಗೆಯೊಂದಿಗೆ ಪಂಚಕಳಸಗಳು ಆಗಮಿಸುತ್ತವೆ. ಈ ಪಂಚಕಳಸಗಳನ್ನು ಕರ್ತೃ ಗದ್ದುಗೆಯ ಮುಂಭಾಗದ ಪೀಠದಲ್ಲಿ ಸಾಲಂಕೃತಗೊಳಿಸಿ ವಿಧಿ ವಿಧಾನಗಳ ಮೂಲಕ ಪೂಜೆಗೈದು ಮಂಗಳಾರತಿ ಗೈಯುವರು. ನಂತರ ಕರ್ತೃ ಗದ್ದುಗೆ ಸುತ್ತಲೂ ಕಳಸದೊಂದಿಗೆ ಪ್ರದಕ್ಷಿಣೆಗೈದು ಕರ್ತೃಗದ್ದುಗೆಯ ಗೋಪುರಕ್ಕೆ ಕಳಸಾರೋಹಣ ನೆರವೇರಿಸುತ್ತಾರೆ.

ದವಸ ಧಾನ್ಯ ಅರ್ಪಣೆ
ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀಗವಿಮಠಕ್ಕೆ ಕಾಸನಕಂಡಿ, ಮಸ್ಟೂರು, ಮಾಟಲದಿನ್ನಿ, ಮುತ್ತಾಳ, ಚಿಲವಾಡ್ಗಿ, ಚಿಲಕಮುಕಿ, ಗುನ್ನಾಳ, ಬೆನ್ನೂರು, ಗುಳದಳ್ಳಿ, ಬಳಿಗೇರಿ, ವಣಗೇರಿ, ಹುಚ್ಚಿರೇಶ್ವರ ಕ್ಯಾಂಪ್, ರಾಯಚೂರಿನ ಏಕದಂತ ಯುವಕ ಮಂಡಳಿ ಹಾಗೂ ಕೊಪ್ಪಳ ನಗರದ,ಸುತ್ತ ಮುತ್ತಲಿನ ಗ್ರಾಮದ ಭಕ್ತರು ಭತ್ತ, ಜೋಳ, ಅಕ್ಕಿ, ಸಜ್ಜೆ ಮೊದಲಾದ ದವಸಧಾನ್ಯಗಳನ್ನು ಶ್ರೀಗವಿಮಠಕ್ಕೆ ಸಮರ್ಪಣೆ ಮಾಡಿದರು. ದಾನಿಗಳಿಗೆ ಪೂಜ ಶ್ರೀಗಳವರು ಆಶೀರ್ವದಿಸಿದರು.

Please follow and like us:
error